

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ (ಪ್ರಧಾನಿ ಇದರ ಅಧ್ಯಕ್ಷರೂ ಹೌದು) ಆಡಳಿತ ಮಂಡಳಿಯ ಏಳನೇ ಸಭೆ ಭಾನುವಾರ ನವದೆಹಲಿಯಲ್ಲಿ ನಡೆಯಿತು. 2019ರ ಜುಲೈ ನಂತರದಲ್ಲಿ ಇದು ಆಯೋಗದ ಮೊದಲ ಭೌತಿಕ ಸಭೆಯಾಗಿತ್ತು. ಚಿಂತಕರ ಚಾವಡಿಯಾದ ನೀತಿ ಆಯೋಗವು ದೇಶದ ಆರ್ಥಿಕ ಬೆಳವಣಿಗೆ, ಸಹಕಾರ ಒಕ್ಕೂಟದ ಬಲವರ್ಧನೆ ಮುಂತಾದ ವಿಷಯಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಸಂಸ್ಥೆಯಾಗಿದೆ. ಮುಂಚೆ ಯೋಜನಾ ಆಯೋಗ ಎಂದಿದ್ದುದು 2017ರಲ್ಲಿ ನೀತಿ ಆಯೋಗ ಎಂದು ಹೆಸರು ಬದಲಾಯಿಸಿಕೊಂಡಿತು. ಖಾದ್ಯತೈಲ ವಿಷಯದಲ್ಲಿ ದೇಶವು ಸ್ವಾವಲಂಬಿಯಾಗಬೇಕು ಎಂಬ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕೃಷಿ ಬೆಳೆಗಳನ್ನು ವೈವಿಧ್ಯಮಯಗೊಳಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು.
ಕೃಷಿ ವಿಷಯವು ಸಭೆಯ ಪ್ರಮುಖ ಕಾರ್ಯಸೂಚಿಯಲ್ಲಿಯೂ ಇತ್ತು. ಕರೊನಾ ಸಂದರ್ಭದಲ್ಲಿ, ಭಾರತದ ಸಹಕಾರಿ ಒಕ್ಕೂಟ ವ್ಯವಸ್ಥೆಯು ವಿಶ್ವಕ್ಕೆ ಮಾದರಿಯಾಗಿ ಹೊರಹೊಮ್ಮಿತು ಎಂದು ಪ್ರಧಾನಿ ಹೇಳಿದ್ದು ಗಮನಾರ್ಹ. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ತಂತಮ್ಮ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಮಂಡಿಸಿದರು. ತೆರಿಗೆಯಲ್ಲಿ ರಾಜ್ಯಗಳ ಪಾಲು ಹೆಚ್ಚಳ, ಕೇಂದ್ರ ಮತ್ತು ರಾಜ್ಯಗಳ ನಡುವೆ ಉದ್ಭವಿಸುವ ಭಿನ್ನಾಭಿ ಪಾಯಗಳನ್ನು, ತಕರಾರುಗಳನ್ನು ಬಗೆಹರಿಸುವ ಒಂಬುಡ್ಸ್ ಮನ್ ಆಗಿ ನೀತಿ ಆಯೋಗ ಕಾರ್ಯ ನಿರ್ವಹಿಸಬೇಕು ಮುಂತಾದ ಅನಿಸಿಕೆಗಳು ಸಿಎಂಗಳಿಂದ ವ್ಯಕ್ತವಾದವು. ಅಮೃತ ಯೋಜನೆ, ಅಟಲ್ ಇನೋವೇಷನ್ ಮಿಷನ್, ಡಿಜಿಟಲ್ ಇಂಡಿಯಾ ಮುಂತಾದ ಯೋಜನೆಗಳನ್ನು ನೀತಿ ಆಯೋಗವು ರೂಪಿಸಿದ್ದು ಉಲ್ಲೇಖನೀಯ. ಭಾರತವು ಒಕ್ಕೂಟ ವ್ಯವಸ್ಥೆಯನ್ನು ಹೊಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಂವಿಧಾನಾತ್ಮಕವಾಗಿಯೇ ತಮ್ಮದೇ ಆದ ಕಾರ್ಯವ್ಯಾಪ್ತಿ ಮತ್ತು ಹೊಣೆಗಾರಿಕೆಗಳನ್ನು ಹೊಂದಿವೆ.
