

ಬರ್ವಿುಂಗ್ಹ್ಯಾಂನಲ್ಲಿ ನಡೆದ 22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟ ಸೋಮವಾರ ಸಂಪನ್ನಗೊಂಡಿದ್ದು, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಭಾರತ ಬೀಗಿದೆ. ಕಾಮನ್ವೆಲ್ತ್ ಗೇಮ್ಸ್ನ ಕೊನೆಯ ದಿನವಾದ ಸೋಮವಾರ ಐದು ಸ್ವರ್ಣ, ಮೂರು ರಜತ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ಭಾರತ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿತು. ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಭಾರತದ ಐದನೇ ಶ್ರೇಷ್ಠ ನಿರ್ವಹಣೆಯಾಗಿದ್ದು, ಪ್ರಮುಖ ದೇಶಗಳಿಗೆ ತುರುಸಿನ ಪೈಪೋಟಿ ನೀಡಿತು. 2010ರ ದೆಹಲಿ ಗೇಮ್ಸ್ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ ಸಹಿತ 101 ಪದಕ ಗೆದ್ದಿದ್ದು ಭಾರತದ ಈವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಈ ಮೂಲಕ, ಕಾಮನ್ವೆಲ್ತ್ ಗೇಮ್್ಸ ಇತಿಹಾಸದಲ್ಲಿ ಭಾರತ ಗಳಿಸಿದ ಒಟ್ಟಾರೆ ಸ್ವರ್ಣ ಪದಕ 203ಕ್ಕೇರಿದ್ದು, 200ಕ್ಕಿಂತ ಅಧಿಕ ಚಿನ್ನದ ಪದಕಗಳನ್ನು ಗೆದ್ದ 4ನೇ ದೇಶವಾಗಿದೆ.
ಈ ಸಾಧನೆ ಭಾರತದ ಕ್ರೀಡಾ ವಲಯಕ್ಕೆ ಹಾಗೂ ಕ್ರೀಡಾಸಕ್ತರಿಗೆ ಉತ್ತೇಜನ, ಪ್ರೇರಣೆ ನೀಡುವಂಥದು. ಆದರೆ ಇಂಥ ಉತ್ಸಾಹ ತಾತ್ಕಾಲಿಕವಾಗಿರದೆ ನಿರಂತರವಾಗಿ ಮುಂದುವರಿದರೆ ಮಾತ್ರ ದೀರ್ಘಕಾಲೀನ ನೆಲೆಯಲ್ಲಿ ದೇಶವು ಕ್ರೀಡಾರಂಗದಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚಲು ಸಾಧ್ಯವಾಗುತ್ತದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಒಲಿಂಪಿಕ್ಸ್ನಂತಹ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಇನ್ನಷ್ಟು ಸಾಧನೆಗೈಯುವ ನಿಟ್ಟಿನಲ್ಲಿ ಭಾರತ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ ಎಂದು ಕ್ರೀಡಾತಜ್ಞರು ಬೊಟ್ಟುಮಾಡುತ್ತಾರೆ. ಮೊದಲಿಗೆ ಹೋಲಿಸಿದರೆ ಈಗ ದೇಶದಲ್ಲಿ ಕ್ರೀಡೆಗೆ ಉತ್ತೇಜನಗಳು ಹೆಚ್ಚಿಗೆ ದೊರೆಯುತ್ತಿವೆ ಎಂಬುದು ಹೌದಾದರೂ, ಕ್ರೀಡೆಯಲ್ಲಿ ಮುಂದಿರುವ ದೇಶಗಳಲ್ಲಿ ಇನ್ನೂ ಹೆಚ್ಚಿನ ಸವಲತ್ತು ದೊರೆಯುತ್ತವೆ. ಕ್ರೀಡೆಯಲ್ಲಿ ಜೀವನದ ಭವಿಷ್ಯವಿದೆ ಎಂಬುದು ಮನದಟ್ಟಾದಲ್ಲಿ ಹೆಚ್ಚೆಚ್ಚು ಯುವಜನರನ್ನು ಇತ್ತ ಆಕರ್ಷಿಸಬಹುದು. ಒಲಿಂಪಿಕ್ಸ್ನಲ್ಲಿ ಭಾರತ ಸಾಧನೆಗೈಯಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯವು 2014ರಲ್ಲಿ ‘ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ ಆರಂಭಿಸಿತು. ಈ ಯೋಜನೆಯಡಿ ಆಯ್ಕೆಯಾದ ಕ್ರೀಡಾಳುಗಳಿಗೆ ತರಬೇತಿ ಇತ್ಯಾದಿ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಕ್ರೀಡಾಪಟುಗಳು ಹಣಕಾಸು ಅಥವಾ ತರಬೇತಿ ವ್ಯವಸ್ಥೆಯ ಬಗ್ಗೆ ತಲೆಬಿಸಿಯಿಲ್ಲದೆ, ಆಟೋಟ ಅಭ್ಯಾಸದಲ್ಲಿ ತೊಡಗಬಹುದು. ಮುಂಚೆ ಆಯಾ ಕ್ರೀಡಾ ಸಂಸ್ಥೆಗಳ ಮುಖಾಂತರ ಕ್ರೀಡಾಪಟುಗಳಿಗೆ ಹಣ ಸಂದಾಯವಾಗುತ್ತಿತ್ತು.
