ದೂರದೃಷ್ಟಿಯ ಆಲೋಚನೆ: ಶೇ. 50ರಷ್ಟು ಅಗ್ನಿವೀರರನ್ನು ಸೇನೆಗೆ ಶಾಶ್ವತವಾಗಿ ನೇಮಿಸಿಕೊಳ್ಳಲು ಚಿಂತನೆ

Army Training
Published on

ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ನಿವಾರಿಸುವ ಮಾಗೋಪಾಯವಾಗಿ ಅಗ್ನಿಪಥ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಗ್ನಿಪಥ ಯೋಜನೆಯಡಿ ತಾತ್ಕಾಲಿಕ ಅವಧಿಗೆ ಸೇನೆಗೆ ನೇಮಕವಾಗುವ ಅಗ್ನಿವೀರರ ಪೈಕಿ ಶೇಕಡಾ 50ರಷ್ಟು ಮಂದಿಯನ್ನು ಶಾಶ್ವತವಾಗಿ ಸೇನೆಗೆ ಭರ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆಗೆ ತೊಡಗಿರುವುದು ದೂರದೃಷ್ಟಿಯ ಆಲೋಚನಾ ಕ್ರಮವಾಗಿದೆ. ಸೇನಾ ಪಡೆಗೆ ಸಿಬ್ಬಂದಿಯನ್ನು ಆಯ್ಕೆ ಮಾಡಿ, ತರಬೇತಿ ನೀಡಲು ಅಂದಾಜು 1.5 ವರ್ಷ ತಗುಲುತ್ತದೆ. ಹೀಗಾಗಿ, ತಾತ್ಕಾಲಿಕವಾಗಿ ನಾಲ್ಕು ವರ್ಷದ ಅವಧಿಗೆ ನೇಮಕಗೊಂಡು, ಸೇನೆಯಲ್ಲಿಯೇ ತರಬೇತುಗೊಳ್ಳುವ ಅಗ್ನಿವೀರರನ್ನೇ ಶಾಶ್ವತವಾಗಿ ಸೇನೆಗೆ ಭರ್ತಿ ಮಾಡಿಕೊಳ್ಳುವುದು ಉತ್ತಮ ಆಲೋಚನೆ ಎನ್ನಬಹುದಾಗಿದೆ. ಇದರಿಂದಾಗಿ ಸೇನೆಯಲ್ಲಿನ ಸಿಬ್ಬಂದಿ ಕೊರತೆಯನ್ನು ತ್ವರಿತವಾಗಿ ನೀಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನೇಮಕಾತಿ ಪ್ರಕ್ರಿಯೆ, ತರಬೇತಿಗೆ ವ್ಯಯಿಸಬೇಕಾದ ಸಮಯ ಹಾಗೂ ಸಂಪನ್ಮೂಲದ ಉಳಿತಾಯವೂ ಆಗುತ್ತದೆ.

