ಸಂಪಾದಕೀಯ | ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ; ದೇಶದ್ರೋಹ ಕಾನೂನಿನ ಮರುಪರಿಶೀಲನೆ..

Court
Published on

ಯಾವುದೇ ದೇಶ-ಸಮಾಜ ಸರಿದಿಕ್ಕಿನಲ್ಲಿ ಸಾಗಲು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ಮಾಡಲು ಕೆಲವು ಕಾನೂನುಗಳು, ಕಟ್ಟಳೆಗಳು, ನೀತಿಸಂಹಿತೆಗಳು ಅತ್ಯವಶ್ಯ. ಹಾಗಿಲ್ಲವಾದಲ್ಲಿ ಅದು ಅರಾಜಕತೆಗೆ ನಾಂದಿಯಾಗಿ ಬದುಕು ಅಸ್ತವ್ಯಸ್ತವಾಗುತ್ತದೆ. ಹಾಗಂತ ಆಯಾ ಕಾಲಕ್ಕೆ ಹೊಂದದ, ಅಪ್ರಸ್ತುತವಾದ ಕಾನೂನುಗಳನ್ನು ರದ್ದುಪಡಿಸುವ ಅಥವಾ ಅದಕ್ಕೆ ಪರಿಷ್ಕರಣೆ ತರುವ ಕೆಲಸವನ್ನು ಸಹ ಸರ್ಕಾರಗಳು ಮಾಡಬೇಕಾಗುತ್ತದೆ. ದೇಶದ್ರೋಹ ಕಾನೂನು ಈಚಿನ ವರ್ಷಗಳಲ್ಲಿ ಬಹಳ ಚರ್ಚೆಯಲ್ಲಿರುವ, ವಿವಾದಕ್ಕೂ ಈಡಾಗಿರುವ ಕಾನೂನು. ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ಪ್ರಕಾರ, ಕಾನೂನುಬದ್ಧವಾಗಿ ಸ್ಥಾಪಿತವಾದ ಸರ್ಕಾರದ ವಿರುದ್ಧ ಮೌಖಿಕ ಅಥವಾ ಲಿಖಿತ, ಅಥವಾ ಸಂಕೇತಗಳು ಅಥವಾ ಬೇರೆ ರೀತಿಯಲ್ಲಿ ದ್ವೇಷ ಮೂಡಿಸಲು ಯತ್ನಿಸಿದರೆ, ಅಥವಾ ನಿಂದಿಸಿದರೆ, ಅಥವಾ ಸರ್ಕಾರದ ಬಗ್ಗೆ ಅಸಮಾಧಾನ ಮೂಡಿಸಲು ಕುಮ್ಮಕ್ಕು ನೀಡಿದರೆ, ಅಂಥ ವ್ಯಕ್ತಿಗೆ ದೇಶದ್ರೋಹ ಕಾನೂನಿನನ್ವಯ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ಆಳುವ ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಈ ಕಾನೂನನ್ನು ವ್ಯಾಖ್ಯಾನಿಸಿಕೊಂಡು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತವೆ; ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುವ ಹಸ್ತಕ್ಷೇಪ ಎಂಬುದು ಕೆಲವರ ಆಕ್ಷೇಪ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಚಟುವಟಿಕೆ ಅಥವಾ ಹೇಳಿಕೆಗಳನ್ನು ಸಹಿಸಲಾಗದು. ಇದಕ್ಕೆ ಒಂದು ಲಕ್ಷ್ಮಣರೇಖೆ ಅಗತ್ಯ ಎಂಬುದು ಈ ಕಾನೂನಿನ ಸಮರ್ಥಕರ ವಾದ. ಈ ವಿಷಯ ಈಗ ಸವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಹಿಂದಿನ ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಈ ಕಾನೂನನ್ನು ಸಮರ್ಥಿಸಿಕೊಂಡಿತ್ತು. ಆದರೆ ಮೊನ್ನಿನ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡು, ಈ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆ ಮೇರೆಗೆ ಸರ್ಕಾರ ಈ ಅಭಿಪ್ರಾಯಕ್ಕೆ ಬಂದಿತೆಂದು ವರದಿಗಳು ಹೇಳುತ್ತವೆ. ಕೇಂದ್ರ ಸರ್ಕಾರ ಈ ಕಾನೂನಿನಲ್ಲಿ ತಿದ್ದುಪಡಿ ಮಾಡುತ್ತದೆಯೋ ಅಥವಾ ಇಡಿಯಾಗಿ ರದ್ದುಮಾಡುತ್ತದೆಯೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಯಾವುದೇ ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಮಹತ್ವವಿದೆ. ಪ್ರಜೆಗಳಿಗೆ ತಮ್ಮ ಭಾವನೆಗಳು, ಅನಿಸಿಕೆಗಳನ್ನು ಅಭಿವ್ಯಕ್ತಿಸಲು ಮುಕ್ತ ಅವಕಾಶವಿರಬೇಕು. ಹಾಗಿಲ್ಲವಾದಲ್ಲಿ ಅದು ಸರ್ವಾಧಿಕಾರಕ್ಕೆ ಎಡೆಯಾಗುತ್ತದೆ.

ಅದರಲ್ಲೂ ಈಗಿನ ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಜನರ ಅನಿಸಿಕೆಗಳಿಗೆ ತಡೆ ಹಾಕುವುದು ಕಷ್ಟಕರ. ಆದರೆ, ಮುಕ್ತ ಅವಕಾಶ ಇದೆಯೆಂದಾಕ್ಷಣ ಏನು ಬೇಕಾದರೂ ಮಾತಾಡಬಹುದು, ಚಟುವಟಿಕೆ ನಡೆಸಬಹುದು ಎಂದಲ್ಲ. ಇಂಥ ಪ್ರವೃತ್ತಿ ಸಮಾಜದಲ್ಲಿ ಮೂಡಿದರೆ, ಅದು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ, ಈ ಸ್ವಾತಂತ್ರ್ಯವು ಸ್ವೇಚ್ಛೆಯಾಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ಒಂದು ಮಿತಿ ಇರಬೇಕಾಗುತ್ತದೆ. ಅದೇ ಸಂದರ್ಭದಲ್ಲಿ, ಕ್ಷುಲ್ಲಕ ಕಾರಣಕ್ಕೂ ದೇಶದ್ರೋಹ ಕಾನೂನಿನಡಿ ಪ್ರಕರಣ ಹೂಡುವುದೂ ಸಲ್ಲದು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ, ಓಬೀರಾಯನ ಕಾಲದ 1500ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಮಾಡಿದೆ. ದೇಶದ್ರೋಹ ಕಾನೂನಿನ ವಿಷಯದಲ್ಲಿ ಸಹ ಅದು ಒಂದು ವಿವೇಚನಾಯುಕ್ತ, ಜನಪರ ನಿರ್ಣಯಕ್ಕೆ ಬರಬಹುದೆಂದು ಭಾವಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net