

ಕರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಬಂದು, ಶಾಲೆ ಸೇರಿದಂತೆ ಎಲ್ಲ ಚಟುವಟಿಕೆಗಳು ಹಿಂದಿನ ಸ್ಥಿತಿಗೆ ಮರಳಿವೆ. ಪರಿಸ್ಥಿತಿ ಹೀಗೆ ಸಹಜವಾಗಿ ಇರಬೇಕು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗಬಾರದು ಎಂದು ಆಶಿಸುತ್ತಿರುವಾಗಲೇ ರಾಜ್ಯಕ್ಕೆ ಸರಣಿ ರೋಗಗಳು ಕಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ಬದಲಾವಣೆ ಮತ್ತು ಚಳಿಯ ಹೆಚ್ಚಳ. ಒಂದೆಡೆ ಉಸಿರಾಟದ ತೊಂದರೆ ಹಾಗೂ ಶೀತಸಂಬಂಧಿ ಸಮಸ್ಯೆ ಹೆಚ್ಚಾಗಿದ್ದರೆ, ಮತ್ತೊಂದೆಡೆ, ಡೆಂಘ ಮತ್ತು ಚಿಕುನ್ ಗುನ್ಯಾ ಪ್ರಕರಣಗಳು ಏರಿಕೆ ಕಂಡಿವೆ. ಈ ಬಾರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಸುರಿದ ಅಕಾಲಿಕ ಮಳೆಯಂತೂ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡಿದೆ.
ಅತಿಯಾದ ಮಳೆ, ತೇವಾಂಶ ಹೆಚ್ಚಿದ ಪರಿಣಾಮ ಚಳಿಯ ವಾತಾವರಣವಿದ್ದು, ಎಲ್ಲ ವಯಸ್ಸಿನವರ ಆರೋಗ್ಯದ ಮೇಲೆ ಅದರಲ್ಲೂ ಚಿಕ್ಕಮಕ್ಕಳು ಮತ್ತು ವಯಸ್ಸಾದವರ ಸ್ವಾಸ್ಥ್ಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದೆ. ಇದು ಜನಸಾಮಾನ್ಯರಿಗೆ ಹೊಸ ಸಮಸ್ಯೆ ಸೃಷ್ಟಿಸಿದರೆ, ಆರೋಗ್ಯ ಕ್ಷೇತ್ರಕ್ಕೆ ಮಗದೊಂದು ಸವಾಲು. ಈವರೆಗೆ 5,185 ಜನರಲ್ಲಿ ಡೆಂಘ ಕಾಣಿಸಿಕೊಂಡಿದ್ದು, ಕೇವಲ 21 ದಿನಗಳಲ್ಲೇ ರಾಮನಗರದಲ್ಲಿ ಇಬ್ಬರು, ಬೆಳಗಾವಿ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಐವರು ಸಾವನ್ನಪ್ಪಿದ್ದಾರೆ. 1,621 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಹೊಣೆ ಜನರ ಮೇಲಿದೆ.
ಡೆಂಘ, ಚಿಕುನ್ ಗುನ್ಯಾ, ತೀವ್ರ ಉಸಿರಾಟದ ಸಮಸ್ಯೆ, ಶೀತಜ್ವರ ಮತ್ತು ಅಸ್ತಮಾದಂತಹ ಸಮಸ್ಯೆಗಳು ಉಲ್ಬಣಿಸುತ್ತಿರುವುದರಿಂದ ಜೀವನಶೈಲಿಯಲ್ಲೂ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ. ಕುದಿಸಿ ಆರಿಸಿದ ಶುದ್ಧ ನೀರು, ತಾಜಾ ಆಹಾರದ ಸೇವನೆಗೆ ಆದ್ಯತೆ ನೀಡಬೇಕು. ಮುಖಗವಸು ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಇಲಾಖೆ ಔಷಧ ಮತ್ತು ಇತರ ಚಿಕಿತ್ಸಾ ಪರಿಕರಗಳ ಕೊರತೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕರೊನಾದ ಸವಾಲು ಈಗಷ್ಟೇ ಕೊಂಚ ನಿಯಂತ್ರಣಕ್ಕೆ ಬಂದಿರುವುದರಿಂದ, ಹೊಸ ಸಮಸ್ಯೆ ತಲೆನೋವಾಗಿ ಪರಿಣಮಿಸದಂತೆ ಜನರು ಆರೋಗ್ಯದ ಕಾಳಜಿಗೆ ಪ್ರಧಾನ ಆದ್ಯತೆ ನೀಡಬೇಕು.