

ವಿದ್ಯಾರ್ಹತೆ, ಪ್ರತಿಭೆಗೆ ತಕ್ಕಂತೆ ಉದ್ಯೋಗ ಹುಡುಕುವುದು, ಆ ನಿಟ್ಟಿನಲ್ಲಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸ್ವಾಭಾವಿಕ. ಈ ಉದ್ಯೋಗಬೇಟೆಯಲ್ಲಿ ಅಸಂಖ್ಯ ಪ್ರತಿಭಾವಂತರು ಶ್ರಮ, ಸಮಯ ವಿನಿಯೋಗಿಸುತ್ತಾರೆ. ಮತ್ತು ಉತ್ತಮ ವ್ಯಕ್ತಿತ್ವ, ಕಾರ್ಯದಕ್ಷತೆ ಹೊಂದಿದವರು ಯಾವುದೇ ಉದ್ಯೋಗರಂಗ ಪ್ರವೇಶಿಸಿದರೂ, ಅಲ್ಲಿ ಸುಧಾರಣೆಗಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ, ಉದ್ಯೋಗ ಗಿಟ್ಟಿಸಿಕೊಳ್ಳುವಾಗಲೇ ವಾಮಮಾರ್ಗಗಳನ್ನು ಅನುಸರಿಸುವುದು, ಅಕ್ರಮಗಳನ್ನು ಎಸಗುವುದು ಅಕ್ಷಮ್ಯ. ಕೆಲಸ ಪಡೆದುಕೊಳ್ಳುವಾಗಲೇ ಅಡ್ಡದಾರಿ ಹಿಡಿದವರು ಕರ್ತವ್ಯದ ವೇಳೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಹೇಗೆ ಸಾಧ್ಯ? ಇಂಥವರು ವ್ಯವಸ್ಥೆಯನ್ನು ಮತ್ತಷ್ಟು ಕಲುಷಿತಗೊಳಿಸಿಬಿಡುತ್ತಾರೆ. ಈ ಬಗೆಯ ಹಲವು ನಿದರ್ಶನಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ.
ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ, ಎಂಥ ಸವಾಲನ್ನೂ ಎದುರಿಸುವಂಥ ಶಕ್ತಿ, ಸಾಮರ್ಥ್ಯ ಹೊಂದಿದೆ. ಈ ಇಲಾಖೆಗೇ ಕಳ್ಳಮಾರ್ಗದಿಂದ ಕೆಲಸಕ್ಕೆ ಸೇರಲು ಯತ್ನಿಸಿದರೆ? ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಸಲಿ, ನಕಲಿ ಅಭ್ಯರ್ಥಿಗಳ ಕಳ್ಳಾಟ ಹೆಚ್ಚುತ್ತಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳೆದ ವರ್ಷ ನಡೆದ ಹಲವು ಪರೀಕ್ಷೆಗಳಲ್ಲಿ ಅಸಲಿ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿ, ಇಬ್ಬರು ಪೊಲೀಸ್ ಪೇದೆಗಳು ಸೇರಿ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದಂತೆ ರಾಜ್ಯಾದ್ಯಂತ ಜಾಲ ವಿಸ್ತರಿಸಿರುವುದಕ್ಕೆ ಸಾಕ್ಷ್ಯ ಲಭಿಸಿದೆ. ಇಂಥ ಅಕ್ರಮಗಳಿಗೆ ಕಡಿವಾಣ ಹಾಕಲು ಪರೀಕ್ಷಾ ಪದ್ಧತಿಯಲ್ಲೇ ಸುಧಾರಣೆ ತರಲು ಮುಂದಾಗಿರುವುದು ಸ್ವಾಗತಾರ್ಹ. ಪ್ರತಿಹಂತದಲ್ಲೂ ಅಭ್ಯರ್ಥಿಯ ಬೆರಳಚ್ಚು ಸಂಗ್ರಹಿಸುವ ಕಡ್ಡಾಯ ನಿಯಮದ ಜತೆಗೆ 8 ಹೊಸ ನಿಯಮ ರೂಪಿಸಲಾಗಿದೆ. ಇದರಿಂದ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದು, ಬೇರೆ ಯಾರೋ ನೇಮಕಾತಿ ಆದೇಶ ಪಡೆಯುವುದು ತಪ್ಪಲಿದೆ. ಪ್ರಸಕ್ತ ಸಾಲಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಇಲಾಖೆ ಪರೀಕ್ಷೆಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ.
ಕೆಪಿಎಸ್ಸಿಯಂತೂ ಅಧ್ವಾನಗಳಿಂದಲೇ ಸುದ್ದಿಯಲ್ಲಿದೆ. ಆದರೂ, ಸ್ವಲ್ಪ ಎಚ್ಚೆತ್ತುಕೊಂಡು ಕೆಲ ಕ್ರಮಗಳಿಗೆ ಮುಂದಾಗಿರುವುದು ಸಮಾಧಾನಕರ ಬೆಳವಣಿಗೆ. 2019ರಲ್ಲಿ ನಡೆದಿದ್ದ ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ 12 ಅಭ್ಯರ್ಥಿಗಳನ್ನು ಕೆಪಿಎಸ್ಸಿ ಡಿಬಾರ್ಗೊಳಿಸಿದೆ. ಈ ಅಭ್ಯರ್ಥಿಗಳ ಪೈಕಿ ಕೆಲವರು ಪರೀಕ್ಷೆಗೆ ಪಾನಮತ್ತರಾಗಿ ಬಂದಿದ್ದರಲ್ಲದೆ, ಕೆಲವರು ನಕಲು ಮಾಡುವಾಗ ಸಿಕ್ಕಿಬಿದ್ದಿದ್ದರು. ನೈತಿಕತೆಯನ್ನೇ ಮರೆತ ಇಂಥ ಅಭ್ಯರ್ಥಿಗಳು ಆಕಸ್ಮಾತ್ ಒಳ್ಳೆಯ ಹುದ್ದೆಯಲ್ಲಿ ಬಂದು ಕೂತುಬಿಟ್ಟರೆ ಅದರಿಂದ ಆಗುವ ಅಧ್ವಾನ, ಅನ್ಯಾಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಕಠಿಣ ಕ್ರಮಗಳನ್ನು ರೂಪಿಸುವುದು ಸರಿಯೇ. ಆದರೆ, ಅಭ್ಯರ್ಥಿಗಳು ನೈತಿಕತೆಯನ್ನು ಅಳವಡಿಸಿಕೊಳ್ಳದಿದ್ದರೆ ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ.