ಸಮರ್ಪಕ ಜಾರಿ ಅಗತ್ಯ; ಕಂದಾಯ ಇಲಾಖೆಯ ಸೇವೆಗಳು ಮನೆಬಾಗಿಲಿಗೆ

Editorial
Published on

ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದೇನೋ ನಿಜ. ಆದರೆ, ಅಧಿಕಾರಶಾಹಿಯ ನಿರ್ಲಕ್ಷ್ಯ ಹಾಗೂ ಅನುಷ್ಠಾನದಲ್ಲಿನ ತೊಡಕುಗಳ ಕಾರಣ ಇಂಥ ಸುಧಾರಣಾಕ್ರಮಗಳು ನಿರೀಕ್ಷೆಯಂತೆ ಸಾಕಾರಗೊಳ್ಳುವುದೇ ಇಲ್ಲ ಎಂಬುದು ವಿಷಾದನೀಯ ಸಂಗತಿ. ಅದೇನಿದ್ದರೂ, ಹಳ್ಳಿಗಳಲ್ಲಿ ಸರ್ಕಾರದ ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಆರಂಭಿಸಲಾದ ‘ಗ್ರಾಮ ಒನ್’ ಕೇಂದ್ರಗಳಿಂದ ಜನರು ಸರಳವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಿದೆ. ಈ ಯಶಸ್ಸನ್ನು ಗಮನಿಸಿಯೇ ಗ್ರಾಮ ಒನ್ ಕೇಂದ್ರಗಳನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಹಳ್ಳಿಗಳಿಗೆ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು, ಇತರ ಪ್ರಮಾಣಪತ್ರಗಳು ತಲುಪಬೇಕು ಎಂಬ ಉದ್ದೇಶದಿಂದ ಇದು ಒಳ್ಳೆಯ ನಡೆ. ಮೊದಲು ನಾಲ್ಕು ಜಿಲ್ಲೆಗಳಲ್ಲಿ ಆರಂಭವಾಗಿ, ಬಳಿಕ 12 ಜಿಲ್ಲೆಗಳಿಗೆ ವಿಸ್ತರಣೆಯಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸರ್ಕಾರದ ಯೋಜನೆಗಳು, ಸೌಲಭ್ಯಗಳು ದೊರೆಯುವಂತಾಗುವುದು ಆಡಳಿತ ಸುಧಾರಣೆಯ ಮಹತ್ವದ ಹೆಜ್ಜೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ಹಿಂದೆ ತಲೆದೋರಿರುವ ಪ್ರಾಯೋಗಿಕ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

ಅಂತೆಯೇ, ಕಂದಾಯ ಇಲಾಖೆಯ ದಾಖಲೆ/ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಿದ್ದಾರೆ. ‘ಭೂ ದಾಖಲೆಗಾಗಿ ರೈತರ ಅಲೆದಾಟ, ಸುತ್ತಾಟ ತಪ್ಪಿಸಲು ಪಹಣಿ ಸೇರಿ ನಾಲ್ಕು ದಾಖಲೆಗಳನ್ನು ಅವರ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದು ಕಂದಾಯ ಇಲಾಖೆ ಸಚಿವ ಆರ್.ಆಶೋಕ್ ಇತ್ತೀಚೆಗೆ ವಿಜಯವಾಣಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದರು. ರಾಜ್ಯದ 56 ಲಕ್ಷ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಅಗತ್ಯ ದಾಖಲೆಗಳನ್ನು ಪಡೆಯಲು ರೈತರು ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಅಲೆದಾಡಬೇಕಿದೆ. ಎಷ್ಟೋ ಕಡೆಯಂತೂ ಲಂಚ ನೀಡಿದರೆ ಮಾತ್ರ ದಾಖಲೆ ಒದಗಿಸುವ ಕೆಟ್ಟ ಪರಿಸ್ಥಿತಿ ಇದೆ. ಪರಿಣಾಮ, ಸರಿಯಾದ ದಾಖಲೆಗಳಿಲ್ಲದೆ ರೈತರು ಹಲವು ಬಗೆಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಇತರ ಜನಸಾಮಾನ್ಯರ ಸ್ಥಿತಿಯೇನೂ ಭಿನ್ನವಲ್ಲ. ಕಂದಾಯ ಇಲಾಖೆಯ ಹಳೆಯ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಲ್ಪಿಸಬೇಕು ಮತ್ತು ಅಲ್ಲಿನ ಆಡಳಿತಕ್ಕೆ ಹೊಸಸ್ಪರ್ಶ ನೀಡಬೇಕೆಂಬ ಬೇಡಿಕೆ ಇಂದು-ನಿನ್ನೆಯದೇನಲ್ಲ. ಹಲವು ಬಾರಿ ಸುಧಾರಣೆಯ ಆಶ್ವಾಸನೆ ಹೊಮ್ಮಿದೆಯಾದರೂ, ಅದು ಈಡೇರಿಲ್ಲ. ಈ ಬಾರಿಯಾದರೂ ಮತ್ತೆ ಅಂಥ ಸ್ಥಿತಿ ಸೃಷ್ಟಿಯಾಗಬಾರದು. ಇಲಾಖೆಗೆ ಕಾಯಕಲ್ಪ ನೀಡುವ, ಸೇವೆಗಳನ್ನು ಜನಸಾಮಾನ್ಯರವರೆಗೆ ಪರಿಣಾಮಕಾರಿಯಾಗಿ ತಲುಪಿಸುವ ಇಚ್ಛಾಶಕ್ತಿ ಪ್ರಕಟವಾಗಬೇಕಿದೆ. ಆ ದಾರಿಯಲ್ಲಿ ‘ಮನೆಬಾಗಿಲಿಗೆ ಸೇವೆ’ ಉತ್ತಮ ಪರಿಕಲ್ಪನೆಯಾಗಿದ್ದು, ಅನುಷ್ಠಾನದ ಹಂತದಲ್ಲಿ ಹಳಿ ತಪ್ಪಬಾರದು ಮತ್ತು ಇಂಥ ಸೌಲಭ್ಯಗಳ ಬಗ್ಗೆ ಗ್ರಾಮಗಳಲ್ಲಿ ವಿಶೇಷ ಅರಿವು ಮೂಡಿಸುವ ಕೆಲಸವೂ ಆಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net