

ಜಮೀನು, ನಿವೇಶನ, ಕಟ್ಟಡ ಖರೀದಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಎಷ್ಟೆಂಬುದನ್ನು ನಿಗದಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಲು ಅನುಮತಿ ಕೋರಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದರೆ, ಈಗಾಗಲೇ ಅಗತ್ಯ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಸಾರ್ವಜನಿಕರ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳನ್ನು ಹೆಚ್ಚು ಪಾವತಿಸುವ ಬಹುದೊಡ್ಡ ಹೊರೆ ಬೀಳುತ್ತದೆ. ಈಗಾಗಲೇ ಅವೈಜ್ಞಾನಿಕ ಮಾರ್ಗಸೂಚಿ ದರಗಳ ಕಾರಣದಿಂದಾಗಿ ಭೂಮಿ ಹಾಗೂ ನಿವೇಶನಕ್ಕೆ ಸಾಲ ಪಡೆದುಕೊಳ್ಳಲು ಪರದಾಡುತ್ತಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಲಿದೆ.
ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಭೂ ನೋಂದಣಿ ಪ್ರಮಾಣ ಕುಸಿದಿದ್ದರಿಂದ ರಾಜ್ಯದಲ್ಲಿ 2019ರ ನಂತರ ಮಾರ್ಗಸೂಚಿ ಬೆಲೆಗಳನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ, ಈಗ ಶೇಕಡಾ 20 ರಿಂದ 40 ರಷ್ಟು ಹೆಚ್ಚಳ ಮಾಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಡಲಾಗುತ್ತಿದ್ದು, ಶೇಕಡಾ 10ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಮಾರ್ಗಸೂಚಿ ಬೆಲೆ ಎಂಬುದು ಜಮೀನು, ನಿವೇಶನ, ಕಟ್ಟಡ ಖರೀಸಬೇಕಾದ ಸಂದರ್ಭದಲ್ಲಿ ಪಾವತಿಸಬೇಕಾದ ಕನಿಷ್ಠ ನೋಂದಣಿ ಶುಲ್ಕವನ್ನು ನಿಗದಿಪಡಿಸುವುದಾಗಿದೆ. ಮಾರ್ಗಸೂಚಿ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡಿದರೂ ಕೂಡ ಮಾರ್ಗಸೂಚಿ ಬೆಲೆ ಅನುಸಾರವೇ ಲೆಕ್ಕಹಾಕಿ ನೋಂದಣಿ ಶುಲ್ಕ ಪಾವತಿಸಲೇಬೇಕು. ಒಂದು ವೇಳೆ ಮಾರ್ಗಸೂಚಿ ಬೆಲೆಗಿಂತ ಹೆಚ್ಚಿನ ದರದಲ್ಲಿ ಖರೀದಿಸಿದರೆ, ಅದಕ್ಕೆ ಅನುಗುಣವಾಗಿ ಹೆಚ್ಚಿನ ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ. ಬ್ಯಾಂಕುಗಳು ಕೂಡ ಬಹುತೇಕವಾಗಿ ಮಾರ್ಗಸೂಚಿ ಬೆಲೆ ಅನುಸಾರವೇ ಸಾಲ ಸೌಲಭ್ಯ ಒದಗಿಸುತ್ತವೆ. ಆದರೆ, ಜಮೀನು ಮತ್ತು ನಿವೇಶನದ ವಿಷಯಕ್ಕೆ ಬಂದಾಗ ಮಾರುಕಟ್ಟೆ ಬೆಲೆಗಳು ಮಾರ್ಗಸೂಚಿ ಬೆಲೆಗಳಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಇರುತ್ತವೆ. ಹೀಗಾಗಿ, ಜಮೀನು ಮತ್ತು ನಿವೇಶನ ಖರೀದಿಸಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸಾಲ ಸೌಲಭ್ಯವು ದೊರೆಯುವ ಸಾಧ್ಯತೆಗಳು ವಿರಳ. ಇದನ್ನು ಸರಿಪಡಿಸಬೇಕಾದರೆ, ಮಾರ್ಗಸೂಚಿ ದರಗಳನ್ನು ವಾಸ್ತವ ಮಾರುಕಟ್ಟೆಯ ದರಗಳಿಗೆ ಹೊಂದಾಣಿಕೆಯಾಗುವಂತೆ ನಿಗದಿಸಬೇಕು ಹಾಗೂ ಖರೀದಿದಾರರಿಗೆ ಹೊರೆಯಾಗದಂತೆ ನೋಂದಣಿ ಶುಲ್ಕ ದರಗಳನ್ನು ತಗ್ಗಿಸಬೇಕು.
ಇನ್ನು ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಿದ ಮಾತ್ರಕ್ಕೆ ಸಂಪನ್ಮೂಲ ಕ್ರೋಡೀಕರಣ ಹೆಚ್ಚಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಲಾಗದು. ಕಳೆದೆರಡು ವರ್ಷ ಮಾರ್ಗಸೂಚಿ ಬೆಲೆ ಕಡಿಮೆ ಮಾಡಿದ್ದರೂ ನೋಂದಣಿ ಶುಲ್ಕವು ನಿರೀಕ್ಷೆಗಿಂತ ಒಂದೊಂದು ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹವಾಗಿದೆ ಎಂಬುದು ಗಮನಾರ್ಹ ವಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಬೆಲೆಯೇರಿಕೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರ್ಗಸೂಚಿ ಬೆಲೆ ಹೆಚ್ಚಳ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಬಾರದು. ಇದರಿಂದಾಗಿ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಿನ್ನಡೆಯಾಗಿ ಉದ್ದೇಶಿತ ಸಂಪನ್ಮೂಲ ಸಂಗ್ರಹಕ್ಕೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯಲಾಗದು. ಇದರ ಬದಲಾಗಿ, ಜಮೀನು, ನಿವೇಶನ ಖರೀದಿಗೆ ಅಗತ್ಯ ಪ್ರಮಾಣದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಶುಲ್ಕವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿದರೆ, ರಿಯಲ್ ಎಸ್ಟೇಟ್ ಉದ್ಯಮದ ವಹಿವಾಟು ಅಧಿಕಗೊಂಡು ಸಂಪನ್ಮೂಲ ಸಂಗ್ರಹವೂ ಹೆಚ್ಚಳ ಕಾಣುತ್ತದೆ.