

ತಂತ್ರಜ್ಞಾನ ಬೆಳೆದಂತೆ ನಾನಾ ಸೌಕರ್ಯಗಳೂ ಹೆಚ್ಚಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದಾಗಿ ಜನರ ಕೆಲಸವೂ ಸುಲಭವಾಗಿದೆ. ಹಿಂದೆಲ್ಲ ಗಂಟೆಗಟ್ಟಲೆ ಕ್ಯೂದಲ್ಲಿ ನಿಂತು ಮಾಡಬೇಕಾಗಿದ್ದ ಕೆಲಸಕಾರ್ಯಗಳು ಈಗ ಅಂತರ್ಜಾಲ ಸಂಪರ್ಕ ಇರುವ ಮೊಬೈಲಿನಲ್ಲಿ ಕೆಒಲವೇ ಸೆಕೆಂಡುಗಳಲ್ಲಿ ಸಲೀಸಾಗಿ ನಡೆದುಹೋಗುತ್ತವೆ. ಸರ್ಕಾರಿ ಕೆಲಸದಲ್ಲೂ ಒಂದಷ್ಟು ತಂತ್ರಜ್ಞಾನ ಅಳವಡಿಕೆಯಿಂದಾಗಿ ಜನರಿಗೆ ಪ್ರಯೋಜನವಾಗಿದೆ. ಆದರೆ ಇಂತಹ ಸವಲತ್ತು ಅನುಕೂಲದ ಜತೆಗೆ ಅಪಾಯವನ್ನೂ ಕಟ್ಟಿಕೊಂಡಿದೆ ಎಂಬುದನ್ನು ಮರೆಯಬಾರದು. ಕ್ರೆಡಿಟ್, ಡೆಬಿಟ್ ಕಾರ್ಡ್ಗೆ ಕನ್ನ ಹಾಕಿ ಹಣ ದೋಚುವವರು, ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಫೋನ್ ಮಾಡಿ ಖಾತೆ ಮಾಹಿತಿ ಪಡೆದು ವಂಚಿಸುವವರು, ಸೈಬರ್ ಮೋಸಗಾರರು, ಬಹುಮಾನ ಬಂದಿದೆ ಎಂದು ಆಮಿಷ ಒಡ್ಡಿ ಅದನ್ನು ಬಿಡಿಸಿಕೊಳ್ಳಲು ತೆರಿಗೆ ಕಟ್ಟಬೇಕೆಂದು ಹೇಳಿ ನಂಬಿಸಿ ಹಣ ಪೀಕುವವರು, ಫೋಟೋವನ್ನು ತಿರುಚಿ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಹೇಳಿ ಹಣ ಸೆಳೆಯುವವರು... ಹೀಗೆ ವಂಚನೆಗೆ ನಾನಾ ಮುಖಗಳು. ಅದರಲ್ಲೂ ಈಗ ಮಕ್ಕಳ ಕೈಗೆ ಫೋನ್ ಸಿಗುವುದರಿಂದಾಗಿ ಮತ್ತಷ್ಟು ವಂಚನೆಯ ದಾರಿಗಳು ತೆರೆದುಕೊಂಡಿವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಕ್ಕಳು ಮೊಬೈಲ್ ಮಾಯಾಜಾಲದಲ್ಲಿ ಸಿಲುಕಿ ಫಜೀತಿಪಡುವ ಅನೇಕ ಪ್ರಸಂಗಗಳು ವರದಿಯಾಗುತ್ತವೆ. ವಿಶೇಷವಾಗಿ ಹೆಣ್ಣುಮಕ್ಕಳು ಈ ವಿಷಯದಲ್ಲಿ ಬಹಳ ಹುಷಾರಾಗಿರಬೇಕು. ವಿವಾಹವಾಗುವುದಾಗಿ, ನೌಕರಿ ಕೊಡಿಸುವುದಾಗಿ...ಹೀಗೆ ನಾನಾ ಬಗೆಯಲ್ಲಿ ಮೋಸಮಾಡುವವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ.