ಈ ಯೋಜನೆಯಲ್ಲಿ, ಸರ್ಕಾರದಿಂದ ನೇರವಾಗಿ ಆಟಗಾರರಿಗೆ ಹಣ ಜಮಾ ಆಗುವಂತೆ ಮಾಡಲಾಗಿದೆ. ಈ ಯೋಜನೆಯ ಫಲಿತಾಂಶ ಈಗಾಗಲೇ ಕಂಡುಬರುತ್ತಿರುವುದು ಸಕಾರಾತ್ಮಕ ಅಂಶ. ಇದಲ್ಲದೆ, ದೈಹಿಕವಾಗಿ ಸದೃಢವಾಗಿರುವ ಕೆಲ ಬುಡಕಟ್ಟು ಸಮುದಾಯದ ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸುವ ಬಗ್ಗೆ ಹಿಂದೆಯೂ ಪ್ರಯತ್ನಗಳು ನಡೆದಿದ್ದು, ಅಂಥ ಉಪಕ್ರಮಗಳನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದಾಗಿದೆ. ಯಾವುದೇ ಕ್ರೀಡೆಯಲ್ಲಿ ಸಾಧನೆಗೈಯಲು ಉತ್ತಮ ವ್ಯವಸ್ಥೆ, ತರಬೇತಿ ಹಾಗೂ ಪ್ರೋತ್ಸಾಹ ಕೂಡ ಮುಖ್ಯವಾಗುತ್ತದೆ. ಅಲ್ಲದೆ, ಕ್ರೀಡಾಮನೋಭಾವ ಮತ್ತು ಆಸಕ್ತಿ ಚಿಕ್ಕಂದಿನಿಂದಲೇ ಬೆಳೆಯಬೇಕಾದ ಗುಣಾಂಶವಾಗಿದ್ದು, ಶಾಲಾ ಪರಿಸರದಲ್ಲಿಯೇ ಇದಕ್ಕೆ ಹೆಚ್ಚು ಒತ್ತು ಕೊಟ್ಟರೆ ಭವಿಷ್ಯದಲ್ಲಿ ಪ್ರಯೋಜನವಾಗುತ್ತದೆ. ಆದರೆ, ದುರಂತ ಎಂದರೆ, ನಮ್ಮಲ್ಲಿ ಎಷ್ಟೋ ಶಾಲೆಗಳಲ್ಲಿ ಕ್ರೀಡಾಂಗಣಗಳೇ ಇರುವುದಿಲ್ಲ. ಮಕ್ಕಳ ಅಂಕಗಳಿಕೆಗೆ ಒತ್ತು ನೀಡಿ, ಓದುವುದಕ್ಕೆ ಮಾತ್ರ ತೊಡಗಿಸಿ, ಅವರನ್ನು ಉದ್ಯೋಗ ಮಾರುಕಟ್ಟೆಗೆ ಸಜ್ಜಾಗಿಸುವ ಭರಾಟೆಯಲ್ಲಿ ಮಕ್ಕಳ ಕ್ರೀಡಾಸಕ್ತಿಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿಲ್ಲ; ಇದಕ್ಕೆ ಎಲ್ಲೋ ಕೆಲವು ಅಪವಾದಗಳಿರಬಹುದು. ಸಣ್ಣ ವಯಸ್ಸಿನಲ್ಲೇ ಕ್ರೀಡಾಸಂಸ್ಕಾರ ರೂಢಿಸಿದಲ್ಲಿ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೂ ಅನುಕೂಲವಾಗುತ್ತದೆ.