ದೇಶದ ಆಡಳಿತ ಸುಗಮವಾಗಿ ನಡೆದುಕೊಂಡು ಹೋಗುವಲ್ಲಿ ಮತ್ತು ಕಾನೂನುಸುವ್ಯವಸ್ಥೆ ಪರಿಪಾಲನೆಯಲ್ಲಿ ಇಬ್ಬರ ಪಾತ್ರವೂ ಇದೆ. ಆಡಳಿತ ನಡೆಸುವ ಪಕ್ಷಗಳು ಬೇರೆ ಬೇರೆ ಇದ್ದಾಗ ಮತ್ತು ಸೈದ್ಧಾಂತಿಕ ಕಾರಣಕ್ಕಾಗಿ ಕೆಲವೊಮ್ಮೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಅಸಮಾಧಾನ, ಮುನಿಸು ಉಂಟಾಗುವುದು ಅಸಹಜವೇನಲ್ಲ. ಈಚಿನ ದಿನಗಳಲ್ಲೇ ನಾವು ಇಂತಹ ಅನೇಕ ಘಟನೆಗಳನ್ನು ಕಂಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ-ಭಿನ್ನದನಿಗೆ ಆಸ್ಪದವಿದೆ. ಆದರೆ ಇದು ಒಂದು ಹಂತ ಮೀರಬಾರದು ಮತ್ತು ದೇಶ-ರಾಜ್ಯದ ಹಿತಾಸಕ್ತಿಗೆ ತೊಂದರೆಯಾಗದಂತಿರಬೇಕು. ಈ ವಿವೇಚನೆಯನ್ನು ಎರಡೂ ಕಡೆಗಳವರು ಪ್ರದರ್ಶಿಸಬೇಕಾಗುತ್ತದೆ.
ಇದೇ ಸಂದರ್ಭದಲ್ಲಿ, ಇತ್ತ ಕರ್ನಾಟಕದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಪುನಾರಚಿಸುವ ಮಹತ್ವದ ನಿರ್ಧಾರ ಹೊರಬಿದ್ದಿದೆ. ಕೇಂದ್ರದ ನೀತಿ ಆಯೋಗದ ಮಾದರಿಯಲ್ಲಿ ಇದನ್ನು ರೂಪಿಸುವ ಉದ್ದೇಶ ಹೊಂದಲಾಗಿದ್ದು, ‘ರಾಜ್ಯ ಪರಿವರ್ತನಾ ಸಂಸ್ಥೆ’ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ. ಮುಖ್ಯಮಂತ್ರಿ ಇದರ ಅಧ್ಯಕ್ಷರಾಗಿದ್ದು, ವಿವಿಧ ರಂಗಗಳ ಪರಿಣತರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ‘ನವಭಾರತಕ್ಕಾಗಿ ನವ ಕರ್ನಾಟಕ ಸಂಕಲ್ಪ’ ಈಡೇರಿಸುವ ನಿಟ್ಟಿನಲ್ಲಿ ಈ ಹೆಜ್ಜೆಯಿಡಲಾಗಿದೆ ಎಂದು ವಿವರಿಸಲಾಗಿದೆ. ಹೆಸರು ಬದಲಾವಣೆ ಜತೆಗೆ, ವಾಸ್ತವದಲ್ಲಿಯೂ ಬದಲಾವಣೆ ಆಗಲಿ ಎಂಬುದು ಜನರ ನಿರೀಕ್ಷೆ, ಅಪೇಕ್ಷೆ.