ಆತ್ಮನಿರ್ಭರತೆಯ ಪ್ರತೀಕ; ಎಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ಲೋಕಾರ್ಪಣೆ

Editorial
Published on

ಭಾರತೀಯ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಈಗ ಎರಡು ಮಹತ್ವದ ಸಂಗತಿಗಳು ಏಕಕಾಲದಲ್ಲಿ ಘಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕೆ ಘಟಕವನ್ನು ಉದ್ಘಾಟಿಸಿದ್ದಾರೆ. ಈ ಘಟಕಕ್ಕೆ ಮೋದಿ ಅವರೇ 2016ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇದೇ ವೇಳೆ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ತೇಜಸ್ ಯುದ್ಧವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿದವು. ತುಮಕೂರಿನ ಹೆಲಿಕಾಪ್ಟರ್‌ ಉತ್ಪಾದಿಸುವ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದ ಕಂಪನಿಯಾದ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಸೇರಿದ್ದಾಗಿದೆ. ಐಎನ್‌ಎಸ್ ವಿಕ್ರಾಂತ್ ನೌಕೆಯಲ್ಲಿ ಹಾರಾಟ ನಡೆಸಿದ ಯುದ್ಧ ವಿಮಾನ ತೇಜಸ್ ಅನ್ನು ಸ್ವದೇಶಿಯವಾಗಿ ನಿರ್ಮಿಸಿದ್ದು ಕೂಡ ಎಚ್‌ಎಎಲ್ ಎಂಬುದು ವಿಶೇಷ. ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ (ಸ್ವಾಯತ್ತತೆ) ಸಾಧಿಸುವತ್ತ ಭಾರತವು ದಾಪುಗಾಲು ಹಾಕುತ್ತಿದೆ ಎಂಬುದನ್ನು ಈ ಎರಡೂ ಘಟನೆಗಳು ಸೂಚಿಸುತ್ತವೆ. ಅಲ್ಲದೆ, ವಿದೇಶಗಳಿಂದ ಯುದ್ಧವಿಮಾನಗಳನ್ನು ಖರೀದಿಸುವ ಮೂಲಕ ಎಚ್‌ಎಎಲ್ ಮತತ್ವವನ್ನು ಕಡಿಮೆ ಮಾಡಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಈ ಬೆಳವಣಿಗೆಗಳು ತಳ್ಳಿಹಾಕುವಂತಿವೆ.

ತುಮಕೂರಿನಲ್ಲಿ ಈಗ ಲೋಕಾರ್ಪಣೆಯಾದ ಗ್ರೀನ್‌ಫೀಲ್ ಹೆಲಿಕಾಪ್ಟರ್ ಕಾರ್ಖಾನೆಯು ಲಘು ಉಪಯುಕ್ತ ಮತ್ತು ಬಹುಪಾತ್ರದ ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ. ಹಗುರ ಯುದ್ಧವಿಮಾನಗಳನ್ನು ಕೂಡ ಮುಂದೆ ಉತ್ಪಾದಿಸಲಿದೆ. ಆರಂಭದಲ್ಲಿ, ಕಾರ್ಖಾನೆಯು ವರ್ಷಕ್ಕೆ 30 ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ. ಇದನ್ನು ಹಂತ ಹಂತವಾಗಿ 90ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮುಂದಿನ ಎರಡು ದಶಕಗಳಲ್ಲಿ ಈ ಕಾರ್ಖಾನೆಯು 1000 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ನಿರೀಕ್ಷೆಯಿದೆ.

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ನ ನೌಕಾ ಆವೃತ್ತಿಯು ಸಾಗರ ಪ್ರಯೋಗಗಳ ಭಾಗವಾಗಿ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯ ಫೈಟ್ ಡೆಕ್‌ನಲ್ಲಿ ಯಶಸ್ವಿಯಾಗಿ ಇಳಿದಿರುವುದು ಭಾರತೀಯ ನೌಕಾಪಡೆಯು ಆತ್ಮನಿರ್ಭರವಾಗುವತ್ತ ಸಾಧಿಸಿದ ಐತಿಹಾಸಿಕ ಮೈಲುಗಲ್ಲಾಗಿದೆ. 7 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ತೂಕದ ಐಎನ್ ಎಸ್ ವಿಕ್ರಾಂತ್ ಯುದ್ಧನೌಕೆಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ನೌಕೆ ಇದಾಗಿದೆ. ಸ್ವದೇಶಿ ನಿರ್ಮಿತ ಯುದ್ಧನೌಕೆಯಲ್ಲಿ ಸ್ವದೇಶಿ ನಿರ್ಮಿತ ಯುದ್ಧವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿರುವುದು ಆತ್ಮನಿರ್ಭರತೆ ಸಾಕಾರಗೊಳ್ಳುತ್ತಿರುವುದಕ್ಕೆ ಬಹುದೊಡ್ಡ ಉದಾಹರಣೆ ಎನ್ನಬಹುದಾಗಿದೆ. ಸ್ವದೇಶಿ ನೌಕೆ, ವಿಮಾನಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಭಾರತಕ್ಕಿರುವ ಸಾಮರ್ಥ್ಯವನ್ನು ಇದು ಪ್ರದರ್ಶಿಸಿದೆ. ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಚ್‌ಎಎಲ್ ಪಾತ್ರ ಮೊದಲಿನಿಂದಲೂ ಮಹತ್ವದ್ದು ಹಾಗೂ ನಿರ್ವಿವಾದವಾಗಿದೆ. ಫ್ರಾನ್ಸ್‌ನ ರಫೆಲ್ ಫೈಟರ್ ಜೆಟ್ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರವು ಎಚ್‌ಎಎಲ್ ಅನ್ನು ನಾಶ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತುಮಕೂರಿನ ಎಚ್‌ಎಎಲ್ ಕಾರ್ಖಾನೆ ಉತ್ತರ ಎಂಬಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net