

ಕರೊನಾ ಮೂರನೆಯ ಅಲೆ ಸಾಧ್ಯತೆ ಬಗ್ಗೆ ಹಾಗೂ ಇದು ಬರುವುದಿಲ್ಲ ಎಂಬ ಆಶಾವಾದದ ನಡುವೆಯೇ, ಕರೊನಾ ರೂಪಾಂತರಿ ಒಮಿಕ್ರಾನ್ ಸುದ್ದಿಮಾಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ಈ ರೂಪಾಂತರಿ ಕ್ರಮೇಣ ವಿವಿಧ ದೇಶಗಳಿಗೆ ಹಬ್ಬುತ್ತಿದ್ದು, ನಮ್ಮ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಸಹ ಕೆಲ ಪ್ರಕರಣಗಳು ಪತ್ತೆಯಾಗಿವೆ. ಇದರ ಜತೆಗೆ, ನಮ್ಮ ರಾಜ್ಯದಲ್ಲಿ ಕೆಲ ವಿದ್ಯಾರ್ಥಿಗಳಲ್ಲಿ ಸಹ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಪಾಲಕರಲ್ಲಿ ಸ್ವಲ್ಪಮಟ್ಟಿಗೆ ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮೊದಲಿನ ಹಾಗೆ ಲಾಕ್ಡೌನ್ನಂತಹ ಕಠಿಣ ಕ್ರಮಗಳಿಗೆ ಮುಂದಾಗಬಹುದೆ ಎಂಬ ಚರ್ಚೆ ಸಹ ನಡೆದಿದೆ. ಆದರೆ, ಅಂಥ ಆಲೋಚನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲ ಲಘು ನಿರ್ಬಂಧಗಳನ್ನು ಸರ್ಕಾರ ಮುಂದುವರಿಸಿದೆ.
ಲಾಕ್ಡೌನ್, ರಾತ್ರಿ ಕರ್ಫ್ಯೂದಂತಹ ಕ್ರಮ ಬೇಡ ಎಂದಾದಲ್ಲಿ, ಜನರು ಗುಂಪು ಸೇರದಂತೆ ನಿಯಮಾವಳಿ ತನ್ನಿ ಎಂದು ತಜ್ಞರ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ. ಮದುವೆಗಳಿಗೆ ಜನರ ಸಂಖ್ಯೆ ತಗ್ಗಿಸುವುದು, ಕಾರ್ಯಕ್ರಮ, ಪ್ರತಿಭಟನೆಗಳಿಗೆ ಅವಕಾಶ ನೀಡದಿರುವುದು, ರಾಜಕೀಯ ಸಭೆ ಸಮಾರಂಭಗಳಿಗೆ ಕಡಿವಾಣ- ಮುಂತಾದ ಅಂಶಗಳು ತಜ್ಞರ ಸಮಿತಿಯ ಸಲಹೆಯಲ್ಲಿ ಸೇರಿವೆ. ಸಮಿತಿ ಇನ್ನು ಒಂದೆರಡು ದಿನಗಳಲ್ಲಿ ಕರೊನಾ ನಿಯಂತ್ರಣ ಸಲಹೆಗಳನ್ನು ವಿಸõತವಾಗಿ ನೀಡಲಿದ್ದು, ನಂತರದಲ್ಲಿ ಆ ಬಗ್ಗೆ ರ್ಚಚಿಸಿ ಹೊಸ ಮಾರ್ಗಸೂಚಿ ಪ್ರಕಟಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಲಸಿಕೆ ನೀಡುವಿಕೆಯ ವೇಗ ಹೆಚ್ಚಿಸುವ ಅನಿವಾರ್ಯತೆಯೂ ಸರ್ಕಾರದ ಗಮನದಲ್ಲಿದೆ ಎಂಬುದು ಸಿಎಂ ಮಾತಿನಿಂದ ವ್ಯವ್ತವಾಗುತ್ತದೆ. ಇದರೊಟ್ಟಿಗೆ, ಆರೋಗ್ಯ ಸವಲತ್ತುಗಳನ್ನು ಸನ್ನದ್ಧಸ್ಥಿತಿಯಲ್ಲಿರಿಸುವುದನ್ನು ನಿರ್ಲಕ್ಷಿಸಬಾರದು.
ಒಮಿಕ್ರಾನ್ ವೇಗವಾಗಿ ಹಬ್ಬುವುದು ಹೌದಾದರೂ, ಗಾಬರಿಯಾಗುವ ಅಗತ್ಯವೇನು ಇಲ್ಲ. ಅದು ರೋಗಿಗಳಲ್ಲಿ ಸೌಮ್ಯ ಲಕ್ಷಣಗಳನ್ನು ತೋರಿಸಿದ್ದು, ಅದು ಹಿಂದಿನ ಅಲೆಗಳಿಗಿಂತ ಪ್ರಬಲವಾಗೇನೂ ಇಲ್ಲ ಎಂದು ಅಂತಾರಾಷ್ಟ್ರೀಯ ತಜ್ಞರು ಸಹ ಹೇಳಿದ್ದು ಸ್ವಲ್ಪ ಸಮಾಧಾನ ಮೂಡಿಸುವಂತಿದೆ. ಹೀಗಿದ್ದರೂ, ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುವಂತಿಲ್ಲ. ಹಿಂದಿನ ಅಲೆಗಳ ಸಂದರ್ಭದಲ್ಲಿ ಏನಾಗಿದೆ ಎಂಬುದು ಇನ್ನೂ ಕಣ್ಣೆದುರಿಂದ ಮರೆಯಾಗಿಲ್ಲ. ಇದಲ್ಲದೆ, ಈಗ ಶಾಲಾಕಾಲೇಜುಗಳು ಸಹ ಪುನರಾರಂಭವಾಗಿವೆ. ಜನಜೀವನವನ್ನು ತೀವ್ರವಾಗಿ ನಿರ್ಬಂಧಿಸುವಂತಹ ಸನ್ನಿವೇಶವೇನು ಈಗ ನಿರ್ವಣವಾಗಿಲ್ಲ; ಅದು ಸಾಧ್ಯವೂ ಇಲ್ಲ. ರ್ಸಾಜನಿಕವಾಗಿ ಕೆಲಮಟ್ಟಿನ ನಿರ್ಬಂಧದ ಕ್ರಮಗಳು ಅನಿವಾರ್ಯ ಎಂಬ ಅರಿವಿನ ಜತೆಗೆ ಕರೊನಾ ಕಟ್ಟೆಚ್ಚರವೇ ಸದ್ಯದ ಸೂತ್ರವಾಗಬೇಕು.