ಮಹತ್ವದ ನಿರ್ಧಾರ; ಲಸಿಕೆ ವಿಷಯದಲ್ಲಿ ಅಪನಂಬಿಕೆ ಬೇಡ..

Editorial
Published on

ಕಳೆದ ಹದಿನೈದು ತಿಂಗಳುಗಳಿಂದ ಭಾರತ ಕರೊನಾ ಸೋಂಕಿನ ವಿರುದ್ಧ ಸಮರ ಸಾರಿದ್ದು, ಮಹತ್ವದ ಸವಾಲುಗಳನ್ನು ಮಣಿಸಿದೆ. ಎರಡನೇ ಅಲೆ ಅಬ್ಬರದಲ್ಲಿದ್ದಾಗ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಿತಾದರೂ, ವೇಗವಾಗಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಿರುವುದು ಸಮಾಧಾನಕರ ಬೆಳವಣಿಗೆ. ‘ಆತ್ಮನಿರ್ಭರ ಭಾರತ’ ಬರೀ ಘೋಷಣೆಯಲ್ಲ, ಭಾವಾವೇಶದ ಹೇಳಿಕೆಯಲ್ಲ ಎಂಬುದು ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸಾಬೀತಾಗಿದೆ. ಕಳೆದೊಂದು ವರ್ಷದಲ್ಲೇ ಭಾರತದಲ್ಲಿ ತಯಾರಿಸಿರುವ ಎರಡು ಲಸಿಕೆಗಳು, ಜನರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಈವರೆಗೆ 23 ಕೋಟಿಗೂ ಅಧಿಕ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು 7 ಕಂಪನಿಗಳು ವಿಭಿನ್ನ ರೀತಿಯ ಲಸಿಕೆ ಉತ್ಪಾದನೆ ಪ್ರಕ್ರಿಯೆಯನ್ನು ಆರಂಭಿಸಿವೆ. ಮೂರನೇ ಅಲೆಯ ಆತಂಕ ಇರುವುದರಿಂದ, ಮಕ್ಕಳಿಗಾಗಿ ಎರಡು ಲಸಿಕೆಗಳ ಪ್ರಯೋಗವೂ ನಡೆಯುತ್ತಿದೆ. ಆದರೂ, ಇಂಥ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಿ, ಕರೊನಾ ವಿರುದ್ಧದ ಹೋರಾಟ ದಿಕ್ಕುತಪ್ಪಿಸುವ ಪ್ರಯತ್ನ ವಿಪಕ್ಷಗಳಿಂದ ನಡೆಯಿತು. ರಾಜ್ಯಗಳಿಗೆ ಕೇಂದ್ರ ಸಹಕಾರ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂತು.

ಸೋಮವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ನಿರ್ಣಯಗಳನ್ನು ಘೋಷಿಸುವ ಮೂಲಕ, ಕರೊನಾ ವಿರುದ್ಧದ ಸಮರಕ್ಕೆ ಹೊಸ ಶಕ್ತಿ ತುಂಬಿದ್ದಾರೆ. ರಾಜ್ಯಗಳೇ ಲಸಿಕೆ ಖರೀದಿಸುವ ವಿಷಯ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಇದು ರಾಜ್ಯಗಳಿಗೆ ಆರ್ಥಿಕ ಹೊರೆ ಸೃಷ್ಟಿಸುತ್ತಿದೆ ಎಂದು ಕೆಲ ಮುಖ್ಯಮಂತ್ರಿಗಳು ಹೇಳಿದ್ದರು. ಲಸಿಕೆ ವಿಷಯದಲ್ಲಿ ನಿರ್ಣಾಯಕ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಒದಗಿಸುವುದಾಗಿ ಘೋಷಿಸಿದೆ. ಅಂದರೆ, ಈ ಮುಂದೆ ರಾಜ್ಯಗಳು ಲಸಿಕೆಗಾಗಿ ಹಣ ವೆಚ್ಚ ಮಾಡಬೇಕಾದ ಅಗತ್ಯವಿಲ್ಲ. ಲಸಿಕೆ ತಯಾರಿಕಾ ಕಂಪನಿಗಳಿಂದ ಶೇಕಡ 75ರಷ್ಟು ಲಸಿಕೆಯನ್ನು ಕೇಂದ್ರವೇ ಖರೀದಿಸಿ, ರಾಜ್ಯಗಳಿಗೆ ವಿತರಿಸಲಿದೆ. ಶೇ.25ನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಬಹುದಾಗಿದ್ದು, ಅಲ್ಲಿ ಸ್ಥಿತಿವಂತರು ಲಸಿಕೆ ಪಡೆಯಬಹುದಾಗಿದೆ.

ಲಾಕ್​ಡೌನ್ ಪರಿಣಾಮ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ’ಯಡಿ ದೇಶದ 80 ಕೋಟಿ ಬಡವರಿಗೆ ಈ ವರ್ಷದ ನವೆಂಬರ್​ವರೆಗೆ ಉಚಿತ ಪಡಿತರ ದೊರೆಯಲಿದೆ. ಇದನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ, ಪಾರದರ್ಶಕವಾಗಿ ತಲುಪಿಸುವ ಹೊಣೆಗಾರಿಕೆ ಆಯಾ ರಾಜ್ಯಗಳ ಮೇಲಿದೆ. ಬಡವರಿಗೆ ನೀಡಿರುವ ಪಡಿತರ ಕಾಳಸಂತೆ ಪ್ರವೇಶಿಸದಂತೆ, ಇತರ ವಿಧಗಳಲ್ಲೂ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು.

‘ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿ ತ್ವರಿತ ಗತಿಯಲ್ಲಿ ಆರೋಗ್ಯ ಮೂಲಸೌಕರ್ಯಗಳ ನಿರ್ವಣವಾಗಿದೆ. ಔಷಧ ಮತ್ತು ಅಗತ್ಯ ವೈದ್ಯೋಪಕರಣಗಳ ಉತ್ಪಾದನೆಯೂ ಆಗಿದೆ’ ಎಂದು ಪ್ರಧಾನಿ ಮೋದಿ ವಿವರಿಸುವ ಮೂಲಕ, ಶತಮಾನದ ಮಹಾಮಾರಿಯನ್ನು ಮಣಿಸಲು ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೆಲ ವಿಷಯಗಳನ್ನಾದರೂ ರಾಜಕೀಯದಿಂದ ದೂರವಿಡಬೇಕು. ಕರೊನಾ ಎಷ್ಟು ದೊಡ್ಡ ಮಾನವೀಯ ಸಂಕಟವನ್ನು ನಿರ್ವಿುಸಿದೆ ಎಂಬುದನ್ನು ನೋಡುತ್ತಿದ್ದೇವೆ. ಹೀಗಿರುವಾಗ, ಬರೀ ಕೇಂದ್ರದ ಮೇಲೆ ಆರೋಪ ಮಾಡಿ, ರಾಜ್ಯಗಳು, ವಿವಿಧ ರಾಜಕೀಯ ಪಕ್ಷಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವಂತಿಲ್ಲ. ಇನ್ನಾದರೂ, ಲಸಿಕೆ ವಿಷಯದಲ್ಲಿ ಭ್ರಮೆ, ವದಂತಿಗಳನ್ನು ಹರಡುವ ಕೆಲಸಕ್ಕೆ ಪೂರ್ಣವಿರಾಮ ಬೀಳಬೇಕು. ಆ ಮೂಲಕ ಲಸಿಕೆ ಅಭಿಯಾನ ವೇಗ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net