ಸೂಕ್ತ ಎಚ್ಚರಿಕೆ ಅಗತ್ಯ; ಮೋಸದ ಜಾಲಕ್ಕೆ ಒಳಗಾಗದಿರಿ..

Editorial
Published on

ಏನೇ ಆಪತ್ತು, ಸಂಕಷ್ಟ ಇರಲಿ, ಆ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ, ಮೋಸ ಮಾಡುವ ಒಂದಷ್ಟು ದುರುಳರು ಇದ್ದೇ ಇರುತ್ತಾರೆ. ಈ ಬಗೆಯ ಪ್ರಕರಣಗಳಿಂದ ಜನರು ಪಾಠ ಕಲಿಯದಿದ್ದಲ್ಲಿ ಮತ್ತಷ್ಟು ವಂಚನೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈಗ ಎಲ್ಲ ಕಡೆ ಕರೊನಾದ ಕರಾಳಛಾಯೆ ಆವರಿಸಿಕೊಂಡಿದೆ. ಮೊದಲೇ ಚಿಕಿತ್ಸೆಗೆ ಪರದಾಡುತ್ತಿ್ತ್ದಾರೆ. ಲಾಕ್​ಡೌನ್ ಇರುವುದರಿಂದ ಹೊರಗೆ ಓಡಾಡುವಂತೆಯೂ ಇಲ್ಲ. ಪರಿಣಾಮ ಅನೇಕ ಅಗತ್ಯಗಳಿಗಾಗಿ, ತುರ್ತು ಕೆಲಸಗಳಿಗಾಗಿ ಜನಸಾಮಾನ್ಯರು ಆನ್​ಲೈನ್ ವಹಿವಾಟಿನ ಮೊರೆ ಹೋಗುತ್ತಿದ್ದಾರೆ. ಈ ವಿಷಯದಲ್ಲಿ ಸುರಕ್ಷಿತ ವಿಧಾನ ಅನುಸರಿಸುವುದು, ಸೈಬರ್ ವಂಚಕರ ಜಾಲಕ್ಕೆ ಬೀಳದಿರುವುದು ಜಾಣತನ. ವೈದ್ಯಕೀಯ ಆಮ್ಲಜನಕ, ಅಗತ್ಯ ಔಷಧ ಮನೆಬಾಗಿಲಿಗೇ ತಲುಪಿಸುತ್ತೇವೆ ಎಂದು ಹೇಳಿ, ಅಮಾಯಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡುವ ಸೈಬರ್ ವಂಚಕರ ಜಾಲ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಹಲವು ಪ್ರಕರಣಗಳು ವರದಿಯಾಗಿವೆ.

