ಬಡ್ಡಿ ಹೆಚ್ಚಳದ ಆತಂಕ: ರೆಪೊ ದರ ಏರಿಕೆ, ಹಣದುಬ್ಬರ ಅಲ್ಪ ಇಳಿಕೆ

Editorial
Published on

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೊ ದರ ಏರಿಕೆ ಮಾಡಿದೆ. ಈ ಬಾರಿ 25 ಅಂಕಗಳಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಕಳೆದ ಮೇ ತಿಂಗಳಿಂದ ಇದುವರೆಗೆ ರೆಪೋ ದರವು ಒಟ್ಟಾರೆಯಾಗಿ 250 ಅಂಕ ಏರಿಕೆಯಾಗಿರುವುದು ಸಾಲಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. 2023ರ ಮಾರ್ಚ್ ವೇಳೆಗೆ ಬಡ್ಡಿ ದರವು ಶೇ. 6.5ಕ್ಕೆ ಏರಿಕೆಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹಣಕಾಸು ನೀತಿ ಸಭೆಯ ವರದಿಯಲ್ಲಿ ಕಳೆದ ಡಿಸೆಂಬರ್​ನಲ್ಲಿ ಪ್ರಸ್ತಾಪವಾಗಿರುವುದು ಈ ಮೂಲಕ ನಿಜವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಮೇ ತಿಂಗಳಿನಿಂದ ಇದುವರೆಗೆ ಕೈಗೊಳ್ಳಲಾದ ಆರನೇ ರೆಪೋ ದರ ಏರಿಕೆ ಇದಾಗಿದ್ದು, ಒಟ್ಟಾರೆಯಾಗಿ ಶೇ. 2.5ರಷ್ಟು ಬಡ್ಡಿ ದರ ಹೆಚ್ಚಳ ಮಾಡಲಾಗಿದೆ.

ಈ ಹಣಕಾಸು ವರ್ಷದ ಮೇ 4ರಂದು 40 ಮೂಲ ಅಂಕಗಳಷ್ಟು ಬಡ್ಡಿ ದರವನ್ನು ಹೆಚ್ಚಳ ಮಾಡಿತ್ತು. ನಂತರ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮೂರು ಬಾರಿ ತಲಾ 50 ಮೂಲ ಅಂಕಗಳಷ್ಟು ಏರಿಸಲಾಗಿತ್ತು. ಕಳೆದ ಡಿ. 6ರಂದು 35 ಅಂಕ ಏರಿಸಲಾಗಿತ್ತು. ನಿರಂತರವಾಗಿ ರೆಪೊ ದರ ಹೆಚ್ಚಳದ ಪರಿಣಾಮವನ್ನು ಸಾಲಗಾರರು ಎದುರಿಸುವಂತಾಗಿದೆ. ಇದರಿಂದಾಗಿ, ಸಾಲ ಮರುಪಾವತಿಯ ಕಂತುಗಳ ಮೊತ್ತ ಅಥವಾ ಸಾಲ ಮರುಪಾವತಿ ಅವಧಿ ಈಗಾಗಲೇ ಸಾಕಷ್ಟು ಅಧಿಕವಾಗಿದ್ದು, ಈಗ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಇದೇ ವೇಳೆ ಠೇವಣಿಗಳ ಬಡ್ಡಿ ದರ ಏರಿಕೆಯಾಗುವುದೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ಸಾಮಾನ್ಯವಾಗಿ ಹಣದುಬ್ಬರ ಹೆಚ್ಚಳವಾದಾಗ ಅಂದರೆ ಬೆಲೆ ಏರಿಕೆಯಾದಾಗ ಆರ್​ಬಿಐ ರೆಪೊ ದರ ಏರಿಕೆ ಅಸ್ತ್ರವನ್ನು ಪ್ರಯೋಗಿಸುತ್ತದೆ. ಆದರೆ, ಈಗ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ ರೆಪೊ ದರ ಏರಿಸಿರುವ ನಡೆ ಅಚ್ಚರಿ ಮೂಡಿಸುವಂತಿದೆ. ಭಾರತದ ವಾರ್ಷಿಕ ಚಿಲ್ಲರೆ ಹಣದುಬ್ಬರ ದರವು 2022ರ ನವೆಂಬರ್ ತಿಂಗಳಲ್ಲಿ ಶೇ. 5.88ರಿಂದ ಡಿಸೆಂಬರ್​ನಲ್ಲಿ 5.72ಕ್ಕೆ ಇಳಿದಿದೆ. ಹಣದುಬ್ಬರ ಶೇ. 6ರ ಗಡಿ ದಾಟಬಾರದು ಎಂಬ ಆರ್​ಬಿಐ ನಿರೀಕ್ಷೆಯ ಮಿತಿಯೊಳಗೆ ಇದು ಇರುವುದು ಸಮಾಧಾನಕರ ಸಂಗತಿಯಾಗಿದೆ. ಜಾಗತಿಕ ಆರ್ಥಿಕ ಸ್ಥಿತಿಯು ಕಳವಳಕಾರಿಯಾಗಿದೆ ಎಂದು ಕೆಲ ತಿಂಗಳುಗಳ ಹಿಂದೆ ಅಂದಾಜಿಸಲಾಗಿತ್ತು. ಈಗ ಸ್ಥಿತಿ ಸುಧಾರಿಸುತ್ತಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಜಿಡಿಪಿ (ಒಟ್ಟು ದೇಶಿಯ ಉತ್ಪಾದನೆ) ಬೆಳವಣಿಗೆಯು ಶೇಕಡಾ 6.4 ಎಂದು ನಿರೀಕ್ಷಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿರುವುದು ಆಶಾದಾಯಕ ಸಂಗತಿಗಳಾಗಿವೆ. ಹಿಂಡನ್​ಬರ್ಗ್ ರಿಸರ್ಚ್​ನ ಪ್ರತಿಕೂಲ ವರದಿಯ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್​ನಲ್ಲಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಆರ್​ಬಿಐ ಗವರ್ನರ್, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಶಕ್ತಿ, ಗಾತ್ರ ಮತ್ತು ಸ್ಥಿತಿಸ್ಥಾಪಕತ್ವವು ಈಗ ಹೆಚ್ಚು ಪ್ರಬಲವಾಗಿದ್ದು, ಇಂತಹ ಪ್ರಕರಣದಿಂದ ಬಾಧಿತವಾಗುವುದಿಲ್ಲ ಹಾಗೂ ಬ್ಯಾಂಕ್​ಗಳ ಮೌಲ್ಯಮಾಪನ ವ್ಯವಸ್ಥೆ ಹಿಂದಿಗಿಂತಲೂ ಸುಧಾರಿಸಿದೆ ಎಂದು ಹೇಳುವ ಮೂಲಕ ಸಕಾರಾತ್ಮಕ ನೋಟ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net