

ಅಭಿವೃದ್ಧಿಯ ಗುರಿಸಾಧನೆಗೆ ಬೇಕಾದ ಹಲವು ಮೂಲಸೌಕರ್ಯಗಳ ಪೈಕಿ ವಿದ್ಯುತ್ ಪ್ರಮುಖವಾದುದು. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಿದ್ದು, ಬೇಡಿಕೆ ಏರುಮುಖವಾಗುತ್ತಲೇ ಇದೆ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಜತೆಗೆ ವಿದ್ಯುತ್ನ್ನು ಮಿತವಾಗಿ ಬಳಸುವ ಸಂಕಲ್ಪ ಜನಾಂದೋಲನದ ಸ್ವರೂಪ ತಳೆಯಬೇಕಾಗಿದೆ. ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ನಾವು ಸಕ್ಷಮರಾಗುತ್ತಿದ್ದೇವೆ ಎಂದರೆ ಅದು ಸುಧಾರಣೆಯ ಅಂಶವೇನಲ್ಲ. ಏಕೆಂದರೆ, ಈ ವಿಷಯವನ್ನು ಪರಿಸರದ ದೃಷ್ಟಿಯಿಂದಲೂ ನೋಡುವುದು ಅಗತ್ಯ. ತಾಪಮಾನ ಏರಿಕೆಯಿಂದ ಆಗುತ್ತಿರುವ ಹಾನಿಗಳ ಬಗ್ಗೆ ಇತ್ತೀಚೆಗೆ ಹಲವು ಜಾಗತಿಕ ವರದಿಗಳು ಎಚ್ಚರಿಕೆ ನೀಡಿವೆ. ಈ ನಡುವೆ ಇಂಧನ ಇಲಾಖೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆರ್ಥಿಕ ಮುಗ್ಗಟ್ಟು ಕೂಡ ಕಾಡುತ್ತಿದೆ. ಹಾಗಾಗಿಯೇ, ವಿದ್ಯುತ್ ಬಳಕೆ, ಬೇಡಿಕೆ, ಹೂಡಿಕೆ ಹಾಗೂ ಬದ್ಧತಾ ವೆಚ್ಚ ಸರಿದೂಗಿಸುವುದಕ್ಕಾಗಿ ಸರ್ಕಾರ ಹಲವು ಕಸರತ್ತುಗಳಲ್ಲಿ ತೊಡಗಿದೆ. ಈಗ ಮಹತ್ವದ ಹೆಜ್ಜೆಯಾಗಿ, ನೀರಾವರಿ ಪಂಪ್ಸೆಟ್ಗಳ (ಐಪಿ ಸೆಟ್) ಉಚಿತ ವಿದ್ಯುತ್ ಪೂರೈಕೆ ಸೌಕರ್ಯ ತ್ಯಜಿಸುವ (ಗಿವ್ ಇಟ್ ಅಪ್) ಅಭಿಯಾನವನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ.
ರೈತರಿಗೆ ನೀರಾವರಿ ಪಂಪ್ಸೆಟ್ಗಳಿಗೆ ಗರಿಷ್ಠ 10 ಅಶ್ವಶಕ್ತಿ ಸಾಮರ್ಥ್ಯದ ತನಕ ದಿನಕ್ಕೆ ಏಳು ತಾಸು ಮೂರು ಫೇಸ್ ಉಚಿತವಾಗಿ ಪೂರೈಸಲಾಗುತ್ತದೆ. ಈ ನೀತಿಯನ್ನು ಎಲ್ಲ ರೈತರಿಗೂ ಏಕರೂಪವಾಗಿ ಅನ್ವಯಿಸಲಾಗಿದೆ. ದೊಡ್ಡ ರೈತರು, ಶ್ರೀಮಂತರು, ಉದ್ಯಮ-ವಹಿವಾಟು ಉಳ್ಳವರು ಹೊಂದಿದ ನೀರಾವರಿ ಐಪಿ ಸೆಟ್ಗಳಿಗೂ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂತಹವರು ಉಚಿತ ವಿದ್ಯುತ್ ಸೌಲಭ್ಯ ತ್ಯಜಿಸಲು ಸಾಧ್ಯವಿದೆ. ಈ ಚಿಂತನೆ ಯಶಸ್ವಿಯಾದರೆ ರೈತರ ವಿರೋಧವನ್ನು ಎದುರಿಸಬೇಕಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರ. ಉಚಿತ ವಿತರಣೆಯಲ್ಲಿ ಸೋರಿಕೆ ಸೇರಿ ಹಲವು ಸಮಸ್ಯೆಗಳಿವೆ. ಆದ್ದರಿಂದ, ಗುಣಮಟ್ಟದ ವಿದ್ಯುತ್ ರಿಯಾಯಿತಿ ದರದಲ್ಲಿ ಪೂರೈಸುವುದು ಹೆಚ್ಚು ಸೂಕ್ತ ಎನ್ನುತ್ತಾರೆ ತಜ್ಞರು.
‘ಬೆಳಕು’ ಕಾರ್ಯಕ್ರಮದಡಿ ರಾಜ್ಯದ ಮೂರು ಲಕ್ಷ ಬಡವರ ಮನೆಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಇಂಧನ ಸಚಿವರು ಘೋಷಿಸಿದ್ದಾರೆ. ಅಲ್ಲದೆ, ಸಚಿವರ ಸರ್ಕಾರಿ ವಸತಿ ಗೃಹಗಳು ಒಳಗೊಂಡು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ಪ್ರೀಪೇಯ್್ಡ ವಿದ್ಯುತ್ ಮೀಟರ್ ಅಳವಡಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿರುವವರಲ್ಲಿ ಸರ್ಕಾರಿ ಕಚೇರಿಗಳ ಪಾಲು ದೊಡ್ಡದಿದೆ. ಇಂಥ ಸಮಸ್ಯೆ ನಿವಾರಿಸಲು ಪ್ರೀಪೇಯ್್ಡ ಮೀಟರ್ ಅಳವಡಿಕೆ ಪರಿಣಾಮಕಾರಿ ಸಾಧನವಾಗಬಹುದು. ಈ ಸುಧಾರಣೆಗಳ ಜತೆಯೇ ಸೋರಿಕೆ, ನಷ್ಟ, ತಾಂತ್ರಿಕ ಸಮಸ್ಯೆ, ಗುಣಮಟ್ಟದಲ್ಲಿ ಲೋಪ ನಿವಾರಿಸಲು ಇಂಧನ ಇಲಾಖೆ ಬಲವಾದ ಹೆಜ್ಜೆ ಇರಿಸಬೇಕಿದೆ. ಜನಸಾಮಾನ್ಯರಿಂದ ಹಿಡಿದು ಕೈಗಾರಿಕೆಗಳು ಮತ್ತು ಇತರ ಎಲ್ಲ ರಂಗಗಳು ವಿದ್ಯುತ್ ಮಿತವ್ಯಯದ ಮಂತ್ರವನ್ನು ಅಳವಡಿಸಿಕೊಂಡಲ್ಲಿ, ದೊಡ್ಡ ಪರಿವರ್ತನೆಗೆ ನಾಂದಿ ಹಾಡಿದಂತೆ. ಹೊಸ ಸುಧಾರಣಾ ಕ್ರಮಗಳು ಈ ನೀತಿಯನ್ನು ಪ್ರೋತ್ಸಾಹಿಸಲಿ ಎಂಬ ಆಶಯ.