ಸಂಪಾದಕೀಯ | ಗುಣಾತ್ಮಕ ಬದಲಾವಣೆ - ಕೊರತೆಗಳನ್ನು ನಿವಾರಿಸಲಿರುವ ಹೊಸ ಶಿಕ್ಷಣ ನೀತಿ

Education
Published on

‘ನಮ್ಮ ಶಿಕ್ಷಣ ವ್ಯವಸ್ಥೆಯೇ ಸರಿ ಇಲ್ಲ’ ಎಂದು ಹಲವು ದಶಕಗಳಿಂದ ದೂರಿಕೊಂಡು ಬರಲಾಗುತ್ತಿದೆಯೇ ಹೊರತು ಸುಧಾರಣೆ ನಿಟ್ಟಿನಲ್ಲಿ ಪ್ರಭುತ್ವದ ಕಡೆಯಿಂದ ನಡೆದ ಪ್ರಯತ್ನಗಳು ಕಡಿಮೆಯೆಂದೇ ಹೇಳಬಹುದು. ಈ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಪ್ರಸ್ತುತ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ರೂಪಿಸಿದ್ದು, ಅದು ಕಲಿಕಾ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರುವ ಸಾಧ್ಯತೆ ಇದೆ. ಈಗಾಗಲೇ ದೇಶದಾದ್ಯಂತ ಹೊಸ ಶಿಕ್ಷಣ ನೀತಿ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಶೈಕ್ಷಣಿಕ ವಲಯದಲ್ಲಂತೂ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರಗಳು 2030ರ ಹೊತ್ತಿಗೆ ಹಂತ-ಹಂತವಾಗಿ ಈ ಹೊಸ ನೀತಿಯನ್ನು ಜಾರಿಗೆ ತರಬೇಕಿದೆ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ರಾಜ್ಯಗಳಿಗೆ ಇದೆಯಾದರೂ, ಅದು ಹೊಸ ನೀತಿಯ ಮೂಲ, ಮುಖ್ಯ ಉದ್ದೇಶಗಳಿಗೆ ಧಕ್ಕೆ ಆಗದಂತಿರಬೇಕು. ಕರ್ನಾಟಕ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರೂಪಿಸಿ, ಅದರಿಂದ ವರದಿಯನ್ನೂ ಪಡೆದುಕೊಂಡಿದೆ. ಸಂಪುಟ ಸಭೆಯಲ್ಲಿ ರ್ಚಚಿಸಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕರ್ನಾಟಕ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ, ವಿಶೇಷ ಶೈಕ್ಷಣಿಕ ವಲಯಗಳ ಸ್ಥಾಪನೆ ಸೇರಿ ಸಮಿತಿ ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಲಿಕಾ ಕ್ರಮಕ್ಕೆ ಸಂಬಂಧಿಸಿ ಮತ್ತಷ್ಟು ಹೊಸ ವಿಚಾರಗಳು ಅನುಷ್ಠಾನಕ್ಕೆ ಬರಲಿದ್ದು, ಇವು ಹಳೆಯ ಕೊರತೆಗಳನ್ನು ನೀಗಿಸಲು ಪೂರಕವಾಗಲಿವೆ. ಮಕ್ಕಳು ಭಾರದ ಶಾಲಾಬ್ಯಾಗ್ ಹೊರುವ ಹಿಂಸೆ ಬಗ್ಗೆ ಅನೇಕ ವೇಳೆ ಚರ್ಚೆಯಾಗಿತ್ತಾದರೂ, ಸೂಕ್ತ ಪರಿಹಾರಸೂತ್ರವೇನೂ ಕಂಡುಬಂದಿರಲಿಲ್ಲ. ಹೊಸ ಶಿಕ್ಷಣ ನೀತಿ ಈ ಬಗ್ಗೆ ಗಮನ ಹರಿಸಿದ್ದು, ಮಕ್ಕಳು ಕೊಂಡೊಯ್ಯುವ ಸ್ಕೂಲ್​ಬ್ಯಾಗ್ ಭಾರಕ್ಕೂ ಮಾನದಂಡಗಳನ್ನು ರಚಿಸಿದೆ. 1-10ನೇ ತರಗತಿ ಮಕ್ಕಳ ಸ್ಕೂಲ್​ಬ್ಯಾಗ್ ಅವರ ದೇಹ ತೂಕದ ಶೇಕಡ 10ರಷ್ಟು ಇರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನಗಳನ್ನು ಆಧರಿಸಿ ಈ ಮಾನದಂಡ ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೂ, ಪಾಲಕರಿಗೂ ಮತ್ತೊಂದು ದೊಡ್ಡ ಸಮಸ್ಯೆ ಮನೆಪಾಠಕ್ಕೆ ಸಂಬಂಧಿಸಿದ್ದು. ಸಣ್ಣ ತರಗತಿಗಳಿಗೂ ಹೆಚ್ಚು ಮನೆಪಾಠ (ಹೋಮ್ರ್ಕ್) ಕೊಡುವುದರಿಂದ ಮಕ್ಕಳಿಗೆ ಬಾಲ್ಯವನ್ನು ಅನುಭವಿಸಲೇ ಆಗುತ್ತಿಲ್ಲ ಎಂಬ ಕಳವಳ ವ್ಯಾಪಕವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ಎರಡನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ರೀತಿಯ ಹೋಮ್ರ್ಕ ನೀಡುವಂತಿಲ್ಲ. 3, 4 ಹಾಗೂ 5ನೇ ತರಗತಿ ಮಕ್ಕಳಿಗೆ ವಾರಕ್ಕೆ ಎರಡು ತಾಸು, 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ದಿನಕ್ಕೆ ಎರಡು ತಾಸಿಗೂ ಹೆಚ್ಚಿನ ಅವಧಿಯ ಮನೆಪಾಠ ನೀಡುವಂತಿಲ್ಲ ಎಂದು ಶಿಫಾರಸು ಮಾಡಲಾಗಿದೆ. ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತಾಗಲು ಮತ್ತು ಇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಲಾಗಿದೆ. ಮಕ್ಕಳ ಮನೋವಿಕಾಸಕ್ಕೆ ಇವು ಪೂರಕವಾಗಿ ಪರಿಣಮಿಸಬಲ್ಲವು. ಹಾಗಾಗಿ, ಶಿಕ್ಷಣ ನೀತಿಯ ಜಾರಿಯಲ್ಲಾದರೂ ರಾಜ್ಯಗಳು ರಾಜಕೀಯ ಬೆರೆಸದೆ ಹೊಸ ಸುಧಾರಣೆಗಳನ್ನು ದಿಟ್ಟವಾಗಿ ಅನುಷ್ಠಾನಕ್ಕೆ ತರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net