ಸಂಪಾದಕೀಯ | ಸಂಯಮ ಇರಲಿ; ವಿದ್ಯಾರ್ಥಿಗಳ ನಡುವೆ ಸಂಘರ್ಷ ತರವಲ್ಲ

Editorial
Published on

ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಈಗ ಕೇವಲ ಪರ-ವಿರೋಧ ವಾದದ ಹಂತ ದಾಟಿರುವುದು ಕಳವಳದ ಸಂಗತಿ. ಅದರಲ್ಲೂ, ಒಂದೇ ಶಾಲಾಕಾಲೇಜಿನಲ್ಲಿ ಒಂದೇ ಕಡೆ ಕುಳಿತು ಓದಬೇಕಾದ ವಿದ್ಯಾರ್ಥಿಗಳ ನಡುವೆ ಈ ರೀತಿಯ ಬೆಳವಣಿಗೆ ನಡೆಯುವುದು ಆರೋಗ್ಯಕರ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾದುದಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳು, ಪಾಲಕರು, ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಎಲ್ಲರೂ ಸಂಯಮ ಮೆರೆದು, ವಿವೇಚನೆಯಿಂದ ವರ್ತಿಸಿ ಸಮಸ್ಯೆ ಬಗೆಹರಿಸುವತ್ತ ಮನಸ್ಸು ಮಾಡಬೇಕು. ಈ ವಿಷಯದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಈ ನಡುವೆ, ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ಮಂಗಳವಾರ ಆರಂಭವಾಗಿದ್ದು, ಕೋರ್ಟ್ ತೀರ್ಪಿನತ್ತ ಎಲ್ಲರ ಗಮನ ನೆಟ್ಟಿದೆ. ಮಂಗಳವಾರ ರಾಜ್ಯದ ಹಲವೆಡೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಅಹಿತಕರ ಘಟನೆಗಳು ನಡೆದಿದ್ದು, ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಸರ್ಕಾರ, ಮೂರು ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಷಯದ ಪರ-ವಿರೋಧ ಅಭಿಪ್ರಾಯಗಳು ಇರುವುದು ಅಸಹಜವಲ್ಲ. ಆ ತರಹ ಇದ್ದರೆ ಸೂಕ್ತ ವೇದಿಕೆಯಲ್ಲಿ ಮಾತುಕತೆ-ಚರ್ಚೆ ಮೂಲಕ ಅದನ್ನು ಬಗೆಹರಿಸಿಕೊಳ್ಳಬೇಕೆ ವಿನಾ ಬೀದಿಗಿಳಿಯುವುದು ಪರಿಹಾರ ಆಗದು. ಅದರಲ್ಲೂ ಎರಡು ವರ್ಷಗಳಿಂದ ಕರೊನಾ ಕಾರಣದಿಂದಾಗಿ ಶಾಲಾಕಾಲೇಜುಗಳು ಸರಿಯಾಗಿ ನಡೆಯದೆ, ಕಲಿಕಾ ಪ್ರಕ್ರಿಯೆ ಹಿಂದೆಬಿದ್ದಿದೆ. ಭೌತಿಕ ತರಗತಿಗಳಿಲ್ಲದ ಕಾರಣಕ್ಕೆ ಆನ್​ಲೈನ್ ಮೂಲಕ ಕಲಿಕೆಯನ್ನು ಮುಂದುವರಿಸಲಾಗಿದೆಯಾದರೂ, ಈ ಮಾದರಿಯಲ್ಲಿನ ಕಲಿಕಾ ಪ್ರಗತಿ ಬಗ್ಗೆ ಯಾವ ವಲಯದಲ್ಲೂ ಅಷ್ಟು ತೃಪ್ತಿ ಕಂಡುಬರುತ್ತಿಲ್ಲ. ಕರೊನಾ ಮೂರನೆಯ ಅಲೆಯೂ ಬಂದು ಅದೀಗ ಸ್ವಲ್ಪ ಶಾಂತವಾಗುತ್ತಿದೆ ಎನಿಸುವ ಹೊತ್ತಲ್ಲಿ ಈಗಷ್ಟೆ ಶಾಲಾಕಾಲೇಜುಗಳು ಮತ್ತೆ ಆರಂಭವಾಗಿವೆ. ದ್ವಿತೀಯ ಪಿಯುಸಿ, ಎಸ್​ಎಸ್​ಎಲ್​ಸಿ ಮುಂತಾದ ಪ್ರಮುಖ ತರಗತಿಗಳ ವಾರ್ಷಿಕ ಪರೀಕ್ಷೆಗಳ ದಿನಾಂಕ ಸಹ ಪ್ರಕಟವಾಗಿದೆ.

ವಿದ್ಯಾರ್ಥಿಗಳು ಗಂಭೀರವಾಗಿ ಓದಿನಲ್ಲಿ ತೊಡಗಿಸಿಕೊಳ್ಳಬೇಕಾದ ಸಮಯ ಇದು. ಈ ಹಂತದಲ್ಲಿ ಹಿಜಾಬ್, ಕೇಸರಿ ಶಾಲು ಇತ್ಯಾದಿ ವಿವಾದ ಎದ್ದಿರುವುದು ನಿಜಕ್ಕೂ ಖೇದಕರ. ಈ ವಿಷಯ ವಿದ್ಯಾರ್ಥಿಗಳ ನಡುವೆ ಕಂದಕ ಉಂಟುಮಾಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ರಾಜಕೀಯ ಪಕ್ಷಗಳು ಬೆಂಕಿಗೆ ತುಪ್ಪಸುರಿಯುವ ಕೆಲಸ ಮಾಡದೆ, ವಾತಾವರಣವನ್ನು ತಿಳಿಗೊಳಿಸುವ, ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಮೂಡಿಸುವ ಕಾರ್ಯ ಮಾಡಬೇಕಿದೆ. ಉಚ್ಚ ನ್ಯಾಯಾಲಯದ ತೀರ್ಪನ್ನು ನೋಡಿಕೊಂಡು, ಸೂಕ್ತ ಕ್ರಮ ಕೈಗೊಂಡು, ವಿವಾದವನ್ನು ಪರಿಹರಿಸಿ, ಶೈಕ್ಷಣಿಕ ಚಟುವಟಿಕೆಗಳು ಸಹಜಸ್ಥಿತಿಗೆ ಬರುವಂತೆ ಮಾಡಬೇಕಿದೆ. ವಿದ್ಯಾರ್ಥಿಗಳು, ಪಾಲಕರು, ರಾಜಕೀಯ ನಾಯಕರು- ಹೀಗೆ ಎಲ್ಲರೂ ಈ ಕಾರ್ಯದಲ್ಲಿ ಸರ್ಕಾರದ ಜತೆ ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net