

ಸಾಮಾಜಿಕ ಮಾಧ್ಯಮಕ್ಕೆ (ಸೋಷಿಯಲ್ ಮೀಡಿಯಾ) ಸಂಬಂಧಿಸಿದಂತೆ ನೂತನ ನಿಯಮಗಳನ್ನು ಜುಲೈ ಅಂತ್ಯದೊಳಗೆ ಅಂತಿಮಗೊಳಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಕೇಂದ್ರದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬಳಕೆದಾರರ ಕುಂದುಕೊರತೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಸ್ವಯಂ ನಿಯಂತ್ರಕ ಮೇಲ್ಮನವಿ ಕಾರ್ಯವಿಧಾನ ಜಾರಿಗೆ ತರುವ ಕುರಿತು ಸಲಹೆಗಳನ್ನು ನೀಡಲು ಬೃಹತ್ ತಂತ್ರಜ್ಞಾನ ವೇದಿಕೆಗಳಿಗೆ ಮುಕ್ತ ಅವಕಾಶವನ್ನು ಸರ್ಕಾರವು ಕಲ್ಪಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿಗಳು ನೀಡುವ ನಿರ್ಣಯದ ವಿರುದ್ಧ ವ್ಯಕ್ತಿಗಳು ಸಲ್ಲಿಸುವ ಮೇಲ್ಮನವಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಕುಂದುಕೊರತೆ ಮೇಲ್ಮನವಿ ಸಮಿತಿ ಸ್ಥಾಪಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಉದ್ದೇಶಿತ ಕುಂದುಕೊರತೆ ಸಮಿತಿಯು ಮೇಲ್ಮನವಿಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ ವಿಲೇವಾರಿ ಮಾಡಬೇಕು, ಸಮಿತಿಯ ತೀರ್ಪಗಳು ಸಂಬಂಧಿಸಿದ ವ್ಯಕ್ತಿಗಳಿಗೆ ಅಥವಾ ಸಂಬಂಧಿತ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಅನ್ವಯವಾಗಬೇಕು ಎಂಬ ಅಂಶಗಳನ್ನು ನಿಯಮಾವಳಿಯಲ್ಲಿ ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಪ್ರಸ್ತಾವಿತ ತಿದ್ದುಪಡಿಯು ಬಳಕೆದಾರರಿಗೆ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಹೆಚ್ಚುವರಿ ಮಾರ್ಗಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ಕಳೆದೆರಡು ದಶಕಗಳಲ್ಲಿ ಸಾಮಾಜಿಕ ಮಾಧ್ಯಮಗಳು ಭಾರಿ ಬೆಳವಣಿಗೆ ಸಾಧಿಸಿದೆ. ಅದರಲ್ಲೂ ಮೊಬೈಲ್ಫೋನ್ಗಳು ಹಾಗೂ ಇಂಟರ್ನೆಟ್ ಸೌಲಭ್ಯಗಳು ಕಡಿಮೆ ದರದಲ್ಲಿ ಲಭ್ಯವಾಗತೊಡಗಿದ್ದರಿಂದ ಭಾರತದಲ್ಲಿ ಟ್ವಿಟರ್, ಫೇಸ್ಬುಕ್, ವಾಟ್ಸ್ಆಪ್, ಇನ್ಸ್ಟಾಗ್ರಾಂ ಮೊದಲಾದವುಗಳನ್ನು ಬಳಸುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಳಕೆ ಹೆಚ್ಚಾದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವು ನಿಯಂತ್ರಣ ಮೀರಿ ಸ್ವೇಚ್ಛೆಯ ಧೋರಣೆಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಬಳಕೆದಾರರು ಮನತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕೋಮು ಭಾವನೆ ಕೆರಳಿಸಲು ಕೂಡ ಕಾರಣವಾದದ್ದಿದೆ. ತಮಗೆ ಬೇಕಾದಂತೆ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಕೆಲ ವ್ಯಕ್ತಿಗಳು, ಸಂಸ್ಥೆಗಳು ಇಂತಹ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳೂ ಗೋಚರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹವಾದ, ಅನಗತ್ಯವಾದ ಸಂದೇಶ, ಅಭಿಪ್ರಾಯಗಳನ್ನು ಹಾಕುವುದಕ್ಕೆ, ಹಂಚಿಕೊಳ್ಳುವುದಕ್ಕೆ ನಿರ್ಬಂಧವನ್ನು ಈ ಕಾಯ್ದೆಯು ವಿಧಿಸುತ್ತದೆ. ಕಾನೂನುಬಾಹಿರ, ಹಾದಿ ತಪ್ಪಿಸುವ, ಗಲಭೆಗೆ ಪ್ರಚೋದಿಸುವ ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮಾವಳಿಗಳನ್ನು ಕೂಡ ರೂಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿ ಆಧರಿಸಿ ಬಾಧಿತರು ಮಾನನಷ್ಟ ಮೊಕದ್ದಮೆ ಹೂಡಲೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಎಷ್ಟೇ ಕಾನೂನು ಜಾರಿಗೊಳಿಸಿದರೂ ನಿಯಮಾವಳಿಗಳನ್ನು ರೂಪಿಸಿದರೂ ಸರ್ಕಾರಿ ವ್ಯವಸ್ಥೆಯೊಂದರಿಂದಲೇ ಸಾಮಾಜಿಕ ಮಾಧ್ಯಮವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯ. ಒಂದು ಲೆಕ್ಕದ ಪ್ರಕಾರ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆಯು ಭಾರತದಲ್ಲಿ 70 ಕೋಟಿಗೂ ಅಧಿಕ. ಇಷ್ಟೊಂದು ಬಳಕೆದಾರರು ರವಾನಿಸುವ ಸಂದೇಶ, ವ್ಯಕ್ತಪಡಿಸುವ ಅಭಿಪ್ರಾಯಗಳ ಮೇಲೆ ಕಣ್ಗಾವಲಿಡುವಂತಹ ಸಮರ್ಥ ವ್ಯವಸ್ಥೆ ಕಷ್ಟಕರ. ಬಳಕೆದಾರರ ಸ್ವಯಂ ನಿಯಂತ್ರಣ ಕೂಡ ಇಲ್ಲಿ ಮುಖ್ಯ.