

ಕೆಲ ದೇಶಗಳಲ್ಲಿ ಕರೊನಾ ನಾಲ್ಕನೆಯ ಅಲೆಯ ಪ್ರವೇಶವಾಗಿದೆ. ಚೀನಾದಲ್ಲಂತೂ ಅನೇಕ ನಗರಗಳಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದ್ದು, ಶಾಂಘೈನಂತಹ ಬೃಹತ್ ನಗರದಲ್ಲಿ ತೀವ್ರ ನಿರ್ಬಂಧ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅಲ್ಲಿ ಜನರು ಮನೆಯಿಂದ ಹೊರಗೆ ಹೋಗದಂತೆ ನಿಷೇಧ ವಿಧಿಸಲಾಗಿದ್ದು, ಆಹಾರ ವಸ್ತುಗಳಿಗೂ ತುಟಾಗ್ರತೆಯಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆಂಬ ವರದಿಗಳು ಬರುತ್ತಿವೆ. ಹೀಗಾಗಿ ಅಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಇನ್ನೂ ಕೆಲ ದೇಶಗಳಲ್ಲಿ ಕರೊನಾ ಪ್ರಕರಣಗಳು ನಿಧಾನವಾಗಿ ಏರುಮುಖ ಕಾಣುತ್ತಿವೆ. ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತಗ್ಗಿರುವುದು ಸ್ವಲ್ಪ ಸಮಾಧಾನಕರ. ಆದರೂ, ಇನ್ನೇನು ಕರೊನಾ ಹಾವಳಿ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಮತ್ತೆ ಎಚ್ಚರಿಕೆ ಸಂದೇಶ ಬಂದಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ವಯಸ್ಕರು ಬೂಸ್ಟರ್ ಡೋಸ್ (ಮುನ್ನೆಚ್ಚರಿಕೆ ಲಸಿಕೆ) ತೆಗೆದುಕೊಳ್ಳಲು ಅವಕಾಶ ನೀಡಿದೆ. ಇತ್ತ ಕರ್ನಾಟಕ ಸರ್ಕಾರ ಸಹ ಸಮಯೋಚಿತವಾಗಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಮಾಸ್ಕ್ ಬಳಕೆ, ಬೂಸ್ಟರ್ ಡೋಸ್ಗೆ ಒತ್ತು ನೀಡಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ. ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಅವರು ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ತುರ್ತು ಸಭೆ ನಡೆಸಿದರು. ನಾಲ್ಕು ‘ಟಿ’ ಸೂತ್ರಗಳ ಜತೆಗೆ ಜಿನೋಮ್ ಸಿಕ್ವೆನ್ಸಿಂಗ್ ಟೆಸ್ಟ್ಗಳ ಪ್ರಮಾಣ ಹೆಚ್ಚಳ; ಮಾಸ್ಕ್ ಕಡ್ಡಾಯ ಹಿಂಪಡೆಯದಿದ್ದರೂ ಬಳಕೆ ತಗ್ಗಿದ್ದು, ಮತ್ತೆ ಜಾಗೃತಿ ಮೂಡಿಸಬೇಕು; ವಿವಿಧ ಹಂತದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪರಿಕರಗಳ ಚಿಕಿತ್ಸಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು ಇತ್ಯಾದಿ ಸಲಹೆಗಳನ್ನು ಸಮಿತಿ ಸರ್ಕಾರಕ್ಕೆ ನೀಡಿದೆ. ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ, ಯುಕೆ, ಜರ್ಮನಿ ಮುಂತಾದ ದೇಶಗಳಲ್ಲಿ ಸೋಂಕು ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಎಂಟು ದೇಶಗಳಿಂದ ರಾಜ್ಯಕ್ಕೆ ಬರುವ ಜನರ ಮೇಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ನಿಗಾವಹಿಸಲು ಸರ್ಕಾರ ನಿರ್ಧರಿಸಿರುವುದು ಸಹ ಸೂಕ್ತವಾದ ಕ್ರಮ.
ಏಕೆಂದರೆ, ಹಿಂದೆ ಸಹ ಸೊಂಕು ಹೊರಗಿನಿಂದ ಹರಡಿರುವ ಅನುಭವ ನಮ್ಮೆದುರಿಗಿದೆ. ಜೂನ್-ಜುಲೈಗೆ ಕರೊನಾ ನಾಲ್ಕನೇ ಅಲೆ ಪ್ರವೇಶ ಆಗಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಆಲೋಚನೆ ಸ್ವಾಗತಾರ್ಹ. ಏಕೆಂದರೆ, ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೋದರೆ ಹೆಚ್ಚು ಉಪಯೋಗವಾಗದು. ಹಾಗಂತ, ಕರೊನಾ ಹೆಸರಿನಲ್ಲಿ ಅನಗತ್ಯವಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಖರೀದಿ, ದುಂದುವೆಚ್ಚ ಆಗದಂತೆಯೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಅದೇ ಹಣವನ್ನು ಆರೋಗ್ಯ ವ್ಯವಸ್ಥೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಬಹುದು. ಜನರು ಸಹ ನಿಯಮಗಳನ್ನು ಪಾಲಿಸುವ ಮೂಲಕ ಕರೊನಾ ನಿಯಂತ್ರಣದಲ್ಲಿ ತಮ್ಮ ಬದ್ಧತೆ ಇರುವುದನ್ನು ಮರೆಯಬಾರದು. ಸಾಮೂಹಿಕ ಪ್ರಯತ್ನದಿಂದ ಮಾತ್ರವೇ ಕರೊನಾವನ್ನು ಕಟ್ಟಿಹಾಕಬಹುದು.