ಶೀಘ್ರನ್ಯಾಯ ಸಾಕಾರವಾಗಲಿ: 5 ಕೋಟಿ ಕೇಸ್ ಬಾಕಿ ಇವೆ ಎಂದು ಕೇಂದ್ರ ಸಚಿವರ ಮಾಹಿತಿ

Editorial
Published on

ಭಾರತದ ಎಲ್ಲ ಹಂತಗಳ ನ್ಯಾಯಾಲಯಗಳನ್ನು ಸೇರಿಸಿದರೆ ಒಟ್ಟು ಐದು ಕೋಟಿಯಷ್ಟು ಪ್ರಕರಣಗಳು ಬಾಕಿ ಇವೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಔರಂಗಾಬಾದಿನಲ್ಲಿ ಮಹಾರಾಷ್ಟ್ರ ನ್ಯಾಷನಲ್ ಲಾ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ದೇಶದ ನ್ಯಾಯವ್ಯವಸ್ಥೆಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಭಾರತದ ನ್ಯಾಯಾಂಗದ ಗುಣಮಟ್ಟದ ಬಗ್ಗೆ ವಿಶ್ವದೆಲ್ಲೆಡೆ ಮೆಚ್ಚುಗೆ ಇದೆ. ಭಾರತದ ಸುಪ್ರೀಂ ಕೋರ್ಟಿನ ತೀರ್ಪಗಳನ್ನು ಬ್ರಿಟನ್ನಿನಲ್ಲಿ ಆಗಾಗ ಉಲ್ಲೇಖಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಜತೆಗೆ, ಕೋರ್ಟುಗಳಲ್ಲಿ ಬಾಕಿ ಇರುವ ಅಗಾಧ ಪ್ರಮಾಣದ ಪ್ರಕರಣಗಳ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ‘ನಾನು ಕಾನೂನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಬಾಕಿ ಪ್ರಕರಣಗಳ ಸಂಖ್ಯೆ ನಾಲ್ಕು ಕೋಟಿಯಷ್ಟಿತ್ತು. ಈಗ ಅದು ಐದು ಕೋಟಿಗೇರಿದೆ. ಇದು ಎಲ್ಲರಿಗೂ ಕಳವಳವನ್ನುಂಟು ಮಾಡುವ ಸಂಗತಿ’ ಎಂದು ಅವರು ಹೇಳಿದ್ದಾರೆ. ಬ್ರಿಟನ್ನಿನಲ್ಲಿ ಒಬ್ಬ ನ್ಯಾಯಾಧೀಶರು ದಿನಕ್ಕೆ ಸರಾಸರಿ ಐದಾರು ಪ್ರಕರಣಗಳಲ್ಲಿ ತೀರ್ಪು ನೀಡಿದರೆ ಭಾರತದಲ್ಲಿ ಒಬ್ಬ ನ್ಯಾಯಾಧೀಶರು ದಿನಕ್ಕೆ 40-50 ಕೇಸುಗಳ ವಿಚಾರಣೆ ನಡೆಸುತ್ತಾರೆ ಎಂದು ಅವರು ಉದಾಹರಣೆ ನೀಡಿರುವುದು ನಮ್ಮ ದೇಶದಲ್ಲಿನ ನ್ಯಾಯಾಧೀಶರ ಮೇಲಿರುವ ಒತ್ತಡವನ್ನು ಸೂಚಿಸುತ್ತದೆ. ಕೆಲ ವಕೀಲರು ವಿಧಿಸುವ ದುಬಾರಿ ಶುಲ್ಕದ ಕುರಿತಂತೆಯೂ ಸಚಿವ ರಿಜಿಜು ಉಲ್ಲೇಖ ಮಾಡಿದ್ದಾರೆ. ಇದರಿಂದ ಬಡವರು ಉತ್ತಮ ವಕೀಲರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ನ್ಯಾಯದ ನಿರಾಕರಣೆಗೆ ಕಾರಣವಾಗ ಬಾರದು ಎಂದು ಅವರು ಕಳಕಳಿ ವ್ಯಕ್ತಪಡಿಸಿರುವುದು ಸಮಂಜಸವಾಗಿದೆ.

ಭಾರತದ ನ್ಯಾಯಾಂಗದ ಮೇಲಿನ ಒತ್ತಡವನ್ನು ತಗ್ಗಿಸುವ, ಆ ಮೂಲಕ ಪ್ರಕರಣಗಳ ಶೀಘ್ರ ವಿಲೇವಾರಿ ಅಗತ್ಯವನ್ನು ರಿಜಿಜು ಮಾತು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ನ್ಯಾಯದಾನ ವಿಳಂಬವಾದರೆ ಕಕ್ಷಿದಾರರು ಹಾಗೂ ಸಂಬಂಧಿತ ವ್ಯಕ್ತಿಗಳು ಮಾನಸಿಕ, ಆರ್ಥಿಕ ಸೇರಿ ಬಹುವಿಧ ತೊಂದರೆ ಎದುರಿಸಬೇಕಾಗುತ್ತದೆ; ಇದರಿಂದ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ. ಇನ್ನು, ವಿಚಾರಣಾಧೀನ ಕೈದಿಗಳ ಕಥೆ-ವ್ಯಥೆ ಮತ್ತೊಂದು ಬಗೆಯದು. ಭಾರತದ ಕಾರಾಗೃಹಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯ ಕೈದಿಗಳನ್ನು ಇಡಲಾಗುತ್ತಿರುವುದು ಈ ಸಮಸ್ಯೆಯ ಮತ್ತೊಂದು ಆಯಾಮ. ಯಾವುದೇ ಪ್ರಕರಣದಲ್ಲಿ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸುವುದು ಪೊಲೀಸರ ಕೆಲಸವಾದರೆ, ಆರೋಪಿಯು ಅಪರಾಧಿಯೋ ಅಲ್ಲವೋ ಎಂಬುದನ್ನು ನ್ಯಾಯಾಲಯವೇ ತೀರ್ವನಿಸಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಈ ತೀರ್ವನವಾದಲ್ಲಿ ಉತ್ತಮ. ಹಾಗಾಗಬೇಕು ಎಂದಾದಲ್ಲಿ ನ್ಯಾಯಾಂಗದ ಮೇಲೆ ವಿಪರೀತ ಹೊರೆ ಇರಬಾರದು. ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ನ್ಯಾಯಾಂಗದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ತಂತ್ರಜ್ಞಾನ ಅಳವಡಿಕೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಕುರಿತು ಚಿಂತನೆ ನಡೆಯಲಿ. ಲೋಕ ಅದಾಲತ್​ಗಳಲ್ಲಿ ಸರಳ ಪ್ರಕ್ರಿಯೆ ಮೂಲಕ ವಿವಿಧ ಬಗೆಯ ಪ್ರಕರಣಗಳ ಇತ್ಯರ್ಥ ನಡೆಸಲು ಸಾಧ್ಯವಿದ್ದು, ಇವನ್ನು ಇನ್ನೂ ಹೆಚ್ಚೆಚ್ಚು ನಡೆಸುವ ಕುರಿತು ಆಲೋಚಿಸಬಹುದು. ಒಟ್ಟಿನಲ್ಲಿ ಶೀಘ್ರ ನ್ಯಾಯದಾನ ಸಾಕಾರವಾಗಬೇಕು. ಇದರಿಂದ ಆಯಾ ವ್ಯಕ್ತಿ-ಕುಟುಂಬದ ಜತೆಗೆ ಒಟ್ಟಾರೆಯಾಗಿ ದೇಶಕ್ಕೂ ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net