

ಗ್ರಾಮೀಣ ಕರ್ನಾಟಕ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ, ಬೇಸಿಗೆ ಶುರುವಾಗುತ್ತಿದ್ದಂತೆ ಕುಡಿಯುವ ನೀರಿಗಾಗಿ ಪರದಾಟ ತಪ್ಪಿದ್ದಲ್ಲ. ಇದೇನು ಹೊಸ ಸಮಸ್ಯೆಯಲ್ಲ, ದಿಢೀರನೆ ಎದುರಾಗುವಂಥದ್ದೂ ಅಲ್ಲ. ಬೇಸಿಗೆ ಆರಂಭವಾಗುವ ಮುನ್ನವೇ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಲಭ್ಯ ಇರುವ ಜಲಮೂಲಗಳು, ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು, ಅಲ್ಲಿ ನೀರನ್ನು ತಲುಪಿಸುವ ವಿಧಾನ, ಅದಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲಗಳು ಈ ಎಲ್ಲ ಸಂಗತಿಗಳ ಬಗ್ಗೆ ಅವಲೋಕನ ನಡೆಸಬೇಕು. ಅದರ ಆಧಾರದ ಮೇಲೆ ಕಾರ್ಯಯೋಜನೆ ರೂಪಿಸಿ, ಕೆಲಸ ಮಾಡಿದರೆ ಪರಿಹಾರದ ದಾರಿಯೂ ಸುಗಮ.
‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದೆಂಬ ಕಾರಣಕ್ಕಾಗಿ ಕೆರೆ, ಕಲ್ಯಾಣಿಗಳನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಿದ್ದೇವೆ. ಈವರೆಗೆ ರಾಜ್ಯದಲ್ಲಿ 600 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಜಲಮೂಲಗಳ ಪುನಶ್ಚೇತನ ಮತ್ತು ಮಳೆನೀರಿನ ಸಂಗ್ರಹದಿಂದ ಮಾತ್ರ ನೀರಿನ ಬವಣೆ ನೀಗಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿರುವುದು ಉತ್ತಮ ಬೆಳವಣಿಗೆ. ಹಿಂದೆಲ್ಲ ಬಹುತೇಕ ಗ್ರಾಮಗಳಲ್ಲಿ, ದೇವಸ್ಥಾನಗಳ ಆವರಣದಲ್ಲಿ ಕಲ್ಯಾಣಿಗಳು ಇರುತ್ತಿದ್ದವು ಮತ್ತು ಇವು ಅಂತರ್ಜಲ ಬತ್ತದಂತೆ ಕಾಪಾಡಿದ್ದವು. ಆದರೆ, ಅತಿಯಾದ ಜನಸಂಖ್ಯೆ ಮತ್ತು ಜಲಸಂಪನ್ಮೂಲದ ಮಿತಿಯಿಲ್ಲದ ಬಳಕೆಯಿಂದಾಗಿ ಕಲ್ಯಾಣಿಗಳು, ಕೆರೆಗಳು ಕಣ್ಮರೆಯಾಗತೊಡಗಿದವು. ಪರಿಣಾಮ, ಜಲಸಮೃದ್ಧಿ ಹೊಂದಿದ್ದ ಪ್ರದೇಶಗಳೇ ನೀರಿನ ಸಮಸ್ಯೆಯಿಂದ ಬಳಲುವಂತಾದವು. ಈಗಲಾದರೂ ಸಮಸ್ಯೆಯ ಗಂಭೀರತೆ ಅರ್ಥಮಾಡಿಕೊಂಡು, ಪರಿಹಾರದ ದಾರಿಯಲ್ಲಿ ಸಾಗುತ್ತಿರುವುದು ಸಮಾಧಾನಕರ ಸಂಗತಿ.
