ಸಂಪಾದಕೀಯ | ಬೆಲೆ ಏರಿಕೆಯ ಭಾರ; ಜನರ ಬವಣೆ ನೀಗಿಸಿ

Editorial
Published on

ಆರ್ಥಿಕತೆ ದೃಷ್ಟಿಯಲ್ಲಿ ಎಲ್ಲ ಕಡೆಗಳಿಂದ ನಕಾರಾತ್ಮಕ ಬೆಳವಣಿಗೆಗಳದ್ದೇ ಸುದ್ದಿ. ಮುಂದಿನ ವರ್ಷದಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕಳವಳಕಾರಿಯಾಗುವ ಆತಂಕ ತಲೆದೋರಿದೆ ಎಂದು ರಾಜ್ಯದ ಆರ್ಥಿಕ ಸಮೀಕ್ಷೆ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ (2022-2026) ವರದಿಗಳಲ್ಲಿ ಎಚ್ಚರಿಸಲಾಗಿದೆ. ರಾಜಸ್ವ ಹೆಚ್ಚಿಸಿ, ಸಾಲ ಕಡಿಮೆ ಮಾಡುವ ಹಾಗೂ ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಕಡೆಯೂ ವರದಿ ಬೊಟ್ಟು ಮಾಡಿದೆ. ಕರೊನಾದ ಕರಾಳತೆ ಕಡಿಮೆಯಾಯಿತು, ಇನ್ನೇನು ಆರ್ಥಿಕತೆ ಹಳಿಗೆ ಮರಳುತ್ತದೆ ಎಂಬುವಷ್ಟರಲ್ಲಿ ರಷ್ಯಾ-ಯೂಕ್ರೇನ್ ನಡುವಿನ ಯುದ್ಧ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ. ಈಗಾಗಲೇ ಜನಸಾಮಾನ್ಯರ ತಿಂಗಳ ಬಜೆಟ್ ಹದಗೆಟ್ಟಿದ್ದು, ಆದಾಯ ಹೆಚ್ಚದೆ, ಜಾಸ್ತಿಯಾಗಿರುವ ಖರ್ಚುಗಳನ್ನು ನಿಭಾಯಿಸಲು ಪರದಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲೇ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಜನರು ಸಿದ್ಧರಾಗಬೇಕಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್​ಗೆ 118 ಡಾಲರ್ ತಲುಪಿದೆ. ಇದು 125 ಡಾಲರ್ ಮುಟ್ಟುವ ಸಾಧ್ಯತೆಯೂ ಇದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 15ರಿಂದ 22 ರೂ. ಏರಿಕೆಯಾಗುವುದು ಬಹುತೇಕ ನಿಶ್ಚಿತ ಎನ್ನುತ್ತಿವೆ ಮೂಲಗಳು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದರೆ ಅದರಿಂದ ಸರಕು ಸಾಗಣೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಅಭಿವೃದ್ಧಿಯ ವೇಗವನ್ನು ತಗ್ಗಿಸುತ್ತದೆ. ಕಟ್ಟಡ ನಿರ್ಮಾಣ ಸಾಮಗ್ರಿ, ಅಡುಗೆಎಣ್ಣೆಯಂಥ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ಜನರು ಹೈರಾಣಾಗಿದ್ದಾರೆ. ಇಂಥದ್ದರಲ್ಲಿ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹ ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ಕನಿಷ್ಠ ಸ್ಲ್ಯಾಬ್ ದರವನ್ನು ಶೇಕಡ ಎಂಟಕ್ಕೆ ಏರಿಸುವ ಚಿಂತನೆ ನಡೆಸಿದೆ. ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಭವವಿದೆ. ಹೀಗಾದಲ್ಲಿ ಖಾದ್ಯತೈಲ, ಸಕ್ಕರೆ ಸೇರಿದಂತೆ ಹಲವು ಜೀವನಾವಶ್ಯಕ ವಸ್ತುಗಳು ಇನ್ನಷ್ಟು ತುಟ್ಟಿಯಾಗಲಿವೆ.

ರಾಜ್ಯ, ಕೇಂದ್ರ ಸರ್ಕಾರಗಳಿಗೆ ತೆರಿಗೆ ಸಂಗ್ರಹ ಹೆಚ್ಚಿಸುವ ಚಿಂತೆ. ಆದರೆ, ಜನಸಾಮಾನ್ಯರಿಗೆ ಬದುಕು ನಡೆಸುವುದು ಹೇಗೆ ಎಂಬ ಯಕ್ಷಪ್ರಶ್ನೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಅನಗತ್ಯ ವೆಚ್ಚಗಳನ್ನು ತಡೆಯಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಭಿವೃದ್ಧಿಯ ಇತರ ಪ್ರಕ್ರಿಯೆಗಳು ವ್ಯರ್ಥವಾದಂತೆಯೇ ಸರಿ. ಜನಸಾಮಾನ್ಯರು ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದ್ದು, ಕುಟುಂಬ ಹಂತದಲ್ಲೂ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವ ಯೋಜನೆ ಹಾಕಿಕೊಳ್ಳಬೇಕಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸಲು, ಪೆಟ್ರೋಲ್, ಡೀಸೆಲ್ ವಾಹನಗಳಿಂದ ಇಲೆಕ್ಟ್ರಾನಿಕ್ ವಾಹನಗಳಿಗೆ ಬದಲಾಗಲು ಇದು ಸಕಾಲ. ಬೆಲೆ ಏರಿಕೆಯ ಸಮಸ್ಯೆ ಈ ಹಿಂದೆಯೂ ರಾಜಕೀಯ ಪಕ್ಷಗಳಿಗೆ ಮರೆಯಲಾರದಂಥ ಪಾಠ ಕಲಿಸಿದೆ. ಹಾಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವೇಚನಾಯುಕ್ತ ಮತ್ತು ಜನರ ಹಿತವನ್ನು ಮೊದಲ ಆದ್ಯತೆಯಾಗಿಸಿಕೊಂಡು ನಿರ್ಣಯ ಕೈಗೊಳ್ಳುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net