

ಕಳೆದ ಹದಿನೆಂಟು ತಿಂಗಳ ಅವಧಿಯಲ್ಲಿ ಕರೊನಾ ಮಹಾಮಾರಿ ಆರೋಗ್ಯ ವ್ಯವಸ್ಥೆ ಎದುರು ಬಹುದೊಡ್ಡ ಸವಾಲನ್ನು ಸೃಷ್ಟಿಸಿದ್ದು ನಿಜ. ಸೋಂಕಿನ ಮೊದಲನೇ ಅಲೆ ನಿಯಂತ್ರಣಗೊಂಡಿತು ಎನ್ನುವಷ್ಟರಲ್ಲೇ ಎರಡನೇ ಅಲೆ ವ್ಯಾಕಪವಾಗಿ ಹರಡಿತು. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ವೈದ್ಯಕೀಯ ಆಮ್ಲಜನಕ ದೊರೆಯದೆ ಜನರು ಪರದಾಡಿದರು. ಆರೋಗ್ಯ ವ್ಯವಸ್ಥೆ ಸದಾ ಸನ್ನದ್ಧವಾಗಿ ಇರಬೇಕು ಮತ್ತು ಹೊಸ ಸವಾಲುಗಳನ್ನು ಎದುರಿಸಲು ಅಣಿಯಾಗಿರಬೇಕು ಎಂಬ ದೊಡ್ಡ ಪಾಠವನ್ನು ಕರೊನಾ ಕಾಲ ಕಲಿಸಿಕೊಟ್ಟಿತು. ಈ ಅವಧಿಯಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಶಕ್ತಿ-ದೌರ್ಬಲ್ಯ ಎರಡೂ ಬೆಳಕಿಗೆ ಬಂದವು. ಆದರೆ, ಒಂದು ಸಮಸ್ಯೆಯ ವಿರುದ್ಧ ಹೋರಾಡುವಾಗ ಮತ್ತೊಂದು ವಿಷಮ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಆರೋಗ್ಯ ತಜ್ಞರು ಕಾಲಕಾಲಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಕರೊನಾ ಹೊರತಾದ ಕಾಯಿಲೆಗಳ ನಿಯಂತ್ರಣಕ್ಕೂ ಅಷ್ಟೇ ಆದ್ಯತೆ ನೀಡಬೇಕು ಎಂದಿದ್ದರು. ಸರ್ಕಾರಿ ಆಸ್ಪತ್ರೆಗಳು ಮೂಲಸೌಕರ್ಯ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದರೂ, ಬಡವರಿಗೆ, ಕೆಳಮಧ್ಯಮ ಮತ್ತು ಮಧ್ಯಮವರ್ಗದವರಿಗೆ ಆಸರೆಯಾಗಿರುವುದು ಸುಳ್ಳಲ್ಲ.
ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಜನರ ಜೀವವನ್ನು ಕಾಪಾಡಬೇಕಾದ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳು ಈಗ ಜೀವರಕ್ಷಕ ಔಷಧಗಳ ಕೊರತೆ ಎದುರಿಸುತ್ತಿರುವುದು, ಸರ್ಕಾರ ಮತ್ತು ಸಂಬಂಧಿತ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎನ್ನಬಹುದು. ಈ ಕೊರತೆ ದಿಢೀರಾಗಿ ಸೃಷ್ಟಿಯಾಗಿರುವುದೇನಲ್ಲ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ ವಿವಿಧ ಟೆಂಡರ್ಗಳ ಅಂತಿಮ ಪ್ರಕ್ರಿಯೆ ಮುಗಿಸದಿರುವುದು ಇದಕ್ಕೆ ಪ್ರಮುಖ ಕಾರಣವಾದರೆ ರಾಷ್ಟ್ರೀಯ ಆರೋಗ್ಯ ಅಭಿಯಾನ ವತಿಯಿಂದ ನೀಡಲಾಗುತ್ತಿರುವ ಅನುದಾನ ಸ್ಥಗಿತಗೊಂಡಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಅನುದಾನ ಕೊರತೆಯಿಂದ ಪ್ರಸಕ್ತ ಸಾಲಿನ ಹೊಸ ಟೆಂಡರ್ ಕರೆದಿಲ್ಲ. ಅಲ್ಲದೆ, ಕಳೆದ ವರ್ಷ ಬಾಕಿ ಇರುವ ಟೆಂಡರ್ ಅಂತಿಮ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶ್ವಾಸಕೋಶ, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ ಸೇರಿ ನೂರಕ್ಕೂ ಅಧಿಕ ಕಾಯಿಲೆಗಳಿಗೆ ನೀಡಲಾಗುವ ಔಷಧ ಮತ್ತು ಚುಚ್ಚುಮದ್ದುಗಳ ಕೊರತೆ ಸೃಷ್ಟಿಯಾಗಿದೆ. ಮಾತ್ರವಲ್ಲ, ನಾಲ್ಕು ವರ್ಷಗಳಿಂದ ಬಾಕಿ ಔಷಧ ಬಿಲ್ಗಳಿಗೆ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಔಷಧ ಪೂರೈಸಿದ್ದ ಸರಬರಾಜುದಾರರು ಕಂಗಾಲಾಗಿದ್ದಾರೆ.
ಔಷಧ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಬೆಲೆ ಪ್ರತಿ ಕೆಜಿಗೆ ಸರಾಸರಿ ಶೇ.150-200ರಷ್ಟು ಏರಿಕೆಯಾಗಿದೆ. ಕರೊನಾ ನಿವಾರಿಸುವ ಚುಚ್ಚುಮದ್ದು ದರವಂತೂ ಶೇ.236 ಹೆಚ್ಚಾಗಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯಲ್ಲಿ ಕೊರತೆ ಉಂಟಾದರೆ ರೋಗಿಗಳ ಪಾಡೇನು? ಹಲವು ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸರ್ಕಾರ ಆರೋಗ್ಯ ರಂಗದ ಪ್ರಮುಖ ಅವಶ್ಯಕತೆಗಳನ್ನೇ ಅವಗಣನೆ ಮಾಡಿದರೆ ಹೇಗೆ? ಇದು ನಿಜಕ್ಕೂ ಗಂಭೀರ ಸಮಸ್ಯೆ. ಕರೊನಾ ಸಂಕಟ, ಬೆಲೆಯೇರಿಕೆ ಮುಂತಾದ ಸಮಸ್ಯೆಗಳಿಂದ ಜನಸಾಮಾನ್ಯರು ಈಗಾಗಲೇ ಹೈರಾಣಾಗಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ, ಔಷಧ ದೊರೆಯದಿದ್ದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತದೆ. ಹಾಗಾಗಿ, ಸರ್ಕಾರ ಪರಿಹಾರದ ನಿಟ್ಟಿನಲ್ಲಿ ಅಗತ್ಯ ಹಾಗೂ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ಜೀವರಕ್ಷಕ ಔಷಧಗಳ ಕೊರತೆಯನ್ನು ನಿವಾರಿಸಬೇಕು.