

ಭಾರತ-ಚೀನಾ ಗಡಿಯಲ್ಲಿ ಕಳೆದ 9 ತಿಂಗಳುಗಳಿಂದ ನೆಲೆಸಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದೆ. ಈ ಮೂಲಕ ಪ್ರಮುಖ ಬಿಕ್ಕಟ್ಟೊಂದನ್ನು, ಸುರಕ್ಷಾ ಸವಾಲನ್ನು ಭಾರತ ಯಶಸ್ವಿಯಾಗಿ ಬಗೆಹರಿಸಿದೆ. ‘ಗಡಿ ನಿಯಂತ್ರಣ ರೇಖೆಯ ವಿವಾದಿತ ಪ್ರದೇಶದ ಬಳಿ ನಿಯೋಜಿಸಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಅದರಂತೆ ಈ ಪ್ರಕ್ರಿಯೆ ಆರಂಭವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಸೇನಾ ಮಟ್ಟದಲ್ಲಿ ಉಭಯ ದೇಶಗಳ ನಡುವೆ ಈವರೆಗೆ ಒಂಬತ್ತು ಸುತ್ತಿನ ಮಾತುಕತೆ ನಡೆದಿದ್ದು, ಪ್ರತಿ ಬಾರಿಯೂ ಸೇನಾಪಡೆ ವಾಪಸಾತಿಯ ನಿರೀಕ್ಷೆ ಗರಿಗೆದರುತ್ತಿತ್ತು. ಈ ಮಾತುಕತೆ ವೇಳೆ ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳದೆ, ಒಪ್ಪಂದ ಏರ್ಪಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಲುವನ್ನು ಭಾರತ ಮುಂದಿರಿಸಿತ್ತು.
ಲಡಾಖ್ ಪ್ರದೇಶದಲ್ಲಿ ಕಳೆದ ಮೇ ತಿಂಗಳಲ್ಲಿ ಚೀನಿ ಪಡೆಗಳ ಅತಿಕ್ರಮಣದೊಂದಿಗೆ ಬಿಕ್ಕಟ್ಟು ಆರಂಭವಾಗಿತ್ತು. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಉಭಯ ಪಡೆಗಳ ಯೋಧರ ನಡುವೆ ನಡೆದ ಕಾಳಗದಲ್ಲಿ ಭಾರತದ 20 ಯೋಧರು ಹುತಾತ್ಮರಾದರು. ಚೀನಾದ 45ಕ್ಕೂ ಹೆಚ್ಚು ಸೈನಿಕರು ಹತರಾದರು. ಚೀನಾದ ಕುತಂತ್ರ, ಪದೇಪದೆ ಒಪ್ಪಂದಗಳನ್ನು ಉಲ್ಲಂಘಿಸಿದ್ದು, ಗಡಿಯಲ್ಲಿ ಹೆಚ್ಚಿನ ಶಸ್ತ್ರಾಸ್ತ್ರ ಹಾಗೂ ಸೈನಿಕರನ್ನು ಜಮಾಯಿಸಿದ್ದು ಈ ಎಲ್ಲ ಸಂದರ್ಭಗಳಲ್ಲೂ ಭಾರತ ನೀಡಿದ ತಿರುಗೇಟು, ‘ಡ್ರಾ್ಯಗನ್’ ರಾಷ್ಟ್ರದ ಅಹಂಕಾರವನ್ನು ತಗ್ಗಿಸಿತು. ಯಾವುದೇ ಪರಿಸ್ಥಿತಿಯಲ್ಲಿ ಮೃದುಧೋರಣೆ ತಳೆಯದೆ, ಆ ರಾಷ್ಟ್ರದ ಇಬ್ಬಂದಿತನಕ್ಕೆ ಬಲಿಯಾಗದೆ ತಕ್ಕ ಪ್ರತ್ಯುತ್ತರವನ್ನೇ ನೀಡಲಾಯಿತು. ಭಾರತ ಶಾಂತಿಯನ್ನು ಬಯಸುತ್ತದೆ ಮತ್ತು ಯಾವುದೇ ರಾಷ್ಟ್ರದ ಮೇಲೆ ಆಕ್ರಮಣ ಮಾಡಲು ಹೋಗುವುದಿಲ್ಲ. ಆದರೆ, ನಮ್ಮ ದೇಶದ ಗಡಿಯಲ್ಲಿ ಅಶಾಂತಿ ಹುಟ್ಟಿಸಲು ಯತ್ನಿಸಿದರೆ, ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಈ ಬೆಳವಣಿಗೆ ಮೂಲಕ ಜಾಗತಿಕ ವಲಯಕ್ಕೆ ರವಾನೆಯಾಗಿದೆ.
‘ನಮ್ಮ ದೇಶದ ಒಂದಿಂಚು ಜಮೀನನ್ನೂ ಯಾವುದೇ ರಾಷ್ಟ್ರ ಅತಿಕ್ರಮಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ರಕ್ಷಣಾ ಸಚಿವರ ಹೇಳಿಕೆ ಭಾರತದ ಆತ್ಮವಿಶ್ವಾಸದ ಪ್ರತೀಕ. ಹವಾಮಾನ ವೈಪರೀತ್ಯ ಮತ್ತು ಅತ್ಯಂತ ಕ್ಲಿಷ್ಟ ಸನ್ನಿವೇಶಗಳಲ್ಲಿ ಭಾರತೀಯ ಯೋಧರು ಮೆರೆದ ಸಾಹಸ, ಶೌರ್ಯವಂತೂ ಅಸಾಧಾರಣ.
ಬಿಕ್ಕಟ್ಟು ಪರಿಹಾರದ ನಿಟ್ಟಿನಲ್ಲಿ ಐದು ಅಂಶಗಳ ಒಪ್ಪಂದ ಏರ್ಪಟ್ಟಿದೆ. ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ನಿಯೋಜಿಸಲಾಗಿರುವ ಪಡೆಗಳ ವಾಪಸಾತಿ. ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ 2020ರ ಏಪ್ರಿಲ್ನಿಂದ ಎರಡೂ ಕಡೆಗಳು ಮಾಡಿರುವ ಎಲ್ಲ ನಿರ್ವಣಗಳನ್ನು ತೆಗೆದು ಹಾಕುವುದು. ಹಾಗೂ ಅಲ್ಲಿ ಯಥಾಸ್ಥಿತಿ ಸ್ಥಾಪನೆಯ ಅಂಶಗಳು ಒಳಗೊಂಡಿವೆ. ಈ ಹಿಂದೆ ಮಾತಿಗೆ ತಪ್ಪಿರುವ ಚೀನಾ ಮತ್ತೆ ಅಂಥ ದುಸ್ಸಾಹಸಕ್ಕೆ ಕೈಹಾಕದಿರಲಿ. ಒಪ್ಪಂದವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಗಡಿಯಲ್ಲಿ ಶಾಂತಿಸ್ಥಾಪನೆಗೆ ಮುಂದಾಗಲಿ.