

ಈ ಸಲ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅನುಮತಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಸಾರ್ವಜನಿಕವಾಗಿ ಗಣೇಶ ವಿಗ್ರಹ ಸ್ಥಾಪಿಸಲು, ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಬಂಧ ಹೇರಲಾಗಿತ್ತು. ಸದ್ಯ ನಾಲ್ಕನೇ ಅಲೆಯ ಆತಂಕ ಅಷ್ಟೇನೂ ಇಲ್ಲದಿರುವುದರಿಂದ ಧಾರ್ವಿುಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವವಿರುವ ಗಣೇಶೋತ್ಸವ ಆಚರಣೆಗೆ ಅವಕಾಶ ಒದಗಿಸಲು ಮುಂದಾಗಿರುವ ಸರ್ಕಾರದ ಕ್ರಮ ಸೂಕ್ತವೇ ಆಗಿದೆ.
ಗಣೇಶೋತ್ಸವಕ್ಕೆ ಆರ್ಥಿಕ ಆಯಾಮ ಕೂಡ ಇದೆ. ಕೋವಿಡ್ ಮೊದಲ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2020ರ ಮಾರ್ಚ್ 25ರಿಂದ 21 ದಿನಗಳ ಕಾಲ ಮೊದಲ ಲಾಕ್ಡೌನ್ ಹೇರಲಾಯಿತು. 1.5 ಲಕ್ಷಕ್ಕೂ ಅಧಿಕ ಜನರು ಮೊದಲ ಅಲೆಯಲ್ಲಿ ಸಾವನ್ನಪ್ಪಿದರು ಎಂದು ಅಂದಾಜಿಸಲಾಗಿದೆ. 2021ರ ಮಾರ್ಚ್ನಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿ, 3.20 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿತು. ಕೋವಿಡ್ ಮೂರನೇ ಅಲೆ ಅಗೋಚರ ವಾಗಿಯೇ ಕಣ್ಮರೆ ಯಾಯಿತು. ಈಗ ನಾಲ್ಕನೇ ಅಲೆಯ ಆತಂಕ ಮಾಯವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಒಮಿಕ್ರಾನ್ ಉಪತಳಿಯಿಂದಾಗಿ ಕರ್ನಾಟಕ ಹಾಗೂ ಇತರ ಕೆಲ ರಾಜ್ಯಗಳಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಏರಿಕೆ ಕಂಡಿದೆ. ಪ್ರಸ್ತುತ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಯುತ್ತಿದೆ. ಕೆಮ್ಮು, ನೆಗಡಿ, ಚಳಿಜ್ವರ ಮುಂತಾದ ಕಾಯಿಲೆಗಳು ಈ ಋತುವಿನಲ್ಲಿ ಬಾಧಿಸುತ್ತಲೇ ಇರುತ್ತವೆ.
ಈ ಬಗೆಗೂ ಎಚ್ಚರ, ಕಾಳಜಿ ಅಗತ್ಯ. ಕೋವಿಡ್ ಲಕ್ಷಣಗಳು ಕೂಡ ಇವುಗಳೇ ಆಗಿವೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 7 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೋವಿಡ್ ನಿಯಂತ್ರಣ ಕ್ರಮಗಳ ಪ್ರಚಾರ ಕೈಗೊಳ್ಳಲು ಹಾಗೂ ಲಸಿಕಾಕರಣ ಅಭಿಯಾನ ಚುರುಕುಗೊಳಿಸಲು ಸೂಚನೆ ನೀಡಿದೆ. ಈ 7 ರಾಜ್ಯಗಳಲ್ಲಿ ಕರ್ನಾಟಕ ಕೂಡ ಸೇರಿರುವುದು ಅಲ್ಪಮಟ್ಟಿಗೆ ಆತಂಕದ ವಿಷಯವೇ ಆಗಿದೆ. ರಾಜ್ಯದಲ್ಲಿ ಪ್ರತಿದಿನ 1300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಬಗೆಗೂ ಕೇಂದ್ರ ಗಮನಸೆಳೆದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಸಾರ್ವಜನಿಕವಾಗಿ ಪರಿಸರಸ್ನೇಹಿ ಗಣೇಶನನ್ನೇ ಪ್ರತಿಷ್ಠಾಪಿಸಬೇಕೆಂಬ ಷರತ್ತನ್ನು ಸರ್ಕಾರ ವಿಧಿಸಿದೆ. ಇದು ಎರಡು ರೀತಿಯಿಂದ ಸೂಕ್ತ ಕ್ರಮವೇ ಆಗಿದೆ. ಧಾರ್ವಿುಕ ದೃಷ್ಟಿಕೋನದಿಂದ ನೋಡಿದರೆ ಮಣ್ಣಿನ ಮೂರ್ತಿಯೇ ಶ್ರೇಷ್ಠ. ಏಕೆಂದರೆ, ಪುರಾಣಗಳ ಪ್ರಕಾರ ಪಾರ್ವತಿಯು ಗಣೇಶನನ್ನು ಮಣ್ಣಿನಿಂದ ಸೃಷ್ಟಿಸಿದ್ದು. ಮಣ್ಣು ನೀರಿನಲ್ಲಿ ಕರಗುವುದರಿಂದ ಪರಿಸರಕ್ಕೆ ಪೂರಕವಾಗಿದೆ. ಈ ಮೊದಲು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಬೃಹದಾಕಾರದ ಗಣಪತಿ ವಿಗ್ರಹಗಳನ್ನು ಸಾಮಾನ್ಯವಾಗಿ ಪಿಒಪಿಯಿಂದ ತಯಾರಿಸುವ ರೂಢಿಯಿತ್ತು.
ವಿಗ್ರಹ ತಯಾರಿಸಲು ಕಡಿಮೆ ಸಮಯ ಸಾಕು ಹಾಗೂ ಸಾಗಿಸಲು ಹಗುರ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಪಿಒಪಿ ವಿಗ್ರಹಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಜತೆಗೆ ಕರೊನಾ ಕುರಿತಂತೆಯೂ ಎಚ್ಚರ ವಹಿಸುವುದನ್ನು ಮುಂದುವರಿಸಬೇಕಿದೆ.