ಸೌಲಭ್ಯದ ದುರುಪಯೋಗ ಸಲ್ಲದು; ಲಕ್ಷಾಂತರ ಪಡಿತರ ಚೀಟಿ ಅನರ್ಹ

Editorial
Published on

ಸರ್ಕಾರದ ಯೋಜನೆ ಯಾವುದೇ ಇರಲಿ, ಅದರ ಉಪಯೋಗದ ಜತೆಗೆ ದುರುಪಯೋಗ ಆಗುವುದು ಕೂಡ ಸಹಜ, ಸಾಮಾನ್ಯ ಎಂಬಂತಾಗಿಬಿಟ್ಟಿರುವುದು ದುರಂತವೇ ಸರಿ. ಇದರಿಂದಾಗಿ, ಆಯಾಯ ಯೋಜನೆಗಳ ಉದ್ದೇಶ ಸರಿಯಾಗಿ ಈಡೇರುವುದಿಲ್ಲ ಮತ್ತು ಅಪಾತ್ರದಾನದಂತಾಗಿ, ಜನರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತ ಬರುತ್ತದೆ. ವ್ಯವಸ್ಥೆಯಲ್ಲಿ ಜನರ ನಂಬಿಕೆ ಕುಸಿಯುವುದು ಯಾವುದೇ ಪ್ರಜಾಪ್ರಭುತ್ವ ದೇಶಕ್ಕೆ ಉತ್ತಮ ಸಂಕೇತವಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಪಡಿತರ ಚೀಟಿಯ ದುರ್ಬಳಕೆ ಇದಕ್ಕೊಂದು ನಿದರ್ಶನ. ಈ ಹಿಂದೆ, ನಕಲಿ ದಾಖಲೆಗಳನ್ನು ನೀಡಿ ಆರ್ಥಿಕ ಸಬಲರು ಪಡೆದಿದ್ದ ಮೂರೂವರೆ ಲಕ್ಷ ರೇಷನ್ ಕಾರ್ಡಗಳನ್ನು ಇಲಾಖೆ ರದ್ದುಪಡಿಸಿದೆ. ಈ ಪೈಕಿ 85 ಸಾವಿರ ಆದಾಯ ತೆರಿಗೆ ಪಾವತಿದಾರ ಕುಟುಂಬಗಳು, 2,127 ಸರ್ಕಾರಿ ನೌಕರರು, ಮೂರು ಹೆಕ್ಟೆರ್​ಗಿಂತ ಹೆಚ್ಚು ಜಮೀನು ಹೊಂದಿರುವ 2.18 ಲಕ್ಷ ಕುಟುಂಬಗಳು ಪಡೆದುಕೊಂಡಿದ್ದ ಕಾರ್ಡಗಳು ಸೇರಿವೆ. ಪಡಿತರ ಚೀಟಿ ಪಡೆಯಲು ಇರುವ ನಿಯಮಕ್ಕಿಂತ ಅಧಿಕ ಪ್ರಮಾಣದ ವಾರ್ಷಿಕ ಆದಾಯ ಇರುವವರ ಕಾರ್ಡಗಳನ್ನು ಸಹ ರದ್ದುಮಾಡಲಾಗಿದೆ. ಬೈಕ್, ಟಿವಿ, ಫ್ರಿಜ್ ಇರುವ ಮನೆಗಳಲ್ಲಿನ ಕಾರ್ಡಗಳನ್ನು ಸಹ ರದ್ದುಮಾಡಲಾಗುವುದೆಂದು ಹಿಂದೆ ಸುದ್ದಿ ಹರಡಿತ್ತು. ಆದರೆ, ಸರ್ಕಾರ ನಿಗದಿಪಡಿಸಿದ ಮಾನದಂಡಗಳಲ್ಲಿ ಇವನ್ನು ಹೊಂದಲು ಅವಕಾಶವಿರುವುದರಿಂದ, ಈ ವಸ್ತು ಹೊಂದಿರುವವರ ಕಾರ್ಡಗಳನ್ನು ಅನರ್ಹಗೊಳಿಸುವುದಿಲ್ಲ ಎಂದು ಇಲಾಖೆ ನಂತರದಲ್ಲಿ ಸ್ಪಷ್ಟನೆ ನೀಡಿತು.

