ಸಂಪಾದಕೀಯ | ಅರ್ಹರಿಗೆ ತಲುಪಲಿ; ಪಡಿತರ ಚೀಟಿ ವಿತರಣೆಗೆ ಸೂಕ್ತ ವ್ಯವಸ್ಥೆ ಅಗತ್ಯ

Editorial
Published on

ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆ ಸಂಬಂಧದ ಗೊಂದಲ ಮುಗಿಯುವ ಲಕ್ಷಣಗಳು ಗೋಚರಿಸಿರುವುದು ಸಮಾಧಾನಕರ ಸಂಗತಿ. ರಾಜ್ಯಾದ್ಯಂತ ಹೊಸ ರೇಷನ್ ಕಾರ್ಡ್​ಗಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ವಿಲೇವಾರಿಗೆ ನಾಲ್ಕು ವರ್ಷದ ಬಳಿಕ ಸರ್ಕಾರದಿಂದ ಅನುಮತಿ ಸಿಕ್ಕಿದೆ. 2017ರಿಂದ 2021 ನವೆಂಬರ್ 1ರವರೆಗೆ ರಾಜ್ಯಾದ್ಯಂತ ಸ್ವೀಕೃತವಾಗಿರುವ ಒಟ್ಟು 4,56,931 ಅರ್ಜಿಗಳ ಪೈಕಿ 2,76,459 ಅರ್ಜಿಗಳು ಅರ್ಹವಾದರೆ, 1,80,472 ಅರ್ಜಿಗಳು ಅನರ್ಹಗೊಂಡಿವೆ. ಎಪಿಎಲ್ ಕಾರ್ಡ್​ಗೆ ಸಲ್ಲಿಕೆಯಾಗಿದ್ದ 1,55,647 ಅರ್ಜಿಗಳು ಅರ್ಹವಾಗಿವೆ. ಹಾಗಾಗಿ, ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಇದರಿಂದಾಗಿ ಚಾತಕಪಕ್ಷಿಯಂತೆ ಕಾರ್ಡ್​ಗಾಗಿ ಕಾಯುತ್ತಿದ್ದ ಅರ್ಜಿದಾರರಿಗೆ ಕೊನೆಗೂ ಸಂಕಟ ತಪ್ಪಿದಂತಾಗಿದೆ. ಪಡಿತರ ಚೀಟಿ, ಪಡಿತರ ಧಾನ್ಯ ಅನರ್ಹರ ಪಾಲಾದ ಘಟನೆಗಳು ಬೆಳಕಿಗೆ ಬಂದಿದ್ದವು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಸಾವಿರಾರು ನಕಲಿ ಕಾರ್ಡ್​ಗಳನ್ನು ರದ್ದುಗೊಳಿಸಿತ್ತು. ಆದರೆ, ಹಲವು ಅಪಸವ್ಯಗಳು ಆಗಾಗ ಬೆಳಕಿಗೆ ಬಂದು, ಲೋಪಗಳನ್ನು ಸರಿಪಡಿಸಲೇ ಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದವು. ಈಗಲೂ ಎಷ್ಟೋ ಕಡೆ ಆಹಾರಧಾನ್ಯ ಅನರ್ಹರ ಪಾಲಾಗುತ್ತಿದೆ. ತಂತ್ರಜ್ಞಾನದ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಹೀಗಿರುವಾಗ ತಂತ್ರಜ್ಞಾನದ ಸ್ಪರ್ಶ ನೀಡಿ ಇಲಾಖೆಯ ಕಾರ್ಯವೈಖರಿಯನ್ನು, ಪಡಿತರ ಚೀಟಿ ಹಂಚಿಕೆಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸುವುದು ತುರ್ತು ಅಗತ್ಯ. ಬಿಪಿಎಲ್ ಕಾರ್ಡ್ ಆರೋಗ್ಯ ಸೇರಿ ಇತರ ಸೌಲಭ್ಯಗಳಿಗೂ ಅವಶ್ಯಕ. ಕರೊನಾ ಸೋಂಕಿನ ಹಾವಳಿ ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದ್ದು, ಕುಟುಂಬ ಪೋಷಣೆಗೆ ಜನಸಾಮಾನ್ಯರು ಪರದಾಡುವಂತಾಗಿದೆ. ಬೆಲೆಏರಿಕೆಯೂ ಅವರನ್ನು ಬಾಧಿಸುತ್ತಿದೆ. ಈ ಪರಿಸ್ಥಿತಿಯನ್ನು ಮನಗಂಡು ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಬಲವಾದ ಸುಧಾರಣೆಗಳನ್ನು ತರಬೇಕಿದೆ ಮತ್ತು ಬಿಪಿಎಲ್ ಕಾರ್ಡ್​ಗಳು ಅರ್ಹರಿಗೆ ತೊಂದರೆ, ತಾಪತ್ರಯ ಇಲ್ಲದಂತೆ ಸಿಗುವಂತೆ ಅಧಿಕಾರಿವರ್ಗ ಕಾಳಜಿ ತೋರಬೇಕಿದೆ.

ಜನಸಾಮಾನ್ಯರ ಪಾತ್ರ ಕೂಡ ಇಲ್ಲಿ ಮುಖ್ಯ. ಒಳ್ಳೆಯ ಆದಾಯ ಹೊಂದಿದವರು, ಸರ್ಕಾರಿ ಉದ್ಯೋಗದಲ್ಲಿದ್ದವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ ನಿದರ್ಶನಗಳು ಹಿಂದೆ ಪತ್ತೆಯಾಗಿದ್ದವು. ಪ್ರಮುಖ ಸಾಮಾಜಿಕ ಯೋಜನೆಗಳನ್ನು ಉಳ್ಳವರು ದುರುಪಯೋಗ ಪಡಿಸಿಕೊಳ್ಳುವುದು ಅಕ್ಷಮ್ಯ. ನ್ಯಾಯಯುತವಾಗಿ ಸೌಲಭ್ಯ ಸಿಗಬೇಕಾದ ಫಲಾನುಭವಿಗಳಿಗೆ ತಪ್ಪಿಸಿ, ಇತರರು ಲಾಭ ಪಡೆದರೆ ಅದು ನೈತಿಕತೆಯ ಅಧಃಪತನವೂ ಹೌದು. ಸರ್ಕಾರದ ಪಾರದರ್ಶಕ ನಿರ್ವಹಣೆಯೊಂದಿಗೆ ಜನರು ಅರ್ಹರಿಗೆ ಸೌಲಭ್ಯಗಳು ಸಿಗುವಂತೆ ಹಾದಿ ಮಾಡಿಕೊಡಬೇಕು. ಉಳ್ಳವರು ಎಲ್​ಪಿಜಿ ಸಬ್ಸಿಡಿ ತ್ಯಜಿಸುವಂತೆ ಈ ಹಿಂದೆ ಪ್ರಧಾನಿ ಕರೆನೀಡಿದ್ದಾಗ ಅದಕ್ಕೆ ದೊಡ್ಡ ಸ್ಪಂದನೆ ವ್ಯಕ್ತವಾಗಿತ್ತು. ಇದರಿಂದ ಕಡುಬಡವರಿಗೆ, ಕೆಳಮಧ್ಯಮವರ್ಗದವರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ. ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನಾದರೂ ಅರ್ಜಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ, ಲೋಪಗಳು ಇರದಂತೆ ಪಡಿತರ ಚೀಟಿ ವಿತರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net