2021ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಕನಿಷ್ಠ 20ರಿಂದ 100 ಹಳ್ಳಿಗಳು ಜಲಸಂಕಟ ಎದುರಿಸುತ್ತಿದ್ದವು. ಅಲ್ಲದೆ, ಜಲಮೂಲಗಳೇ ಇಲ್ಲದ ಗ್ರಾಮಗಳ ಸ್ಥಿತಿಯಂತೂ ಶೋಚನೀಯವಾಗಿತ್ತು. ಈಗಲೂ ಪರಿಸ್ಥಿತಿ ತುಂಬ ಬದಲಾಗಿಲ್ಲ. ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜಲಸಂಕಷ್ಟ ಹೆಚ್ಚಿನ ಪ್ರಮಾಣದಲ್ಲಿದೆ. ಜಲಸೆಲೆಗಳು ಬತ್ತಿ ಹೋಗಿರುವುದರಿಂದ ಪರ್ಯಾಯ ಮೂಲಗಳೂ ಕಾಣದಂತಾಗಿವೆ. ಹಾಗಾಗಿಯೇ, ನರೇಗಾ ಅಡಿ ಕೆರೆ ಮತ್ತು ಕಲ್ಯಾಣಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಪಾರದರ್ಶಕವಾಗಿ ಪೂರ್ಣಗೊಳಿಸಬೇಕು. ಮತ್ತಷ್ಟು ಕೆರೆ, ಕಲ್ಯಾಣಿಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ನೀರಿನ ಸಮಸ್ಯೆ ನಿವಾರಣೆಗೆ ಬರೀ ತಾತ್ಕಾಲಿಕ ಕ್ರಮಗಳಿಗೆ ಮುಂದಾಗದೆ, ಸಾಧ್ಯ ಇರುವೆಡೆಯಲ್ಲ ಶಾಶ್ವತ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ಪಾತ್ರ ತುಂಬ ಮುಖ್ಯ. ಏಕೆಂದರೆ, ಅವರಿಗೆ ಸಮಸ್ಯೆಯ ತೀವ್ರತೆ ಮತ್ತು ಯಾವೆಲ್ಲ ಗ್ರಾಮ, ಭಾಗಗಳಲ್ಲಿ ಸಮರೋಪಾದಿ ಕಾರ್ಯದ ಅಗತ್ಯವಿದೆ ಎಂಬುದರ ಅರಿವಿರುತ್ತದೆ. ಹೀಗಾಗಿ ಪ್ರತಿ ಬೇಸಿಗೆ ಬಂದಾಗ ಹಳ್ಳಿಗಳು ನೀರಿಗಾಗಿ ಪರಿತಪಿಸುತ್ತಿರುವ ಬವಣೆಯನ್ನು ತಪ್ಪಿಸಬೇಕು.
ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಿದಷ್ಟು ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹಾಗಾಗಿ, ನೀರನ್ನು ವಿವೇಚನೆಯಿಂದ ಬಳಸಬೇಕು. ಮಳೆ ನೀರು ಸಂಗ್ರಹವು ಜನಾಂದೋಲನವಾಗಬೇಕು. ಮಳೆಗಾಲ ಶುರುವಾಗುವುದಕ್ಕೂ ಮೊದಲು ಕೆರೆ-ಕಟ್ಟೆಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಶೇಖರಣೆಗೆ ಮುಂದಾಗುವುದು ಅಗತ್ಯ. ಈ ನಿಟ್ಟಿನಲ್ಲಿ ಆಯಾ ಪ್ರದೇಶಕ್ಕೆ ಹೊಂದುವಂಥ ಮಳೆ ನೀರು ಕೊಯ್ಲಿನ ಸಂರಚನೆಗಳ ನಿರ್ವಣಕ್ಕೆ ಒತ್ತು ನೀಡಬೇಕು. ಜಲಮೂಲಗಳು ಮತ್ತೆ ಗತವೈಭವಕ್ಕೆ ಮರಳಲು ಜನರ ಸಹಭಾಗಿತ್ವವೂ ಅವಶ್ಯ ಎಂಬುದನ್ನು ಮರೆಯುವಂತಿಲ್ಲ.