ಇಲ್ಲಿ ಇನ್ನೂ ಒಂದು ಜಿಜ್ಞಾಸೆಯ ವಿಷಯವಿದೆ. ಬಿಪಿಎಲ್ ಕಾರ್ಡಗಳು ಹೆಚ್ಚೆಚ್ಚು ಇದ್ದಷ್ಟು, ಸರ್ಕಾರ ಗುರುತಿಸಿದ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಅಷ್ಟು ಇವೆ ಎಂದಾಯಿತು. ಹಾಗಾದರೆ ಸರ್ಕಾರಗಳು ಹಮ್ಮಿಕೊಳ್ಳುವ ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಶ್ರುತಿ ಏನಾಯಿತು ಎಂಬ ಅನುಮಾನವೂ ಮೂಡುತ್ತದೆಯಲ್ಲವೆ? ಇಂಥ ಯೋಜನೆಗಳಿಗೆ ಸರ್ಕಾರಗಳು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು 4.2 ಕೋಟಿ ಫಲಾನುಭವಿಗಳಿಗೆ ಪಡಿತರ ಹಂಚಿಕೆ ಮಾಡುತ್ತದೆ. ರಾಜ್ಯದಲ್ಲಿ ಹಾಲಿ 10.91 ಲಕ್ಷ ಅಂತ್ಯೋದಯ ಕುಟುಂಬಗಳು, 1.15 ಕೋಟಿ ಬಿಪಿಎಲ್ ಕುಟುಂಬಗಳು ಸೇರಿ ಒಟ್ಟು 4.29 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಹಂಚಿಕೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ. ಹೊರೆ ಬೀಳುತ್ತಿದ್ದು, ಮಾನದಂಡ ಉಲ್ಲಂಘಿಸಿ ಪಡೆಯಲಾದ ಕಾರ್ಡಗಳನ್ನು ರದ್ದುಪಡಿಸಲಾಗುತ್ತಿದೆ.

ಹೀಗೆ ಅನರ್ಹ ಕಾರ್ಡಗಳನ್ನು ರದ್ದುಮಾಡುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಇದೇ ರೀತಿ ಲಕ್ಷಾಂತರ ಕಾರ್ಡಗಳನ್ನು ರದ್ದುಮಾಡಿದ ಉದಾಹರಣೆಗಳಿವೆ. ಇಷ್ಟಿದ್ದರೂ, ದುರುಪಯೋಗ ನಡೆದೇ ಇರುವುದು ವ್ಯವಸ್ಥೆಯಲ್ಲಿನ ಲೋಪವನ್ನು ತೋರಿಸುತ್ತದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಇಲ್ಲಿ ಜನರ ಜವಾಬ್ದಾರಿ ಸಹ ಇದೆ. ಸರ್ಕಾರದ ಯೋಜನೆಗಳು ಯಾರನ್ನು ಉದ್ದೇಶಿಸಿ ರೂಪಿಸಲಾಗಿರುತ್ತದೋ ಅವರನ್ನು ಮಾತ್ರ ತಲುಪಬೇಕೆ ವಿನಾ, ಈ ಯಾದಿಯಿಂದ ಹೊರಗಿರುವವರಿಗೆ ದಕ್ಕಿದರೆ ಪ್ರಯೋಜನವೇನು ಬಂತು? ಸರ್ಕಾರದ ಹಣ ಎಂದರೆ ಜನರ ಹಣವೇ. ಹೀಗಾಗಿ ದುರುಪಯೋಗ ಆಗದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net