ಪಕ್ಷಗಳಿಗೆ ಪಾಠ; ರಾಜಕೀಯದ ಶುದ್ಧೀಕರಣ ತುರ್ತು ಅಗತ್ಯ..

Editorial
Published on

ರಾಜಕೀಯದಲ್ಲಿ ಅಪರಾಧೀಕರಣವನ್ನು ತಡೆಗಟ್ಟಬೇಕೆಂಬುದು ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆಗ್ರಹ-ಆಶಯ. ದೇಶದ ಸವೋನ್ನತ ನ್ಯಾಯಾಲಯದಿಂದ ಹಿಡಿದು ವಿವಿಧ ಹಂತದ ನ್ಯಾಯಾಲಯಗಳು ಸಹ ಈ ಕುರಿತು ಕಾಲಕಾಲಕ್ಕೆ ತೀರ್ಪಗಳನ್ನು ನೀಡುತ್ತಲೇ ಬಂದಿವೆ. ಆದರೆ ರಾಜಕೀಯ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ್ದರಿಂದ ಈ ಆಶಯ ಈಡೇರಿಲ್ಲ ಎಂಬುದು ವಿಷಾದಕರ. ಈಗ ಸುಪ್ರೀಂ ಕೋರ್ಟು ಈ ನಿಟ್ಟಿನಲ್ಲಿ ಮತ್ತೊಂದು ತೀರ್ಪು ನೀಡಿದ್ದು, ರಾಜಕೀಯ ಪಕ್ಷಗಳಿಗೆ ಪಾಠವಾಗಬೇಕಿದೆ. ಕಳೆದ ವರ್ಷ ಬಿಹಾರದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ, ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸೇರಿ ಎಂಟು ಪಕ್ಷಗಳಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿರುವುದು ಮಹತ್ವದ ಬೆಳವಣಿಗೆ. ಇದೇ ಸಂದರ್ಭದಲ್ಲಿ, ಪಕ್ಷಗಳ ನಡವಳಿಕೆ ಬಗ್ಗೆ ನ್ಯಾಯಾಲಯ ಕಟುಮಾತುಗಳಲ್ಲಿ ಟೀಕೆಯನ್ನೂ ಮಾಡಿದೆ. ಯಾವುದೇ ಅಭ್ಯರ್ಥಿ ಆಯ್ಕೆಯಾದ 48 ತಾಸುಗಳ ಒಳಗೆ, ಆ ಅಭ್ಯರ್ಥಿ ಮೇಲೆ ಅಪರಾಧ ಪ್ರಕರಣಗಳು ಇದ್ದರೆ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು; ಪಕ್ಷಗಳು ತಮ್ಮ ವೆಬ್​ಸೈಟಿನಲ್ಲಿ ಈ ಮಾಹಿತಿ ಪ್ರ್ರಟಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ರಾಜಕೀಯ ನಾಯಕರು ಬೇಗ ಎಚ್ಚೆತ್ತುಕೊಂಡು, ರಾಜಕೀಯದಲ್ಲಿ ಅಪರಾಧೀಕರಣವನ್ನು ತಡೆಗಟ್ಟಲು ಮೇಜರ್ ಸರ್ಜರಿ ನಡೆಸಲಿ ಎಂದು ಕೂಡ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳು ಕಿವಿಮಾತು ಹೇಳಿದ್ದಾರೆ. ಶಾಸನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಮೇಲೆ ಅಪರಾಧ ಪ್ರಕರಣಗಳು ಇದ್ದರೆ, ಅದನ್ನು ಜಾಹೀರಾತುರೂಪದಲ್ಲಿ ಪ್ರಕಟಿಸಬೇಕು ಎಂಬ ನಿಯಮ ಈಗಾಗಲೇ ಇದೆ. ಆದರೆ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಹಾಗೆಂದಾಕ್ಷಣ, ಯಾವುದೇ ಅಭ್ಯರ್ಥಿ ಮೇಲೆ ಪ್ರಕರಣ ಇದ್ದ ಮಾತ್ರಕ್ಕೆ ಅಂಥವರು ಸಾರ್ವಜನಿಕ ಜೀವನಕ್ಕೆ ಬರಲು ಅನರ್ಹರು ಎಂದು ಷರಾ ಬರೆಯಲಾಗದು. ಏಕೆಂದರೆ, ಜನರ ಪರವಾಗಿ ಹೋರಾಟ ಮಾಡಿದಾಗಲೂ, ರಾಜಕೀಯ ವಿರೋಧಿಗಳು ಎಂಬ ಕಾರಣಕ್ಕೆ ಪ್ರಕರಣಗಳನ್ನು ಹಾಕುವುದಿದೆ. ಆದರೆ, ಭ್ರಷ್ಟಾಚಾರ, ಕೊಲೆ ಇತ್ಯಾದಿ ಗಂಭೀರ ಪ್ರಕರಣಗಳಿದ್ದು, ಅಂಥವರು ಸಾರ್ವಜನಿಕ ಜೀವನಕ್ಕೆ ಬಂದು ಜನಪ್ರತಿನಿಧಿ ಸ್ಥಾನಕ್ಕೇರಿದರೆ ಅದು ಆತಂಕದ ವಿಚಾರ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳಹಂತದಿಂದ ಹಿಡಿದು ಮೇಲ್ಮಟ್ಟದವರೆಗೆ ಎಲ್ಲ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಜನರು ಯಾವುದೇ ಸಮಸ್ಯೆ ಇದ್ದರೂ ಇವರನ್ನು ನೇರವಾಗಿ ಸಂರ್ಪಸುತ್ತಾರೆ. ಹೀಗಾಗಿ, ಜನನಾಯಕರ ವರ್ತನೆ ಜನರ ನಿರೀಕ್ಷೆಗೆ ವ್ಯತಿರಿಕ್ತವಾಗಿರಬಾರದು. ರಾಜಕೀಯದ ಅಪರಾಧೀಕರಣ ನಿಯಂತ್ರಣಕ್ಕಾಗಿ ಜನಪ್ರತಿನಿಧಿ ಕಾಯ್ದೆಗೆ ಕೆಲ ತಿದ್ದುಪಡಿ ತರಲಾಗಿದೆಯಾದರೂ, ಉದ್ದೇಶ ಈಡೇರಿಕೆಗೆ ಅದು ಸಾಕಾಗುತ್ತಿಲ್ಲ. ಈ ವಿಷಯದಲ್ಲಿ ಕಾನೂನು ಮಾತ್ರ ಸಾಕಾಗದು. ರಾಜಕೀಯ ಪಕ್ಷಗಳು ಸ್ವಯಂ ಆಗಿ ಕೆಲ ನೈತಿಕ ಆದರ್ಶಗಳನ್ನು ಪಾಲಿಸಬೇಕಾಗುತ್ತದೆ. ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೇ ಅವರ ಹಿನ್ನೆಲೆ ಬಗ್ಗೆ ಜರಡಿ ಹಿಡಿದು ಸೋಸಬೇಕು. ಅಂದಾಗ, ಕ್ರಿಮಿನಲ್ ಪ್ರಕರಣಗಳು ಇರುವವರು ಮುನ್ನೆಲೆಗೆ ಬರಲು ಆಸ್ಪದವಾಗುವುದಿಲ್ಲ. ಆದರೆ, ಗೆಲುವೇ ಮುಖ್ಯವಾಗಿರುವ, ಹಣದ ಕುಣಿತ ನಡೆಯುವ ವರ್ತಮಾನದ ರಾಜಕಾರಣ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದೇ ಎಂಬ ಪ್ರಶ್ನೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net