

ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಹಲವಾರು ಕಾನೂನುಗಳಿವೆ. ಸಮಾಜದಲ್ಲಿ ಮಹಿಳೆ ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬಾರದು, ಅಸುರಕ್ಷತೆಯ ಭಾವ ಅನುಭವಿಸಬಾರದು ಎಂಬ ಕಾರಣಕ್ಕೆ ಕಾನೂನಿನ ಬೆಂಬಲ ಇರುವುದೇನೋ ಸರಿ. ಆದರೆ, ಇಂಥ ಕಾನೂನುಗಳ ಔಚಿತ್ಯ, ಆಶಯ, ಪರಿಣಾಮಗಳನ್ನು ತಿಳಿದುಕೊಂಡು, ವಿವೇಚನೆಯ ಹೆಜ್ಜೆ ಇರಿಸುವುದು ಅಷ್ಟೇ ಅಗತ್ಯ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳದ ಆರೋಪಗಳು ಬಹು ಸಾಮಾನ್ಯವಾಗಿ ಬಿಟ್ಟಿವೆ. ಪತಿ-ಪತ್ನಿಯ ಮಧ್ಯೆ ಕಲಹ ನಡೆದು, ಅದು ಸ್ವಲ್ಪ ವಿಕೋಪಕ್ಕೆ ಹೋದರೆ ಅದಕ್ಕೆ ‘ವರದಕ್ಷಿಣೆ ಕಿರುಕುಳ’ದ ರೂಪ ಕೊಟ್ಟು, ಪ್ರಕರಣ ದಾಖಲಿಸುವ ಚಾಳಿ ಬೆಳೆದಿದ್ದು, ಸಾಮಾಜಿಕ ಸ್ವಾಸ್ಥ್ಯದ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. ಪತಿ-ಪತ್ನಿ ಪ್ರಕರಣದಲ್ಲಾದರೆ ನ್ಯಾಯಾಲಯ ಸತ್ಯಾಂಶವನ್ನು ಆಧರಿಸಿ, ಸಾಕ್ಷ್ಯಗಳನ್ನು ಪರಿಗಣಿಸಿ ತೀರ್ಪು ನೀಡುತ್ತದೆ. ಆದರೆ, ಎಷ್ಟೋ ಮಹಿಳೆಯರು ಗಂಡನ ಜತೆಗಿನ ವಿರಸದ ದ್ವೇಷವನ್ನು ವರದಕ್ಷಿಣೆ ಕಿರುಕುಳದ ಪ್ರಕರಣವಾಗಿ ಬದಲಿಸುತ್ತಿದ್ದು, ಇದರಲ್ಲಿ ಪತಿ ಮಾತ್ರವಲ್ಲದೆ, ಅತ್ತೆ-ಮಾವ, ನಾದಿನಿ ಸೇರಿ ಗಂಡನ ಮನೆಯ ಇತರ ಸಂಬಂಧಿಕರನ್ನೂ ಎಳೆದು ತರಲಾಗುತ್ತದೆ. ಏನೂ ತಪು್ಪ ಮಾಡದಿದ್ದರೂ ತಮ್ಮ ಮೇಲೆ ಅಪರಾಧಿಕ ಪ್ರಕರಣಗಳು ದಾಖಲಾದಾಗ ಎಷ್ಟೋ ಜನ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಮರ್ಯಾದೆಗೆ ಹೆದರಿ ಮುಂದೇನು ಎಂದು ಧೃತಿಗೆಡುತ್ತಾರೆ.
ದೂರುದಾರ ಪತ್ನಿಯ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಮತ್ತು ಕಿರುಕುಳ ನೀಡದ ಪತಿಯ ಕುಟುಂಬದ ಸದಸ್ಯರು ಕ್ರಿಮಿನಲ್ ವಿಚಾರಣೆ ಎದುರಿಸುವ ಅಗತ್ಯ ಇಲ್ಲವೆಂದು ಸುಪ್ರೀಂ ಕೋರ್ಟ್ ಸೇರಿ ಹಲವು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಆದರೂ, ಪತಿಯ ಕುಟುಂಬದ ಸದಸ್ಯರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವ ಘಟನೆಗಳು ಕಡಿಮೆಯಾಗುತ್ತಿಲ್ಲ. ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿ ‘ದಂಪತಿ ಕಲಹದಲ್ಲಿ ಕುಟುಂಬವನ್ನು ಎಳೆದು ತರಬೇಡಿ’ ಎಂದು ಸೂಚಿಸಿರುವ ಕರ್ನಾಟಕ ಹೈಕೋರ್ಟ್, ಸೋಮವಾರ ಪತಿಯ ಕುಟುಂಬ ಸದಸ್ಯರ (ಅತ್ತೆ-ಮಾವ, ನಾದಿನಿ) ಮೇಲಿನ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿದೆ. ಆಂಧ್ರಪ್ರದೇಶದ ಅನಂತಪುರ ವಾಸಿಗಳಾದ ದಂಪತಿ (ದೂರದಾರ ಮಹಿಳೆಯ ಅತ್ತೆ-ಮಾವ) ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸುವುದು ನ್ಯಾಯದಾನದ ದುರುಪಯೋಗವಾಗುತ್ತದೆ ಎಂದು ಹೇಳಿದೆ. ಬೇರೆ-ಬೇರೆ ಪ್ರಕರಣಗಳ ಸಂದರ್ಭದಲ್ಲಿ ಇತರ ನ್ಯಾಯಾಲಯಗಳು ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ.
ಉತ್ತಮ ಆಶಯ ಹಾಗೂ ಮಹಿಳೆಯ ರಕ್ಷಣೆ ನಿಟ್ಟಿನಲ್ಲಿ ರೂಪಿಸಲ್ಪಟ್ಟ ಕಾನೂನುಗಳು ಕೆಲ ಮಹಿಳೆಯರಿಂದಲೇ ಅಥವಾ ಸ್ವಾರ್ಥ ಬುದ್ಧಿಯವರಿಂದಲೇ ದುರುಪಯೋಗವಾದರೆ ಅದರಿಂದ ಸಮಾಜಕ್ಕೆ ತಪು್ಪಸಂದೇಶ ರವಾನೆಯಾಗುತ್ತದೆ. ಹಾಗಾಗಿ, ದೂರುದಾರರು ದೂರು ದಾಖಲಿಸುವ ಮುನ್ನವೇ ವಿವೇಚನೆಯಿಂದ ನಿರ್ಣಯ ಕೈಗೊಳ್ಳಬೇಕು. ನಿಜಕ್ಕೂ ಗಂಡನ ಮನೆಯವರು ಕಿರುಕುಳ ನೀಡಿದ್ದಲ್ಲಿ ಮತ್ತು ಆ ಕುರಿತು ಸಾಕ್ಷ್ಯ ಇದ್ದಲ್ಲಿ ದೂರು ನೀಡಿ, ಪ್ರಕರಣ ದಾಖಲಿಸಲು ಆಗ್ರಹಿಸಲಿ. ಆದರೆ, ಗಂಡನ ಅಥವಾ ಯಾರದೋ ಮೇಲಿನ ಕೋಪಕ್ಕೆ ಕಾನೂನಿನ ಜತೆ ಹುಡುಗಾಟಿಕೆ ಸಲ್ಲದು.