

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡಲು ಮುಂದಾಗಿ, ಆಸ್ಪತ್ರೆಗೆ ಸೇರಿಸುವ ಸಾರ್ವಜನಿಕರಿಗೆ 5 ಸಾವಿರ ರೂ. ಬಹುಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರಲು ಜನರು ಹಿಂದೇಟು ಹಾಕುವ ಪ್ರವೃತ್ತಿಯನ್ನು ಹೋಗಲಾಡಿಸಿ, ಹಾಗೆ ನೆರವಿಗೆ ಧಾವಿಸುವವರಿಗೆ ಪ್ರೋತ್ಸಾಹ ನೀಡಿ ನೈತಿಕ ಸ್ಥೈರ್ಯ ತುಂಬುವುದು ಈ ಕ್ರಮದ ಉದ್ದೇಶ. ಅಕ್ಟೋಬರ್ 15ರಂದು ಈ ಯೋಜನೆಗೆ ಚಾಲನೆ ಸಿಗಲಿದ್ದು, 2026ರ ಮಾರ್ಚ್ವರೆಗೆ ಜಾರಿಯಲ್ಲಿರುತ್ತದೆ. ಅಪಘಾತ ಸಂಭವಿಸಿದ ಒಂದು ತಾಸಿನೊಳಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲು ನೆರವಾಗುವ ಆಲೋಚನೆ ಇದರ ಹಿಂದಿದೆ. ಬಹುಮಾನದ ಜತೆಗೆ ಪ್ರಶಂಸಾಪತ್ರವೂ ಸಿಗುತ್ತದೆ. ಇದರ ಜತೆಗೆ, ರಾಷ್ಟ್ರಮಟ್ಟದಲ್ಲಿ ಕೂಡ ವಾರ್ಷಿಕವಾಗಿ 10 ಮಂದಿ ಪರೋಪಕಾರಿ ವ್ಯಕ್ತಿಗಳಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ ಗೌರವಿಸುವ ಯೋಜನೆಯನ್ನು ಸಹ ರಸ್ತೆ ಸಾರಿಗೆ ಸಚಿವಾಲಯ ಪ್ರಕಟಿಸಿದೆ.
ರಸ್ತೆ ಅಪಘಾತಗಳು ಜಾಗತಿಕವಾಗಿ ಸಹ ಅಪಾರ ಪ್ರಾಣಹಾನಿ ಉಂಟುಮಾಡುತ್ತಿವೆ. ರಸ್ತೆ ಸುರಕ್ಷತೆ ಕುರಿತ ಜಾಗತಿಕ ಸ್ಥಿತಿಗತಿ ವರದಿ ಪ್ರಕಾರ, ವಿಶ್ವದಲ್ಲಿ ವಾರ್ಷಿಕ ಸುಮಾರು 15 ಲಕ್ಷ ಜನರು ರಸ್ತೆ ದುರಂತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶೇ.90ರಷ್ಟು ಅಪಘಾತಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುತ್ತವೆ. ಒಟ್ಟು ಜಾಗತಿಕ ರಸ್ತೆ ಅಪಘಾತಗಳಲ್ಲಿ ಶೇಕಡ 10ಕ್ಕಿಂತ ಹೆಚ್ಚು ಭಾರತದಲ್ಲಿಯೇ ಸಂಭವಿಸುವುದು ಮತ್ತಷ್ಟು ಕಳವಳದ ಸಂಗತಿ. ಭಾರತದಲ್ಲಿ ಪ್ರತಿವರ್ಷ ಒಂದೂವರೆ ಲಕ್ಷದಷ್ಟು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪು್ಪತ್ತಿರುವುದು ಖೇದದ ವಿಚಾರ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಹೀಗೆ ಬಲಿಯಾಗುವವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚು. ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆ, ಮದ್ಯಸೇವನೆ ಮಾಡಿ ವಾಹನ ಚಲಾಯಿಸುವುದು, ರಸ್ತೆ ದುಸ್ಥಿತಿ... ಹೀಗೆ ಅಪಘಾತಕ್ಕೆ ನಾನಾ ಕಾರಣಗಳು. ಅದರಲ್ಲೂ, ಕುಟುಂಬಕ್ಕೆ ಆಧಾರಸ್ತಂಭವಾದವರೇ ರಸ್ತೆ ಅಪಘಾತಗಳಲ್ಲಿ ಮಡಿದರಂತೂ ಆ ಕುಟುಂಬದ ಸ್ಥಿತಿ ಬಹಳ ಕಷ್ಟಕರ. ಸುರಕ್ಷಿತ ಚಾಲನೆ ಕುರಿತು ಸರ್ಕಾರಗಳು ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆಯೇನೋ ನಿಜ. ಆದರೂ, ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ.
‘ಭಾರತದಲ್ಲಿ ರಸ್ತೆ ಅಪಘಾತದ ಪರಿಣಾಮಗಳು ಕರೊನಾಗಿಂತಲೂ ಭೀಕರ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿರುವುದು ಪರಿಸ್ಥಿತಿಯ ಗಂಭೀರತೆಗೆ ದ್ಯೋತಕ. ಅಪಘಾತದ ಸಂದರ್ಭದಲ್ಲಿ ಗಾಯಾಳುವಾದವರನ್ನು ಉಪಚರಿಸಲು ಅಥವಾ ಹತ್ತಿರದ ಆಸ್ಪತ್ರೆಗೆ ಸೇರಿಸಲು ಹಿಂದೆಲ್ಲ ಜನರು ಬಹಳ ಹಿಂದೇಟು ಹಾಕುತ್ತಿದ್ದರು. ಇದಕ್ಕೆ ಮುಖ್ಯ ಕಾರಣ, ಅವರಲ್ಲಿ ಮಾನವೀಯತೆ ಇಲ್ಲ ಎಂದಲ್ಲ. ಬದಲಿಗೆ, ಇಂಥ ಸಂದರ್ಭದಲ್ಲಿ ತಾವು ಪೊಲೀಸ್ ಠಾಣೆಗೆ ಹೋಗಿ ಹೇಳಿಕೆ ನೀಡಬೇಕಾಗುತ್ತದೆ ಅಥವಾ ಮುಂದೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ.. ಎಂಬೆಲ್ಲ ಕಾರಣಗಳು ಇದಕ್ಕಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದು, ಅಪಘಾತ ಸಂದರ್ಭದಲ್ಲಿ ನೆರವಿಗೆ ಧಾವಿಸುವವರನ್ನು (ಪರೋಪಕಾರಿಗಳು) ಅನಗತ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸಬಾರದು ಎಂದು ನಿಯಮ ಮಾಡಿದೆ. ಕರ್ನಾಟಕದಲ್ಲಿ ಸಹ ಈ ಸಂಬಂಧ ಕಾನೂನು ತರಲಾಗಿದೆ. ಅಪಘಾತವಾದಾಗ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವುದು ಒಂದೆಡೆಯಾದಾರೆ, ರಸ್ತೆ ಅಪಘಾತಗಳನ್ನು ತಗ್ಗಿಸುವತ್ತಲೂ ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಬೇಕಾಗುತ್ತದೆ.