ನಲ್ಲಿ ನೀರು ಸಾಕಾರವಾಗಲಿ; ಬೃಹತ್ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ

Editorial
Published on

ಪ್ರತಿ ಮನೆಗೂ ಕುಡಿಯುವ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನವಾಗುವ ಯೋಜನೆಯಾದ್ದರಿಂದ ಇಬ್ಬರಿಗೂ ಭಾಧ್ಯತೆಯಿದೆ. ರಾಜ್ಯದಲ್ಲಿ ಈ ಕಾರ್ಯಕ್ರಮದ ಜಾರಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಾರೆ 4306ಕ್ಕಿಂತ ಹೆಚ್ಚು ಜನವಸತಿಗಳಲ್ಲಿ ನಲ್ಲಿ ನೀರು ಸಂಪರ್ಕ ಕಲ್ಪಿಸಲು 4370 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಸಭೆ ಒಪ್ಪಿಗೆ ನೀಡಿತು. ಎಲ್ಲೆಲ್ಲಿ ತಕ್ಷಣ ನೀರಿನ ಅಗತ್ಯ ಇದೆಯೋ ಅಲ್ಲಿ ಆದ್ಯತೆ ಮೇರೆಗೆ ಯೋಜನೆ ಜಾರಿಮಾಡಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿವರ ನೀಡಿದ್ದಾರೆ.

ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ.45 ಹಣ ಭರಿಸುತ್ತವೆ. ಉಳಿದ ಶೇ.10 ಹಣವನ್ನು ಸ್ಥಳೀಯ ವಂತಿಗೆ ಮೂಲಕ ಸಂಗ್ರಹಿಸಬೇಕು ಎಂಬುದು ನಿಯಮಾವಳಿ. ಆದರೆ ಸ್ಥಳೀಯ ವಂತಿಗೆ ಸಂಗ್ರಹ ಕಷ್ಟವೆಂಬ ಕಾರಣಕ್ಕೆ ರಾಜ್ಯ ಸರ್ಕಾರವೇ ಭರಿಸಲು ನಿರ್ಣಯಿಸಲಾಗಿದೆ. ಈ ಯೋಜನೆಗೆ ರಾಜ್ಯದ ಪಾಲು ಸುಮಾರು 4500 ಕೋಟಿಯಷ್ಟಿದೆ. ಇಷ್ಟು ಮೊತ್ತವನ್ನು ಸ್ವಂತವಾಗಿ ಹೊಂದಿಸಲು ಸಾಧ್ಯವಿಲ್ಲದ ಕಾರಣ ಸರ್ಕಾರ ವಿಶ್ವ ಬ್ಯಾಂಕ್​ನಲ್ಲಿ ಸಾಲ ಮಾಡಲು ನಿರ್ಧರಿಸಿದೆ. ಉತ್ತರ ಕನ್ನಡ, ಹಾಸನ, ಚಿತ್ರದುರ್ಗ, ಉಡುಪಿ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಸರ್ಕಾರದ ಯೋಜನೆಗಳು ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣುತ್ತವೆ; ಜನರಲ್ಲಿ ಸಹ ಆಶಾಭಾವನೆ ಗರಿಗೆದರುತ್ತದೆ. ಆದರೆ ಅನುಷ್ಠಾನದ ಹಂತದಲ್ಲಿ ಮತ್ತು ಹಣಕಾಸಿನ ಹಂಚಿಕೆ ಸಮಯದಲ್ಲಿಯೇ ಸಮಸ್ಯೆಯಾಗುವುದು. ಎಷ್ಟೋ ಯೋಜನೆಗಳಿಗೆ ಕಾಲಮಿತಿ ಇರದಿರುವುದು ಮತ್ತೊಂದು ಸಮಸ್ಯೆ. ಹೀಗಾಗಿ ವಿಳಂಬವಾಗಿ ಫಲಾನುಭವಿ ಜನರಿಗೂ ತೊಂದರೆಯಲ್ಲದೆ, ಸರ್ಕಾರಕ್ಕೂ ಅಧಿಕ ವೆಚ್ಚದ ಹೊರೆ ಬೀಳುತ್ತದೆ. ಜಲಜೀವನ ಮಿಷನ್ ಯೋಜನೆಯ ಪ್ರತಿ ಕಾಮಗಾರಿಗೂ ಸಮಯ ನಿಗದಿ ಮಾಡಲಾಗಿದೆ ಎಂದು ಸಚಿವ ಮಧುಸ್ವಾಮಿ ಹೇಳಿದ್ದಾರೆ.

ಡಿಬಿಒಟಿ (ಡಿಸೈನ್, ಬಿಲ್ಡ್, ಆಪರೇಟ್, ಟ್ರಾನ್ಸ್ ಫರ್) ಆಧಾರದಲ್ಲಿ ಕಾಮಗಾರಿ ಮಾಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ನಿಯಮ ಸರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಇದಲ್ಲದೆ ಒಟ್ಟಾರೆ ಕಾಮಗಾರಿ ಮೇಲೂ ಸರ್ಕಾರ ಹದ್ದಿನ ಕಣ್ಣಿರಿಸಬೇಕು. ಅದಿಲ್ಲವಾದಲ್ಲಿ ನಲ್ಲಿ ನೀರು ಸರಿಯಾಗಿ ಮನೆಗೆ ತಲುಪದೇ ಹೋದೀತು! ಜತೆಗೆ, ಯೋಜನೆ ಜಾರಿ ನಂತರದಲ್ಲಿ ಅದು ಸರಿಯಾಗಿ ಮುಂದುವರಿಯುವುದು ಸಹ ಮುಖ್ಯ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ರಸ್ತೆ, ನೀರು ಇತ್ಯಾದಿ ಮೂಲಸೌಕರ್ಯಗಳನ್ನು ಇನ್ನೂ ಸರಿಯಾಗಿ ನೀಡಲು ಆಗಿಲ್ಲ. ಭಾರತದಂತಹ ವೈವಿಧ್ಯಮಯ ಪ್ರ್ರಾದೇಶಿಕ ದೇಶದಲ್ಲಿ ಇದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಹೌದಾದರೂ ರಾಜಕೀಯ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಕಷ್ಟವೂ ಅಲ್ಲ. ಅಂಥ ಬದ್ಧತೆಯನ್ನು ಇನ್ನಾದರೂ ಪ್ರದರ್ಶಿಸಿ ಮೂಲಸವಲತ್ತುಗಳನ್ನು ಕಲ್ಪಿಸಿ ಜೀವನವನ್ನು ಸುಗಮಗೊಳಿಸಲಿ ಎಂಬುದು ಜನರ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net