ಸೂಕ್ತ ಪರಿಹಾರ ಅಗತ್ಯ; ಕೇಂದ್ರ ಸರ್ಕಾರದಿಂದ ಅಧಿಕ ನೆರವು ನಿರೀಕ್ಷೆ

Editorial
Published on

ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ ಅತಿವೃಷ್ಟಿ ಹಾಗೂ ಭೂಕುಸಿತದಿಂದ ಉಂಟಾದ ಹಾನಿಯ ಅಧ್ಯಯನ ಮಾಡಲು ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿದೆ. ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಅಶಿಶ್​ಕುಮಾರ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಸಮಿತಿಯ ನಾಲ್ಕು ತಂಡಗಳು ಪ್ರತ್ಯೇಕವಾಗಿ ರಾಜ್ಯದ ವಿವಿಧೆಡೆ ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ. ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದ ನಷ್ಟ ಸಂಭವಿಸಿದಾಗ ಈ ರೀತಿ ಕೇಂದ್ರ ತಂಡ ಭೇಟಿ ನೀಡಿ ಅಧ್ಯಯನ ಕೈಗೊಳ್ಳುವುದು ಔಪಚಾರಿಕ ನಡೆ. ಆದರೆ, ರಾಜ್ಯ ಕಳಿಸುವ ಹಾನಿ ಪರಿಹಾರದ ಮೊತ್ತಕ್ಕೂ, ಕೇಂದ್ರ ಸರ್ಕಾರದಿಂದ ಸಿಗುವ ನೆರವಿಗೂ ಅಜಗಜಾಂತರ ಇರುವುದು ಗೊತ್ತಿರುವ ಸಂಗತಿಯೇ.

2021ರಲ್ಲಿ ಅತಿವೃಷ್ಟಿಯಿಂದ 14,93,811 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಒಟ್ಟು 18.52 ಲಕ್ಷ ರೈತರಿಗೆ 2446 ಕೋಟಿ ರೂಪಾಯಿ ಪರಿಹಾರ ನೀಡಲಾಗಿತ್ತು. ಇದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎಸ್​ಡಿಆರ್​ಎಫ್) ವತಿಯಿಂದ ಲಭಿಸಿದ್ದು 1285.58 ಕೋಟಿ ರೂಪಾಯಿ ಮಾತ್ರ. ಪ್ರಸ್ತುತ ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಒಟ್ಟು 1,37,029 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಕಳೆದ ತಿಂಗಳು ಅಂದಾಜಿಸಲಾಗಿದೆ. ಇದರಲ್ಲಿ 1,29,087 ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೆ ಈಡಾಗಿವೆ. ಈಗ ಅತಿವೃಷ್ಟಿ ಮುಂದುವರಿದಿರುವುದರಿಂದ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವುದು ನಿಶ್ಚಿತವಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ಬೆಳೆ ಹಾನಿ ಪರಿಹಾರ ಸಹಾಯಧನ ಪರಿಷ್ಕರಿಸಲಾಗಿದೆ. ಅದರ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 16,800 ರೂಪಾಯಿ, ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್​ಗೆ 25,500 ರೂಪಾಯಿ ಪರಿಹಾರ ನೀಡಲಾಗುವುದು. ಬಹುವಾರ್ಷಿಕ ಬೆಳೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್​ಗೆ 28,000 ರೂಪಾಯಿ ಪರಿಹಾರ ಧನ ನಿಗದಿ ಮಾಡಲಾಗಿದೆ. ಆದರೆ,ಈ ಪರಿಹಾರವು ವಾಸ್ತವದಲ್ಲಿ ರೈತರು ಅನುಭವಿಸುವ ನಷ್ಟಕ್ಕಿಂತ ತೀರ ಕಡಿಮೆಯಿದ್ದು, ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕೆಂಬ ಆಗ್ರಹ ರೈತರದು. ಈ ಪರಿಹಾರ ಕೂಡ ಪೂರ್ಣ ಪ್ರಮಾಣದಲ್ಲಿ ಹಾಗೂ ಸಕಾಲದಲ್ಲಿ ರೈತರಿಗೆ ತಲುಪುವ ಖಚಿತತೆ ಕೂಡ ಇಲ್ಲದಂತಹ ಪರಿಸ್ಥಿತಿ ಕೆಲವೆಡೆ ಇದೆ.

ಮಳೆಹಾನಿ ವೀಕ್ಷಿಸಲು ಕೇಂದ್ರ ಸರ್ಕಾರ ಕಳಿಸಿಕೊಟ್ಟಿರುವ ಅಧಿಕಾರಿಗಳ ಸಮಿತಿ ಮುಂದೆ ರಾಜ್ಯ ಸರ್ಕಾರವು ವಿಶೇಷ ನೆರವಿನ ಅಗತ್ಯವನ್ನು ಪ್ರತಿಪಾದಿಸಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ, ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳೆನಷ್ಟ, ಜೀವಹಾನಿಗೆ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಇದರ ಜತೆಗೆ, ರಸ್ತೆ, ಸೇತುವೆ, ಚರಂಡಿ, ಸರ್ಕಾರಿ ಕಟ್ಟಡ ಸೇರಿದಂತೆ ಸಾರ್ವಜನಿಕ ಸೌಲಭ್ಯಗಳಿಗೆ ಉಂಟಾಗುವ ಹಾನಿ ವ್ಯಾಪಕವಾಗಿರುತ್ತದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರದಿಂದ ಅಧಿಕ ನೆರವು ನಿರೀಕ್ಷಿಸುವುದು ಸಹಜವೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net