ಸಂಪಾದಕೀಯ | ಘೋಷಣೆಗಳಿಂದ ಏನು ಲಾಭ?; ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಪ್ರದರ್ಶಿಸಬೇಕು...

Vidhana Soudha vvani
Published on

ರಾಜಕೀಯ ಪಕ್ಷಗಳ ಭರವಸೆ, ಘೋಷಣೆಗಳನ್ನು ಕೇಳಿದರೆ ಸ್ವರ್ಗವೇ ಭೂಮಿಗೆ ಬಂದುಬಿಡುತ್ತದೆಯೇನೋ ಎಂದು ಜನಸಾಮಾನ್ಯರಿಗೆ ಒಂದು ಕ್ಷಣ ಅನಿಸದೆ ಇರದು. ಅಷ್ಟೊಂದು ಅತ್ಯಾಕರ್ಷಕ ಘೋಷಣೆಗಳನ್ನು ಹೊರಡಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಿಸ್ಸೀಮವಾಗಿವೆ. ಆದರೆ, ಅವುಗಳ ಅನುಷ್ಠಾನದ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಹಿವಾಸ್ತವವೇ ಎದುರಾಗುತ್ತದೆ. ಪ್ರತಿ ಬಾರಿಯ ಬಜೆಟ್​ನಲ್ಲೂ ಅದೆಷ್ಟು ಹೊಸ ಯೋಜನೆಗಳು, ಹೊಸ ಘೋಷಣೆಗಳು? ಆದರೆ, ಮುಂದೇನು? ಮುಂದಿನ ವರ್ಷದ ಬಜೆಟ್​ನಲ್ಲಿ ಹೆಸರು ಬದಲಿಸಿಕೊಂಡೋ, ಅಲ್ಪಸ್ವಲ್ಪ ಸ್ವರೂಪ ಬದಲಿಸಿಕೊಂಡೋ ಹಳೆಯ ಯೋಜನೆಗಳೇ ಮತ್ತೆ ಹೊಸ ಹುಮ್ಮಸ್ಸಿನಲ್ಲಿ ಘೋಷಣೆಯಾಗುತ್ತವೆ. ಕರ್ನಾಟಕದ ಈ ವರ್ಷದ (2022-23) ಬಜೆಟ್ ಮಾರ್ಚ್ 4ರಂದು ಮಂಡನೆಯಾಗಿದೆ. ಆದರೆ, ಕಳೆದ ವರ್ಷದ (2021-22) ರಾಜ್ಯ ಬಜೆಟ್ ಕುರಿತು ತೆಗೆದುಕೊಂಡಿರುವ ಕ್ರಮಗಳ ವರದಿಯನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದ್ದು, ಅನೇಕ ಸ್ವಾರಸ್ಯಕರ ಅಂಶಗಳು ಕಂಡುಬಂದಿವೆ. ಆಶ್ಚರ್ಯವೆಂದರೆ 30ಕ್ಕಿಂತ ಹೆಚ್ಚು ಯೋಜನೆ, ಕಾರ್ಯಕ್ರಮಗಳು ಇನ್ನೂ ಪರಿಶೀಲನಾ ಹಂತದಲ್ಲೇ ಉಳಿದಿವೆ. ಕೆಲವು ಘೋಷಣೆಗಳನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ, ಮತ್ತೆ ಕೆಲವು ಇನ್ನೂ ಪ್ರಕ್ರಿಯೆ ಹಂತದಲ್ಲೇ ಇವೆ. ಬಜೆಟ್ ಘೋಷಣೆ ಬಳಿಕವೂ ಆದೇಶ ಹೊರಡಿಸಲು ಸರಾಸರಿ 6ರಿಂದ 8 ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ ಎಂಬುದೇ ಆಡಳಿತಶಾಹಿಯ ನಿಧಾನಗತಿಗೆ ಸಾಕ್ಷಿಯಾಗಿದೆ. ಹೀಗಿರುವಾಗ ಹೊಸ ಯೋಜನೆ, ಕಾರ್ಯಕ್ರಮಗಳ ಗತಿ ಏನು?

