

ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅತ್ಯಾಕರ್ಷಕ ಉಚಿತ ಭರವಸೆಗಳ ಈಡೇರಿಕೆಗೆ ಮುಂದಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆಯುಂಟಾಗುವುದರಿಂದಾಗಿ ಈ ಉಚಿತ ಗ್ಯಾರಂಟಿಗಳ ಅನುಷ್ಠಾನದ ಬಗೆಗೆ ಮೊದಲಿನಿಂದಲೂ ಅಪನಂಬಿಕೆಗಳು ವ್ಯಕ್ತವಾಗುತ್ತಲೇ ಬಂದಿದ್ದವು.
ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಗ್ಯಾರಂಟಿಗಳ ಜಾರಿಗೆ ನಿರ್ಧಾರ ಕೈಗೊಂಡರೂ ಫಲಾನುಭವಿಗಳ ಆಯ್ಕೆಯಲ್ಲಿನ ಗೊಂದಲಗಳು, ವಿಧಿಸಲಾಗುತ್ತಿರುವ ಷರತ್ತುಗಳ ಬಗೆಗೆ ಅನುಮಾನ, ಅಸಮಾಧಾನ, ಗೊಂದಲಗಳು ಮುಂದುವರಿದಿವೆ. 200 ಯುನಿಟ್ ಉಚಿತ ವಿದ್ಯುತ್ ಕುರಿತಂತೆ ಹೊರಡಿಸಿರುವ ಮಾರ್ಗಸೂಚಿಗಳು ಗೊಂದಲಕ್ಕೆ ಕಾರಣವಾಗಿವೆ. ಒಂದು ಕಟ್ಟಡದಲ್ಲಿ ಹಲವಾರು ಮನೆಗಳಿದ್ದರೂ ಅವುಗಳಲ್ಲಿ ಒಂದಕ್ಕೆ ಮಾತ್ರ ಗೃಹಜ್ಯೋತಿ ಯೋಜನೆ ಅನ್ವಯವಾಗುತ್ತದೆ ಎಂಬುದು ಇಂಧನ ಇಲಾಖೆಯ ಮಾರ್ಗಸೂಚಿಯಲ್ಲಿದೆ. ಮನೆ ಮಾಲೀಕರಿಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆಯೇ? ಬಾಡಿಗೆದಾರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಬಾಡಿಗೆದಾರರಿಗೂ ಈ ಸವಲತ್ತು ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರಾದರೂ ಮಾರ್ಗಸೂಚಿ ಹೊರಬೀಳಬೇಕಿದೆ.
ಇನ್ನು, 200 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರು ಪೂರ್ಣ ಬಿಲ್ ಮೊತ್ತ ಪಾವತಿಸಬೇಕಾಗುತ್ತದೆ ಎಂದಾದಲ್ಲಿ ಉಚಿತ ಎಂಬ ವಾಗ್ದಾನ ಏನಾಯಿತು ಎಂಬ ತಕರಾರುಗಳು ಕೇಳಿಬರುತ್ತಿವೆ. ಈ ನಡುವೆ ವಿದ್ಯುತ್ ದರವನ್ನು ಯುನಿಟ್ಗೆ 65 ಪೈಸೆ ಏರಿಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೊಮಾ ಪದವೀಧರರಿಗೆ ನೆರವು ನೀಡಲು ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿವೆ. 2022-23ರಲ್ಲಿ ತೇರ್ಗಡೆ ಹೊಂದಿದ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳವರೆಗೆ ಮಾಸಿಕ 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೆರವನ್ನು ನೀಡಲಾಗುವುದು. ಈ ಅವಧಿಯಲ್ಲಿ ಉದ್ಯೋಗ ಸಿಕ್ಕರೆ ನಿಧಿ ನೆರವು ಸ್ಥಗಿತವಾಗಲಿದೆ. 2022-23ರ ಅವಧಿಯವರು ಮಾತ್ರ ನಿರುದ್ಯೋಗಿಗಳೆ? ಉಳಿದವರನ್ನೂ ಪರಿಗಣಿಸಬೇಕಿತ್ತು ಎಂಬ ವಾದ ಕೇಳಿಬಂದಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ವಿಷಯದಲ್ಲಿ ಹೆಚ್ಚಿನ ಷರತ್ತುಗಳು, ನಿರ್ಬಂಧಗಳನ್ನು ವಿಧಿಸಿಲ್ಲವಾದ್ದರಿಂದ ಗೊಂದಲಗಳು ಕಂಡುಬಂದಿಲ್ಲ. ಮನೆಯೊಡತಿಗೆ ಮಾಸಿಕ 2000 ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆಯು ಆಗಸ್ಟ್ 15ರಿಂದ ಜಾರಿಯಾಗುವ ನಿರೀಕ್ಷೆ ಇದೆ. ಆದರೆ, ಮನೆಯೊಡತಿ ಯಾರು? ಅತ್ತೆಗೆ ಸಿಕ್ಕರೆ ಸೊಸೆಗೇಕೆ ಸಿಗದು? ಎಂಬ ಅನುಮಾನಗಳು, ಗೊಂದಲಗಳು ಈಗಾಗಲೇ ಹರಿದಾಡುತ್ತಿವೆ. ಅನ್ನ ಭಾಗ್ಯ ಅಕ್ಕಿ ಯೋಜನೆಯಡಿ ಬಿಪಿಎಸ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ನೀಡುವ ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಆರಂಭಿಕ ಹಂತದಲ್ಲಿ ವಿಧಿಸಲಾಗುವ ಷರತ್ತುಗಳು, ಫಲಾನುಭವಿಗಳ ಆಯ್ಕೆಯ ಮಾನದಂಡಗಳಲ್ಲಿ ಅಸ್ಪಷ್ಟತೆಗಳು ಇರುವುದು ಸಹಜ. ಆದರೆ, ಗೊಂದಲಗಳನ್ನು ನಿವಾರಿಸುವುದು ಹಾಗೂ ಭರವಸೆಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸುವುದು ಸರ್ಕಾರದ ಹೊಣೆಗಾರಿಕೆ.