

ರಾಜ್ಯದ ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, 60 ಸಾವಿರ ಕುಟುಂಬಗಳಿಗೆ ವಾಸ್ತವ್ಯದ ಹಕ್ಕುಪತ್ರಗಳನ್ನು ನವೆಂಬರ್ ತಿಂಗಳಲ್ಲಿ ವಿತರಿಸಲಾಗುವುದು ಎಂದು ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ಖಾಸಗಿ ಜಮೀನುಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಹಾಗೂ ತಾಂಡಾ, ಹಟ್ಟಿ ಮುಂತಾದವುಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸೂಚನೆಯನ್ನು ಈ ಸುತ್ತೋಲೆ ಒಳಗೊಂಡಿದೆ. ಲಂಬಾಣಿ ತಾಂಡಾ, ವಡ್ಡರಹಟ್ಟಿ, ಗೊಲ್ಲರಹಟ್ಟಿ, ನಾಯಕರ ಹಟ್ಟಿ, ಕುರುಬರ ಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೊನಿಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ವಾಸದ ಹಕ್ಕುಪತ್ರಗಳಿರುವುದಿಲ್ಲ.
ಹೀಗಾಗಿ, ಸರ್ಕಾರಿ ಸೌಲಭ್ಯಗಳು ಸರಿಯಾಗಿ ಲಭಿಸುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಇರುವ ಈ ಗ್ರಾಮಗಳು ಕಂದಾಯ ಗ್ರಾಮದ ವ್ಯಾಪ್ತಿಗೆ ಬಾರದ ಕಾರಣ ಪ್ರಮುಖವಾಗಿ ಮೂಲಸೌಕರ್ಯ ಅಭಿವೃದ್ಧಿಯಿಂದ ವಂಚಿತವಾಗುತ್ತವೆ. ಇಲ್ಲಿರುವ ಆಸ್ತಿಗಳಿಗೆ ಯಾವುದೇ ಸೂಕ್ತ ದಾಖಲೆ ಇರುವುದಿಲ್ಲ. ಇದರಿಂದಾಗಿ, ಯಾರ ಆಸ್ತಿ ಎಷ್ಟಿದೆ ಎಂಬ ಬಗೆಗೆ ಸ್ಪಷ್ಟತೆ ಇಲ್ಲದೆ ಗೊಂದಲಗಳು ಹಾಗೆಯೇ ಉಳಿದುಕೊಂಡು ತಂಟೆ-ತಕರಾರಿಗೂ ಆಸ್ಪದ ನೀಡುತ್ತವೆ. ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ, ಆಸ್ತಿಯನ್ನು ಅಭಿವೃದ್ಧಿಪಡಿಸಲು ಸಾಲ ಹಾಗೂ ಅಡಮಾನ ಸಾಲ ಕೂಡ ದೊರೆಯುವುದಿಲ್ಲ. ಕಂದಾಯ ಗ್ರಾಮವಾಗಿ ಪರಿವರ್ತಿತವಾದರೆ ವಾಸದ ಹಕ್ಕುಪತ್ರ ದೊರೆತು ಜೀವನ ಭದ್ರತೆ ಲಭಿಸುತ್ತದೆ. ಅಧಿಕೃತವಾಗಿ ಗ್ರಾಮವಾಗಿ ಅದಕ್ಕೊಂದು ಮಾನ್ಯತೆ ಸಿಗುತ್ತದೆ. ವಸತಿ ಯೋಜನೆ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳು ಜನರಿಗೆ ಲಭಿಸುತ್ತವೆ. ಈ ಎಲ್ಲ ಸಂಗತಿಗಳ ಅರಿವಿನ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಉಪನೋಂದಣಿ ಕಚೇರಿಯಲ್ಲಿಯೇ ನೋಂದಣಿ ಮಾಡಿಸುವ ಹಕ್ಕುಪತ್ರವನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದು, ಅದು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬರುವ ಅಗತ್ಯವಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲೇ ಕಂದಾಯ ಗ್ರಾಮಗಳ ಪರಿವರ್ತನೆ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಿ ಮಾರ್ಗಸೂಚಿ ರಚಿಸಲಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳಿಂದ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಶೇ. 90ಕ್ಕೂ ಅಧಿಕ ಭೂಮಿ ಸರ್ಕಾರಿ ಒಡೆತನಕ್ಕೆ ಸೇರಿರುವುದರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇಲ್ಲ. ಗ್ರಾಮವು ಖಾಸಗಿ ಭೂಮಿಯಲ್ಲಿದ್ದರೆ ಸಂಬಂಧಪಟ್ಟ ಭೂಮಾಲಿಕರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಉದ್ದೇಶಿಸಿದೆ. ರಾಜ್ಯದಲ್ಲೆ ಅತಿ ಹೆಚ್ಚು ದಾಖಲೆರಹಿತ ಲಂಬಾಣಿ ತಾಂಡಾಗಳು ವಿಜಯಪುರ ಜಿಲ್ಲೆಯಲ್ಲಿದ್ದು, ಈಗ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುತ್ತಿದೆ. ಹಕ್ಕುಪತ್ರ ವಿತರಿಸಲು ಮೊದಲ ಹಂತದಲ್ಲಿ ಯಾದಗಿರಿ, ರಾಯಚೂರು, ಬೀದರ, ವಿಜಯಪುರ, ದಾವಣಗೆರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಈಗ ಸಚಿವರು ಪ್ರಕಟಿಸಿರುವಂತೆ ಹಕ್ಕುಪತ್ರ ವಿತರಣೆಯಾದರೆ ಅದೊಂದು ದಾಖಲೆಯೇ ಆಗಲಿದೆ. ಏಕಕಾಲಕ್ಕೆ ಇದುವರೆಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಕ್ಕುಪತ್ರಗಳನ್ನು ವಿತರಿಸಿದ್ದಿಲ್ಲ. ಇಂತಹ ಗ್ರಾಮಗಳಲ್ಲಿ ಬಹುತೇಕವಾಗಿ ಹಿಂದುಳಿದವರೇ ವಾಸಿಸುತ್ತಿದ್ದು, ವಾಸ್ತವ್ಯದ ಹಕ್ಕುದಾಖಲೆಗಳನ್ನು ಒದಗಿಸಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಅನುವಾಗುತ್ತದೆ.