ಅಶಾಂತ ಕಾಶ್ಮೀರ; ಭಯೋತ್ಪಾದಕ ಕೃತ್ಯಗಳ ಹೆಚ್ಚಳ ಕಳವಳಕಾರಿ..

Editorial
Published on

ಕಳೆದ ಕೆಲ ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದವು. ಗುಪ್ತಚರದ ಖಚಿತ ಮಾಹಿತಿ, ಭದ್ರತಾ ಪಡೆಗಳ ದಿಟ್ಟ ಕಾರ್ಯಾಚರಣೆ, ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರದ ಕ್ರಮಗಳು ಹೀಗೆ ಹಲವು ಪ್ರಯತ್ನಗಳು ಫಲ ನೀಡಿದವು. ಅದರಲ್ಲೂ, ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ಎರಡು ವರ್ಷದ ಹಿಂದೆ ಕೇಂದ್ರ ಹಿಂಪಡೆದು, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕ ಅಭಿವೃದ್ಧಿಯ ಬೆಳಕು ಕಾಣಿಸತೊಡಗಿತು. ಗಡಿಯಿಂದ ಭಯೋತ್ಪಾದಕರ ನುಸುಳುವಿಕೆ ಪ್ರಮಾಣ ಕಡಿಮೆ ಆಯಿತಲ್ಲದೆ, ಎನ್​ಕೌಂಟರ್​ನಲ್ಲಿ ಉಗ್ರ ಸಂಘಟನೆಗಳ ಹಲವು ಮುಖಂಡರು, ಕಮಾಂಡರ್​ಗಳು ಹತರಾದರು. ಏಳು ದಶಕದ ಶಾಪ ಇನ್ನೇನು ಮುಕ್ತಾಯವಾಗಿ, ಜಮ್ಮು-ಕಾಶ್ಮೀರ ಪ್ರಗತಿಯ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಮೂಡಿದ ಬೆನ್ನಲ್ಲೇ, ಮತ್ತೆ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವುದು ಕಳವಳಕಾರಿ.

ಸೇನಾ ನೆಲೆಗಳನ್ನು, ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದ ಉಗ್ರ ಸಂಘಟನೆಗಳು ಈಗ ನಾಗರಿಕರನ್ನು ಕೊಲ್ಲುವ ಮೂಲಕ, ಆತಂಕ ಸೃಷ್ಟಿಸಲು ಯತ್ನಿಸುತ್ತಿವೆ. ಇತ್ತೀಚೆಗಷ್ಟೇ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಓರ್ವ ಶಿಕ್ಷಕ ಉಗ್ರರ ದಾಳಿಗೆ ಬಲಿಯಾದರು. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತಲ್ಲದೆ, ಹಲವು ದಶಕಗಳ ಬಳಿಕ ಮನೆಗಳತ್ತ ಮರಳುತ್ತಿದ್ದ ಕಾಶ್ಮೀರಿ ಪಂಡಿತರಲ್ಲಿ ಭೀತಿ ಮೂಡಿಸಿತು. ಸೋಮವಾರ ಪೂಂಛ್ ಜಿಲ್ಲೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಇನ್ನೆರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ‘ಕಾಶ್ಮೀರದಲ್ಲಿರುವ ಅನೇಕ ಸ್ಲೀಪರ್ ಸೆಲ್​ಗಳನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಕ್ರಿಯಗೊಳಿಸುತ್ತಿವೆ, ಸುರಂಗ ಕೊರೆದು ಗಡಿ ಪ್ರವೇಶಿಸಲು ಉಗ್ರರು ಯತ್ನಿಸುತ್ತಿದ್ದಾರೆ’ ಎಂಬ ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.

ಅಪ್ಘಾನಿಸ್ತಾನವನ್ನು ತಾಲಿಬಾನ ಉಗ್ರರು ಕೈವಶ ಪಡಿಸಿಕೊಂಡ ಬಳಿಕ ಭಾರತಕ್ಕೆ ಭಯೋತ್ಪಾದನೆ ರಫ್ತು ಹೆಚ್ಚುವ ಆತಂಕ ಎದುರಾಗಿದೆ. ಏಕೆಂದರೆ, ಅಫ್ಘನ್​ನಲ್ಲಿ ಹಲವು ಕುಖ್ಯಾತ ಭಯೋತ್ಪಾದಕ ಸಂಘಟನೆಗಳು ಪಾಕ್ ಬೆಂಬಲದಿಂದ ವಿಧ್ವಂಸಕಾರಿ ಕೃತ್ಯಗಳಿಗೆ ಯೋಜನೆ ರೂಪಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ತಾಲಿಬಾನ್ ಮುಖಂಡರ ಭಾರತವಿರೋಧಿ ಹೇಳಿಕೆಗಳೂ ಇದಕ್ಕೆ ಸಾಕ್ಷಿ. ಭಯೋತ್ಪಾದನೆ ವಿರುದ್ಧ ‘ಸೀಮಿತ ಸಮರ’ ಈ ಸಮಸ್ಯೆಗೆ ಮದ್ದಾಗಲಾರದು ಎಂಬುದನ್ನು ಅಂತಾರಾಷ್ಟ್ರೀಯ ವಲಯ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಿದೆ. ಭಾರತ ಹಲವು ದಶಕಗಳಿಂದ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನದ ಮುಖವಾಡವನ್ನು ಕಿತ್ತೆಸೆದು ಅಂತಾರಾಷ್ಟ್ರೀಯ ವಲಯದಲ್ಲೇ ವಾಸ್ತವವನ್ನು ಅನಾವರಣಗೊಳಿಸಿದೆ. ಹೊಸ ವಿಧಾನ, ತಂತ್ರಗಳ ಮೂಲಕ ಉಗ್ರರು ಕಾರ್ಯಾಚರಿಸುತ್ತಿದ್ದು, ಅವರ ಹೆಡೆಮುರಿ ಕಟ್ಟಲು ಸಂಘಟಿತ ಹೋರಾಟದ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net