ಈ ಎಲ್ಲದರ ಜತೆಗೆ ರಾಜ್ಯದಲ್ಲಿ ಈಗ ಮತ್ತೊಂದು ಪ್ರಕರಣ ಸದ್ದುಮಾಡುತ್ತಿದೆ. ನೌಕರಿ, ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ಇತ್ಯಾದಿ ಆಮಿಷದ ಮೂಲಕ ಅನೇಕರಿಂದ ಹಣ ಪಡೆದು ಮೋಸ ಮಾಡಿರುವುದಾಗಿ ಆರೋಪಿಸಿ ಬೆಂಗಳೂರಿನಲ್ಲಿ ಯುವರಾಜ ಎಂಬಾತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಸಚಿವರು, ಶಾಸಕರು ಹಾಗೂ ಇತರ ರಾಜಕಾರಣಿಗಳ ಜತೆ ಈತ ಇರುವ ಫೋಟೋಗಳು ಬಹಿರಂಗವಾಗಿವೆ. ಫೋಟೋದಲ್ಲಿ ಇದ್ದಮಾತ್ರಕ್ಕೆ ಗಣ್ಯರು ಇಂಥವರ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಥವಾ ಇವರ ಅಸಲಿ ಮುಖ ಅವರಿಗೆ ಗೊತ್ತಿರುತ್ತದೆ ಎಂದು ಹೇಳಲಾಗದು. ಆದರೆ ಯಾವುದೇ ಸ್ಥಾನಮಾನಗಳು ಅರ್ಹತೆಯ ಮುಖಾಂತರ ಬರಬೇಕೆ ವಿನಾ ಹಣದ ದಾರಿಯಲ್ಲಲ್ಲ. ಹೀಗಾಗಿ ಕಾರ್ಯಸಿದ್ಧಿಗಾಗಿ ಕಾಂಚಾಣ ನೀಡುವುದು ಯಾವ ರೀತಿಯಲ್ಲೂ ಸ್ವೀಕಾರಾರ್ಹವಲ್ಲ ಮತ್ತು ಇದರಿಂದ ಸಾರ್ವಜನಿಕ ವಲಯಕ್ಕೆ ತಪು್ಪಸಂದೇಶ ರವಾನೆಯಾಗುತ್ತದೆ.
ಸೈಬರ್ ಅಪರಾಧಗಳ ತನಿಖೆಗೆಂದೇ ಪ್ರತಿ ಜಿಲ್ಲೆಯಲ್ಲೂ ಈಗ ವಿಶೇಷ ಪೊಲೀಸ್ ಠಾಣೆಗಳು ಸ್ಥಾಪನೆಯಾಗಿವೆ. ಆದರೆ ಇಂಥ ಪ್ರಕರಣಗಳಲ್ಲಿ ವಂಚಕರನ್ನು ಕಂಡುಹಿಡಿದು ಕಾನೂನಿನ ಪ್ರಕಾರ ಶಿಕ್ಷ ಕೊಡಿಸುವುದು ಸಂಕೀರ್ಣ ಪ್ರಕ್ರಿಯೆ. ಎಷ್ಟೋ ಸಂದರ್ಭದಲ್ಲಿ ಅಪರಾಧಿಗಳು ಹೊರದೇಶದವರಾಗಿರುತ್ತಾರೆ. ಹೀಗಾಗಿ ಜನರು ವ್ಯವಹಾರದ ಸಂದರ್ಭದಲ್ಲಿ ಬಹಳ ಹುಷಾರಾಗಿರಬೇಕಾಗುತ್ತದೆ. ಸರ್ಕಾರಗಳು ಈ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಸಂದೇಶಗಳನ್ನು ನೀಡುತ್ತವಾದರೂ, ಅವನ್ನು ಗಮನಿಸಿ ಎಚ್ಚರ ವಹಿಸುವುದು ಜನರದೇ ಜವಾಬ್ದಾರಿ. ಅದರಲ್ಲೂ ವಿಶೇಷವಾಗಿ ಕರೊನಾ ಕಾಲದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಆದ್ಯತೆ ಎಂಬುದು ಸರ್ಕಾರಗಳ ನೀತಿಯೇ ಆಗುತ್ತಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾಹಿತಿ ಹೊಂದಿ ವ್ಯವಹರಿಸಬೇಕಾದದ್ದು ಅನಿವಾರ್ಯ.