ಇದು ಬಜೆಟ್ ಭಾಷಣಗಳಿಗೆ ಮಾತ್ರ ಸೀಮಿತವಲ್ಲ. ಚುನಾವಣೆ ಪ್ರಣಾಳಿಕೆ ಮೂಲಕ ಆಶ್ವಾಸನೆಗಳ ಮಹಾಪೂರವನ್ನೇ ಹರಿಸುವ ರಾಜಕೀಯ ಪಕ್ಷಗಳು, ಮತಗಳನ್ನು ಸೆಳೆದುಕೊಳ್ಳುವ ಭರದಲ್ಲಿ ಅನುಷ್ಠಾನಕ್ಕೆ ತರಲು ಅಸಾಧ್ಯ ಎನ್ನುವಂಥ ಭರವಸೆಗಳನ್ನೂ ನೀಡುತ್ತವೆ. ಎಲ್ಲವನ್ನೂ ‘ಉಚಿತ’ವಾಗಿ ಒದಗಿಸುವ, ಸಾಲಮನ್ನಾ ಮಾಡುವ, ಪ್ರಮುಖ ಯೋಜನೆಗಳಿಗೆ ನೂರಾರು ಕೋಟಿ ಒದಗಿಸುವ ಬಗ್ಗೆ ಮಾತನಾಡುತ್ತವೆಯೇ ಹೊರತು ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣ ಹೇಗೆ ಎಂಬ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಇಂಥ ಅಪಸವ್ಯಗಳನ್ನು ಪ್ರತಿ ಲೋಕಸಭಾ ಚುನಾವಣೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊತ್ತಲ್ಲಿ ಕಾಣುತ್ತೇವೆ. ಚುನಾವಣೆ ಪ್ರಣಾಳಿಕೆಗಳ ಅಪ್ರಾಯೋಗಿಕ ಆಶ್ವಾಸನೆಗಳ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿ, ‘ಈಡೇರಿಸಬಹುದಾದಂಥ ಭರವಸೆಗಳನ್ನಷ್ಟೇ ನೀಡಿ’ ಎಂದು ಕೋರ್ಟ್ ಕೂಡ ಹೇಳುವಂತಾಯಿತು. ಚುನಾವಣೆ ಮುಗಿದ ಮೇಲೆ ಆಡಳಿತ ಪಕ್ಷ ಪ್ರಣಾಳಿಕೆಯನ್ನು ಮೂಲೆಗೆ ತಳ್ಳಿ, ಆರ್ಥಿಕ ಸಂಕಷ್ಟದ ಮಂತ್ರ ಜಪಿಸುತ್ತದೆ. ಪ್ರತಿಪಕ್ಷಗಳು ಸರ್ಕಾರವನ್ನು ಎಚ್ಚರಿಸುವ ರಚನಾತ್ಮಕ ಪ್ರಯತ್ನ ಮಾಡುವುದು ಕಡಿಮೆಯೇ. ಆಯವ್ಯಯ ಮಂಡನೆಗಂತೂ ವಿಶೇಷ ಮೌಲ್ಯವಿದೆ. ಬಜೆಟ್​ನ ಘೋಷಣೆಗಳು ಅನುಷ್ಠಾನಕ್ಕೆ ಬಂದೇಬರುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದ, ಸರ್ಕಾರ ಘೋಷಣೆಗಳನ್ನು ಹೊರಡಿಸುವ ಮುನ್ನವೇ ಸಾಕಷ್ಟು ತಯಾರಿ ಮಾಡಿಕೊಳ್ಳಲಿ. ಘೋಷಿಸಿದ ಬಳಿಕ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿ. ಇಲ್ಲದಿದ್ದಲ್ಲಿ ಬಜೆಟ್ ಭಾಷಣಗಳು ಪ್ರಣಾಳಿಕೆಗಳಂತೆ ವಿಶ್ವಾಸ ಕಳೆದುಕೊಳ್ಳಬೇಕಾದೀತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net