ವಾಟ್ಸ್​ಆಪ್​ನಲ್ಲಿ ಬಂದ ಸಂದೇಶದಲ್ಲಿ ಆಮ್ಲಜನಕ ಸಿಲಿಂಡರ್​ಗೆ ಸಂರ್ಪಸಿ ಎಂದು ಉಲ್ಲೇಖಿಸಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿದ ಮಹಿಳೆಯಿಂದ 47 ಸಾವಿರ ರೂ. ಪಡೆದು ಮೋಸಗಾರರು ವಂಚನೆ ಮಾಡಿದ್ದಾರೆ. ಆನ್​ಲೈನ್​ನಲ್ಲಿ ಔಷಧ ಆರ್ಡರ್ ಮಾಡಿದ್ದ ವಿಲ್ಸನ್ ಗಾರ್ಡನ್ ನಿವಾಸಿ 85 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ಜನರು ಇಂಥ ಜಾಲಗಳ ದಾಳಕ್ಕೆ ಬೀಳುತ್ತಿರುವುದು ಶೋಚನೀಯ. ಬೇಗನೆ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕು ಎಂಬ ಧಾವಂತದಲ್ಲಿ ಕೆಲವರು ಹಿಂದೆಮುಂದೆ ನೋಡದೆ, ಸೂಚಿಸಿದ ಮೊಬೈಲ್ ಸಂಖ್ಯೆಗೆ ದುಡ್ಡು ಪಾವತಿಸಿ, ಆ ಬಳಿಕ ಪರಿತಪಿಸುತ್ತಾರೆ. ಸೈಬರ್ ಪೊಲೀಸ್ ವಿಭಾಗ ಇಂಥ ಮೋಸಗಳಿಗೆ ಒಳಗಾಗಬೇಡಿ ಎಂದು ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಇರುತ್ತದೆ, ಆದರೂ ಸೈಬರ್ ವಂಚಕರು ಮೋಸ ಮಾಡಲು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಅಲ್ಲದೆ, ಫಾರ್ವರ್ಡ್ ಸಂದೇಶಗಳನ್ನು ನಂಬಿ, ಯಾರನ್ನೋ ಸಂರ್ಪಸುವ ಜನ ಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಈಗಿನ ಸನ್ನಿವೇಶದಲ್ಲಿ ಕೆಲ ಸಂಗತಿಗಳನ್ನು ಮುಖ್ಯವಾಗಿ ಗಮನಿಸಬೇಕು. ಪ್ರಸಕ್ತ ಅವಧಿಯಲ್ಲಿ ಕೋವಿಡ್​ಗೆ ಸಂಬಂಧಿಸಿದ ಮಾಹಿತಿಗೆ ಕೊರತೆ ಇಲ್ಲ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕೂಡ ಕೋವಿಡ್ ಸಹಾಯವಾಣಿಯನ್ನು ಆರಂಭಿಸಿವೆ. ಜನರು ಇಂಥ ಅಧಿಕೃತ ಮೂಲಗಳನ್ನು ಸಂರ್ಪಸಬೇಕೆ ಹೊರತು, ಯಾವುದೋ ಆಕರ್ಷಕ ಘೋಷಣೆ-ಭರವಸೆಯನ್ನು ನಂಬಿ ಅಪರಿಚಿತರ ಮೋಸದಾಟಕ್ಕೆ ಬಲಿಯಾಗಬಾರದು. ರಾಜ್ಯದಲ್ಲಿ ಹಲವು ಸ್ವಯಂಸೇವಾ ಸಂಸ್ಥೆಗಳು ಜನರ ತೊಂದರೆ ನೀಗಿಸುವ ನಿಟ್ಟಿನಲ್ಲಿ ಸಮರ್ಪಣಾ ಭಾವದಿಂದ ಶ್ರಮಿಸುತ್ತಿವೆ. ಇಂಥ ಸಮಾಜಮುಖಿ ಸಂಸ್ಥೆಗಳೂ ಸಹಾಯವಾಣಿಯನ್ನು ತೆರೆದಿದ್ದು, ವೈದ್ಯಕೀಯ ಆಮ್ಲಜನಕ, ಔಷಧ, ಆಂಬುಲೆನ್ಸ್ ಲಭ್ಯತೆಯ ನಿಖರ ಮಾಹಿತಿ ನೀಡುತ್ತಿವೆ. ಇಂಥ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು. ರಾಜಧಾನಿ ಬೆಂಗಳೂರು ಸೇರಿ ಜಿಲ್ಲಾಕೇಂದ್ರಗಳಲ್ಲೂ ಈ ಕಾರ್ಯಗಳು ನಡೆಯುತ್ತಿವೆ. ಒಟ್ಟಾರೆ, ಜನರು ಧಾವಂತಕ್ಕೆ ಬಿದ್ದು, ಮೋಸಕ್ಕೆ ಒಳಗಾಗದಿರಲಿ. ಅಧಿಕೃತ ಸೇವೆಗಳನ್ನು ಸಂರ್ಪಸಿ, ಸಮಸ್ಯೆ ಬಗೆಹರಿಸಿಕೊಳ್ಳುವ ವಿವೇಚನೆ ತೋರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net