ಸಂಪಾದಕೀಯ | ರೋಗಿಗಳ ಕಾಳಜಿ ಮುಖ್ಯ; ಸರ್ಕಾರಿ ಆಸ್ಪತ್ರೆಗಳು ಸೂಕ್ತ ಸೌಲಭ್ಯಗಳಿಂದ ಸನ್ನದ್ಧಗೊಳ್ಳಲು ಸಕಾಲ..

Editorial
Published on

ಇದು ಬೆಲೆಯೇರಿಕೆಯ ಕಾಲ. ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತ, ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ, ಮುಂದಿನ ವರ್ಷ ವೈದ್ಯ ಚಿಕಿತ್ಸಾ ವೆಚ್ಚಗಳು ಶೇಕಡ 5ರಿಂದ 10ರಷ್ಟು ದುಬಾರಿ ಆಗಲಿವೆ ಎಂಬ ಸುಳಿವನ್ನು ದೇಶದ ಮುಂಚೂಣಿ ಆಸ್ಪತ್ರೆಗಳು ನೀಡಿವೆ. ವೈದ್ಯೋಪಕರಣಗಳು ಸೇರಿ ಎಲ್ಲ ವೆಚ್ಚಗಳೂ ಏರಿಕೆ ಆಗುತ್ತಿರುವ ಕಾರಣ ಚಿಕಿತ್ಸಾ ದರಗಳನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ದೇಶದ ಮುಂಚೂಣಿಯ ಆಸ್ಪತ್ರೆ ಜಾಲಗಳು ಹೇಳಿವೆ. ಆಸ್ಪತ್ರೆಗಳು ಕರೊನಾ ಕಾಲಘಟ್ಟದಲ್ಲಿ ಹೊಸ ಬಗೆಯ ಸವಾಲುಗಳನ್ನು ಎದುರಿಸಿವೆ. ಕರೊನಾ ಹೊರತಾದ ರೋಗಿಗಳ ಚಿಕಿತ್ಸೆ ಪ್ರಮಾಣ ತಗ್ಗಿದ್ದರಿಂದ ಅವುಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಹಾಗಾಗಿ, ಚಿಕಿತ್ಸಾ ವೆಚ್ಚ ಹೆಚ್ಚಿಸುವ ಆಸ್ಪತ್ರೆಗಳ ನಿರ್ಧಾರ ತಪು್ಪ ಎನ್ನಲಾಗದಿದ್ದರೂ, ಇಲ್ಲಿ ಬರೀ ಉದ್ಯಮ ಮನವೋಭಾವವಷ್ಟೇ ಮುಖ್ಯವಾಗದೆ ಸೇವಾ ಮನೋಭಾವ, ಮಾನವೀಯ ಕಾಳಜಿಗೂ ಆದ್ಯತೆ ಇರಬೇಕು. ರೋಗಿಗಳ ಹಿತ, ಸೂಕ್ತ ಆರೈಕೆ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು. ಜನರು ಚಿಕಿತ್ಸೆಗಿಂತ ಚಿಕಿತ್ಸಾವೆಚ್ಚಕ್ಕೇ ಭಯಪಡುವಂಥ ಸ್ಥಿತಿ ಸೃಷ್ಟಿಯಾಗಬಾರದು.

ಕರೊನಾ ಸೃಷ್ಟಿಸಿದ ಸಂಕಷ್ಟದಿಂದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಕುಸಿದಿದೆ. ದೈನಂದಿನ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಮೊದಲೇ ವೈದ್ಯಕೀಯ ವೆಚ್ಚಗಳಿಗೆ ಜನಸಾಮಾನ್ಯರು ಹೆದರುತ್ತಾರೆ. ಇನ್ಮುಂದೆ, ಖಾಸಗಿ ಆಸ್ಪತ್ರೆಯ ವೆಚ್ಚಗಳು ಇನ್ನೂ ಹೆಚ್ಚಾದರೆ ಮತ್ತಷ್ಟು ಜನರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳತ್ತ ಹೊರಳುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಈ ಸವಾಲನ್ನೇ ಸರ್ಕಾರ ಅವಕಾಶವನ್ನಾಗಿ ಬಳಸಿಕೊಳ್ಳಲು ಚಿಂತನೆ ನಡೆಸಬೇಕು. ಅಂದರೆ, ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸಲು, ಅವುಗಳ ಮೂಲಸೌಕರ್ಯ ಹೆಚ್ಚಿಸಲು ಇದು ಸಕಾಲ.

ರಾಜ್ಯದ, ದೇಶದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ದಯನೀಯ ಸ್ಥಿತಿಯಲ್ಲಿವೆ. ಅದರಲ್ಲೂ ತಾಲೂಕು ಮಟ್ಟದ ಆಸ್ಪತ್ರೆಗಳ ಸ್ಥಿತಿ ಆ ದೇವರಿಗೇ ಪ್ರೀತಿ. ಹಳ್ಳಿಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೌಲಭ್ಯಗಳಿಲ್ಲದೆ ಸೊರಗಿವೆ. ಜನರು ವಿಶ್ವಾಸದಿಂದ ಸರ್ಕಾರಿ ಆಸ್ಪತ್ರೆಗಳತ್ತ ಬರಬೇಕಾದರೆ, ಅಲ್ಲಿನ ಕೊರತೆಗಳು ನಿವಾರಣೆ ಆಗಬೇಕು, ಸಮಸ್ಯೆಗಳು ಪರಿಹಾರ ಕಾಣಬೇಕು. ಕರೊನಾ ಸೋಂಕು ಪ್ರಕರಣಗಳು ತೀವ್ರ ಏರಿಕೆ ಕಂಡ ಸಂದರ್ಭದಲ್ಲಿ ಹಲವೆಡೆ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿ, ಉತ್ತಮ ಸೇವೆ ನೀಡಿವೆ ಎಂಬುದನ್ನು ಮರೆಯುವಂತಿಲ್ಲ. ಆದರೆ, ಈ ಪ್ರಮಾಣ ಅತ್ಯಲ್ಪ. ಆಗಬೇಕಿರುವ ಸುಧಾರಣೆಗಳು ಸಾಕಷ್ಟಿವೆ. ಅವುಗಳತ್ತ ಸರ್ಕಾರ ಗಮನ ವಹಿಸಿದರೆ ಜನರ ಆತಂಕವೂ ಕಡಿಮೆಯಾಗುತ್ತದೆ, ಆರೋಗ್ಯ ವ್ಯವಸ್ಥೆಯೂ ಬಲಗೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net