

ಕರೊನಾ ಸೋಂಕಿನ ಹೊಸ ತಳಿ ಒಮಿಕ್ರಾನ್ ಕಾಲಿಟ್ಟ ಬಳಿಕ ಅನೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶೈಕ್ಷಣಿಕ ವರ್ಷದ ಮುಂದಿನ ದಿನಗಳು ಹೇಗೆ ಎಂಬ ಜಿಜ್ಞಾಸೆಯೂ ಕಾಡುತ್ತಿದೆ. ಈ ನಡುವೆ, ‘ಕೋವಿಡ್ ತೀವ್ರತೆ ಆಧರಿಸಿ ಶಾಲೆ-ಕಾಲೇಜು ಬಂದ್ ಕುರಿತು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ‘ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆ ಬಗ್ಗೆ ತಜ್ಞರಿಂದ ವರದಿ ಪಡೆಯುತ್ತಿದ್ದೇವೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದೂ ತಿಳಿಸಿದ್ದಾರೆ.
ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದು ಹೌದಾದರೂ, ಅದರ ತೀವ್ರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅಲ್ಲದೆ, ಒಟ್ಟಾರೆ ಕೋವಿಡ್ ಪ್ರಕರಣಗಳನ್ನು ಗಮನಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಿರುವಾಗ, ಶಾಲೆ-ಕಾಲೇಜುಗಳ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಆತುರಾತುರದಲ್ಲಿ ತೆಗೆದುಕೊಳ್ಳಬಾರದು.
ಹೆಚ್ಚುಕಡಿಮೆ ಎರಡು ವರ್ಷದ ಬಳಿಕ ಶಾಲೆ-ಕಾಲೇಜುಗಳು ಆರಂಭಗೊಂಡಿವೆ. ಕರೊನಾ ಕಾಲದಲ್ಲಿ ಆನ್ಲೈನ್ ತರಗತಿಗಳು ನಡೆಸಲಾಯಿತಾದರೂ, ಗ್ರಾಮೀಣ ಪ್ರದೇಶದ ಮಕ್ಕಳು ಸೇರಿದಂತೆ ಹೆಚ್ಚಿನ ವಿದ್ಯಾರ್ಥಿಗಳು ಅದರಿಂದ ವಂಚಿತರಾದರು. ಅಲ್ಲದೆ, ಆನ್ಲೈನ್ ತರಗತಿಗಳು ದೀರ್ಘಾವಧಿಗೆ ಪೂರಕವಲ್ಲ ಎಂಬುದು ಸ್ಪಷ್ಟಗೊಂಡಿತು. ಮಕ್ಕಳು ಹಲವು ಅಡ್ಡಪರಿಣಾಮಗಳನ್ನು ಎದುರಿಸಿದರಲ್ಲದೆ, ಒಂಟಿತನ, ಚಟುವಟಿಕೆಗಳ ಕೊರತೆಯ ಪರಿಣಾಮ ಖಿನ್ನತೆಯಂಥ ಸಮಸ್ಯೆಯನ್ನೂ ಎದುರಿಸಿದರು. ಹಾಗಾಗಿ, ಕರೊನಾ ಅಬ್ಬರ ಇಳಿಯುತ್ತಿದ್ದಂತೆಯೇ ‘ಶಾಲೆಗಳನ್ನು ಬೇಗನೆ ಆರಂಭಿಸಿ’ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳೇ ಆಗ್ರಹಿಸಿದ್ದುಂಟು. ಶಾಲೆ-ಕಾಲೇಜುಗಳಲ್ಲಿ ಹಾಜರಾತಿ ಸಾಮಾನ್ಯ ಸ್ಥಿತಿಗೆ ಬಂದಿರುವುದು, ಭೌತಿಕ ತರಗತಿಗಳೇ ಕಲಿಕೆಗೆ ಹೆಚ್ಚು ಸೂಕ್ತ ಎಂಬುದಕ್ಕೆ ನಿದರ್ಶನ.
ರಾಜ್ಯದಲ್ಲಿ ಈಗ ಶಾಲೆ-ಕಾಲೇಜುಗಳನ್ನು ಮುಚ್ಚುವಂಥ ಸ್ಥಿತಿಯಿಲ್ಲ ಎಂದು ತಜ್ಞರ ವರದಿಯೂ ಹೇಳಿದೆ. ಸೋಂಕು ಹರಡುವಿಕೆ ಕುರಿತಂತೆ ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳು ಅಗತ್ಯವೇನೋ ಹೌದು. ಆದರೆ, ಈ ವಿಷಯದಲ್ಲಿ ಅನಗತ್ಯ ಆತಂಕ ಬೇಡ. ಮಕ್ಕಳು ಈಗಷ್ಟೇ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕಲಿಕೆ, ಗ್ರಹಿಕೆ, ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಗಳು ಹಳಿಗೆ ಮರಳುತ್ತಿವೆ. ಇಂಥ ಹೊತ್ತಲ್ಲಿ ಆತುರದಲ್ಲಿ ಶಾಲೆ-ಕಾಲೇಜುಗಳನ್ನು ಬಂದ್ ಮಾಡಿದರೆ, ಅದರಿಂದ ವಿದ್ಯಾರ್ಥಿಗಳ, ಶೈಕ್ಷಣಿಕ ವರ್ಷದ ಹಿತಕ್ಕೆ ಮಾರಕ ಎಂಬ ವಾಸ್ತವವನ್ನು ಮನಗಾಣಬೇಕು. ಎರಡು ವರ್ಷದಲ್ಲಿ ಮಕ್ಕಳು ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ; ಪಾಲಕರು ಕೂಡ. ಅದೆಷ್ಟೋ ಮಕ್ಕಳು ಏಕಾಗ್ರತೆ ಕಳೆದುಕೊಂಡು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದೆಲ್ಲ ಸರಿಯಾಗಬೇಕಾದರೆ ನಿಯಮಿತವಾಗಿ ತರಗತಿಗಳು ನಡೆಯಬೇಕು. ಜನವರಿ ಅಥವಾ ಫೆಬ್ರವರಿ ಹೊತ್ತಿಗೆ ಕರೊನಾದ ಮೂರನೇ ಅಲೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಕರಣಗಳ ಸಂಖ್ಯೆ ತೀರಾ ಜಾಸ್ತಿಯಾಗಿ, ಮೂರನೇ ಅಲೆ ಪ್ರವೇಶಿಸಿದರೆ ಆಗ ಸುರಕ್ಷತೆ ದೃಷ್ಟಿಯಿಂದ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಳಿಸುವುದು ಅನಿವಾರ್ಯವಾಗುತ್ತದೆ. ಈಗಲೇ ಅಂಥ ನಿರ್ಧಾರ ತಳೆಯುವುದು ಬೇಡ. ಮಕ್ಕಳ ಮನೋವಿಕಾಸ ಶೈಕ್ಷಣಿಕ ಚಟುವಟಿಕೆಗಳಿಂದಲೇ ಸಾಧ್ಯ ಎಂಬುದನ್ನು ಮರೆಯದಿರೋಣ.