ನಿರ್ಬಂಧದ ಬದುಕು; ಕರೊನಾ ಅಪಾಯ ಮುಗಿದಿಲ್ಲ..

Editorial
Published on

ಕರೊನಾ ಮೂರನೆಯ ಅಲೆಯ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಕೆಲ ತಜ್ಞರ ಪ್ರಕಾರ, ಮೂರನೆಯ ಅಲೆ ಬಂದರೂ, ಮೊದಲನೆಯ ಮತ್ತು ಎರಡನೆಯ ಅಲೆಯಷ್ಟು ತೀವ್ರವಾಗಿರುವುದಿಲ್ಲ ಮತ್ತು ಮಕ್ಕಳ ಮೇಲೆ ಅಂಥ ಭಾರಿ ಪರಿಣಾಮವನ್ನು ಬೀರುವುದಿಲ್ಲ. ಇನ್ನು ಕೆಲವರ ಪ್ರಕಾರ, ಮೂರನೆಯ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ. ಮತ್ತೆ ಕೆಲವರು ಹೇಳುವ ಪ್ರಕಾರ, ಮೂರನೆಯ ಅಲೆ ಅದಾಗಲೇ ಬಂದಿದೆ. ಇದೇನೇ ಇದ್ದರೂ, ಸರ್ಕಾರಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಯಾವುದೇ ಸನ್ನಿವೇಶ ಎದುರಿಸಲು ಸಜ್ಜಾಗಿರಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ವಿಶೇಷವಾಗಿ ಮಕ್ಕಳಿಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡಿರುವುದು ಗಮನಾರ್ಹ. ಕೋವಿಡ್ ರೋಗಲಕ್ಷಣ ಹೊಂದಿರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಿದ್ಧತೆ, ರಾಜ್ಯದ ಬೇರೆ ಬೇರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಯು, ವೆಂಟಿಲೇಟರ್ ಹಾಸಿಗೆ ಸಹಿತ ಅಗತ್ಯ ಚಿಕಿತ್ಸೆಗೆ ಸಜ್ಜು, ಮಕ್ಕಳಲ್ಲಿ ಕೋವಿಡ್ ದುಷ್ಪರಿಣಾಮ ತಡೆಗಟ್ಟಲು ಅಪೌಷ್ಟಿಕತೆ ಸಮಸ್ಯೆ ಹೊಂದಿರುವವರನ್ನು ಗುರುತಿಸಿ ಪೌಷ್ಟಿಕಾಂಶ ಲಭಿಸುವಂತೆ ಮಾಡುವುದು- ಮುಂತಾದ ಅಂಶಗಳು ಈ ಕ್ರಿಯಾಯೋಜನೆಯಲ್ಲಿವೆ.

ಮತ್ತೊಂದೆಡೆ, ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ಕೋವಿಡ್ ಹರಡುವಿಕೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಹಬ್ಬಗಳ ಸಾರ್ವಜನಿಕ ಆಚರಣೆಯನ್ನು ನಿಷೇಧಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಹಬ್ಬಗಳು ಬದುಕಿನ ಸಂಭ್ರಮದ ಕ್ಷಣಗಳ ಜತೆಗೆ, ಆರ್ಥಿಕ ಆಯಾಮವೂ ಬೆಸೆದುಕೊಂಡಿರುವುದರಿಂದ, ಸಾರ್ವಜನಿಕ ಆಚರಣೆಗೆ ನಿರ್ಬಂಧ ಜನರಲ್ಲಿ ಸಹಜವಾಗಿಯೇ ಬೇಸರ ತರಿಸುತ್ತದೆ. ಗಣೇಶೋತ್ಸವ ಆಚರಣೆಯನ್ನೇ ತೆಗೆದುಕೊಂಡರೆ, ದೇಶದ ಬಹುತೇಕ ಭಾಗಗಳಲ್ಲಿ ಈ ಸಂಭ್ರಮ ಗರಿಗೆದರುವ ಜತೆಗೆ, ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳ ವ್ಯವಹಾರ ನಡೆಯುತ್ತದೆ. ಲಕ್ಷಾಂತರ ಜನರು ಇದರಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಆದರೆ, ಸರ್ಕಾರದ ಇಕ್ಕಟ್ಟುಗಳೇ ಬೇರೆ. ಒಂದೊಮ್ಮೆ ಸಾರ್ವಜನಿಕ ಆಚರಣೆ ಸಮಯದಲ್ಲಿ ಕರೊನಾ ಉಲ್ಬಣಗೊಂಡುಬಿಟ್ಟರೆ ಆಗ ಸರ್ಕಾರಕ್ಕೇ ಕೆಟ್ಟ ಹೆಸರು.

ಹೀಗಾಗಿ, ಎರಡನೆಯ ಅಲೆಯ ಅನುಭವದ ಹಿನ್ನೆಲೆಯಲ್ಲಿ ಯಾರೂ ಚಾನ್ಸ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಆದ್ದರಿಂದ ಕಾಲಕಾಲಕ್ಕೆ ನಿರ್ಬಂಧದ ಆದೇಶಗಳನ್ನು ಹೊರಡಿಸುತ್ತವೆ. ಇದಲ್ಲದೆ, ಕರೊನಾ ಕುರಿತ ಅಂತಾರಾಷ್ಟ್ರೀಯ ಅಧ್ಯಯನಗಳು ಸಹ, ಇದೊಂದು ದೀರ್ಘಕಾಲೀನ ಸಾಂಕ್ರಾಮಿಕವಾಗಿ ಕಾಡಬಹುದು ಎಂದೇ ಹೇಳುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ, ಕೋವಿಡ್​ನಿಂದ ಗುಣಹೊಂದಿದವರಲ್ಲಿ ಸಹ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಕೋವಿಡ್ ಎನ್ನುವುದು ಬಾಲ್ಯದಲ್ಲೇ ಕಾಡುವ ಕಾಯಿಲೆ ಆಗಬಹುದು ಎಂದು ಒಂದು ಅಧ್ಯಯನ ಹೇಳಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಹೀಗಾಗಿ, ಸರ್ಕಾರದ ಸಲಹೆಸೂಚನೆಗಳ ಜತೆಗೆ, ಜನರು ಸ್ವಯಂ ಆಗಿ ಕೆಲ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net