ಅಗ್ನಿಪಥ ಯೋಜನೆಯಡಿ ಅಗ್ನಿವೀರರನ್ನು ಸೇನೆಗೆ ನೇಮಕ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್​ನಲ್ಲಿ ಜಾರಿಗೊಳಿಸಿದೆ. ಈ ನೇಮಕಾತಿಯನ್ನು ಶಾಶ್ವತವಾಗಿರದೆ 4 ವರ್ಷಗಳ ಅವಧಿಗೆ ನಿಗದಿಪಡಿಸ ಲಾಗಿದೆ. ಅಗ್ನಿವೀರರಿಗೆ ಪ್ರತಿ ತಿಂಗಳು ನೀಡುವ 30 ಸಾವಿರ ರೂಪಾಯಿಯ ಆರಂಭಿಕ ಸಂಬಳವು 40 ಸಾವಿರ ರೂಪಾಯಿಯವರೆಗೂ ಏರಿಕೆ ಕಾಣುತ್ತದೆ. 11.71 ಲಕ್ಷ ರೂಪಾಯಿಯ ಸೇವಾ ನಿಧಿಯನ್ನು ನಿವೃತ್ತಿಯಾಗುವ ಸಮಯದಲ್ಲಿ ನೀಡಲಾಗುತ್ತದೆ. ಅಲ್ಲದೆ, ಶೇ. 25ರಷ್ಟು ಅಗ್ನಿವೀರರನ್ನು ಸೇನೆ ಶಾಶ್ವತವಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ ನೇಮಕವಾಗಿರುವ ಅಗ್ನಿವೀರರ ಸಂಖ್ಯೆ 46 ಸಾವಿರ ಇದೆ. 2022ರಿಂದ 2026ರ ಅವಧಿಯಲ್ಲಿ 1.75 ಲಕ್ಷ ಅಗ್ನಿವೀರರು ನೇಮಕಗೊಳ್ಳುವ ಸಾಧ್ಯತೆ ಇದೆ. ಅಗ್ನಿವೀರರಲ್ಲಿ ಅರ್ಧದಷ್ಟು ಮಂದಿಯನ್ನು ನೇಮಕ ಮಾಡಿಕೊಂಡರೆ ಸೇನೆಯಲ್ಲಿನ ಸಿಬ್ಬಂದಿ ಕೊರತೆಯು ಬಹುತೇಕವಾಗಿ ನಿವಾರಣೆಯಾಗುತ್ತದೆ. 2021ರ ಡಿಸೆಂಬರ್​ನಲ್ಲಿ ಸಂಸತ್ತಿಗೆ ಸರ್ಕಾರವೇ ತಿಳಿಸಿರುವ ಪ್ರಕಾರ, ಭಾರತೀಯ ಭೂಸೇನೆಯಲ್ಲಿ 1,04,053, ನೌಕಾಪಡೆಯಲ್ಲಿ 12,431 ಮತ್ತು ವಾಯುಪಡೆಯಲ್ಲಿ 5,471 ಸಿಬ್ಬಂದಿ ಕೊರತೆಯಿದೆ.

ಅಗ್ನಿವೀರರನ್ನು ಸೇನೆಗೆ ಶಾಶ್ವತವಾಗಿ ನೇಮಕಾತಿ ಮಾಡಿಕೊಂಡರೆ, ನಾಲ್ಕು ವರ್ಷಗಳ ಕಾಲ ದೇಶ ರಕ್ಷಣೆ ಸೇವೆಯಲ್ಲಿ ತೊಡಗಿರುವವರ ಅನುಭವವನ್ನು ದೀರ್ಘಕಾಲ ಬಳಸಿಕೊಂಡಂತಾಗುತ್ತದೆ. ಪಾಕ್ ಗಡಿಯಲ್ಲಿನ ಉದ್ವಿಗ್ನತೆಯು ಸ್ವಾತಂತ್ರ್ಯಕಾಲದಿಂದಲೂ ಮುಂದುವರಿದಿದ್ದು, ನಿಯಂತ್ರಣ ರೇಖೆಯಗುಂಟ ಸೇನಾ ಪಡೆಗಳು ಸದಾ ಜಾಗೃತವಾಗಿರಲೇಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತ- ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಬಿಕ್ಕಟ್ಟು ತಲೆದೋರಿದೆ. ತಂಟೆಕೋರ ಚೀನಾ ನಿಯಂತ್ರಿಸಲು ಸೇನೆಪಡೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಇತ್ತೀಚೆಗೆ ಮಣಿಪುರದಲ್ಲಿ ಆಂತರಿಕವಾಗಿ ಸಶಸ್ತ್ರ ಬಂಡಾಯ, ದಂಗೆಗಳು ಹೆಚ್ಚಿವೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಸೇನೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ದೇಶದ ಭದ್ರತೆ ದೃಷ್ಟಿಯಿಂದ ಹಿತಕರವಲ್ಲ. ಹೊಸ ನೇಮಕಾತಿ ಯೋಜನೆ ಅಗ್ನಿಪಥದ ನಿಬಂಧನೆಗಳನ್ನು ಬದಲಾಯಿಸಲು, ತಿದ್ದುಪಡಿ ಮಾಡಲು ರಕ್ಷಣಾ ಸಚಿವಾಲಯ ಅಧಿಕಾರ ಹೊಂದಿದೆ. ಇದಕ್ಕಾಗಿ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುವ ಅಗತ್ಯವೂ ಇರುವುದಿಲ್ಲ. ಹೀಗಾಗಿ, ದೇಶದ ಹಿತದೃಷ್ಟಿಯಿಂದ ಈ ನಿಟ್ಟಿನಲ್ಲಿ ತ್ವರಿತ ಕ್ರಮ ಅಪೇಕ್ಷಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net