ಶಾಲೆ ಆರಂಭದ ಉತ್ಸಾಹ; ಎಚ್ಚರಿಕೆಯೂ ಅಗತ್ಯ..

Editorial
Published on

ಲಾಕ್​ಡೌನ್ ಮುಗಿದು ಎಲ್ಲ ರಂಗಗಳು ಸಾಮಾನ್ಯ ಸ್ಥಿತಿಗೆ ಮರಳಿರುವಾಗ ಶಾಲೆಗಳ ಆರಂಭ ಯಾವಾಗ ಎಂಬ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಿತ್ತು. ಈ ನಡುವೆ ಕರೊನಾ ಮೂರನೇ ಅಲೆಯ ಆತಂಕ ತಲೆದೋರಿದ್ದರಿಂದ ಶೈಕ್ಷಣಿಕ ರಂಗದಲ್ಲಿ ಮತ್ತೆ ಕಳವಳ ಕಾಣಿಸಿಕೊಂಡು, ಮುಂದಿನ ದಿನಗಳ ಬಗ್ಗೆ ಆತಂಕ ಸೃಷ್ಟಿಸಿರುವುದು ಸುಳ್ಳಲ್ಲ. ಕರೊನಾ ಸೋಂಕು ಪ್ರಸರಣ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿಯಿಂದಲೇ ಜಾರಿಯಾಗಿದೆ. ಹಾಗೆಯೇ ಶಾಲೆಗಳನ್ನು ಹಂತ-ಹಂತವಾಗಿ ತೆರೆಯುವ ನಿರ್ಧಾರಕ್ಕೆ ಬರಲಾಗಿದೆ. ತಜ್ಞರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ 9, 10ನೇ ತರಗತಿ ಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು ಆಗಸ್ಟ್ 23ರಿಂದ ಆರಂಭಿಸಲು ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ. ‘ವಿದ್ಯಾರ್ಥಿಗಳ ದಟ್ಟಣೆ, ಗುಂಪುಗೂಡುವುದನ್ನು ತಡೆಯಲೆಂದು ದಿನ ಬಿಟ್ಟು ದಿನ ತರಗತಿ ನಡೆಸಲು ಸೂಚಿಸಿದ್ದು, ವಿಸõತ ಕಾರ್ಯವಿಧಾನವನ್ನು ಪ್ರಕಟಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಂತರ ಕರೊನಾ ಪರಿಸ್ಥಿತಿ ಅವಲೋಕಿಸಿ ಪ್ರಾಥಮಿಕ ಶಾಲೆಗಳು ಹಾಗೂ 6 ರಿಂದ 8ನೇ ತರಗತಿ ಶಾಲೆಗಳನ್ನು ತೆರೆಯುವ ಬಗ್ಗೆ ಆಗಸ್ಟ್ ಅಂತ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಉನ್ನತಮಟ್ಟದ ಸಭೆ ಸಮ್ಮತಿಸಿದೆ.

ಮಧ್ಯದಲ್ಲಿ ಸ್ವಲ್ಪ ಅವಧಿ ಹೊರತುಪಡಿಸಿದರೆ ಕಳೆದ ವರ್ಷದಿಂದ ಮಕ್ಕಳು ಮನೆಯಲ್ಲೇ ಇದ್ದಾರೆ. ಕಲಿಕೆ ಸ್ತಬ್ಧಗೊಂಡಿದೆ. ಆನ್​ಲೈನ್ ಪಾಠಕ್ಕಿಂತ ನೇರ ಪಾಠವೇ ಉತ್ತಮ ಎಂದು ಬಹುತೇಕರು ಹೇಳುತ್ತಿದ್ದಾರೆ. ದಿನಚರಿಯ ವ್ಯತ್ಯಾಸ ಮತ್ತು ಒಂಟಿತನದಿಂದ ಮಕ್ಕಳು ಖಿನ್ನತೆಗೆ ಜಾರಿದ, ಅನಾರೋಗ್ಯಕ್ಕೆ ತುತ್ತಾದ ಘಟನೆಗಳೂ ನಡೆದವು. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ತೆರಳುವ ಮನೆಗಳಲ್ಲಂತೂ ಮಕ್ಕಳು ದಿಕ್ಕುಕಾಣದಂತೆ ಆದರು. ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯ. ಶಾಲೆ ಇಲ್ಲದೆ ಕೆಲವು ಕಡೆ ಮಕ್ಕಳು ಅಡ್ಡದಾರಿ ಹಿಡಿದರೆ, ಮತ್ತೆ ಹಲವೆಡೆ ಪಾಲಕರೇ ಕೂಲಿಗೆ ಕಳುಹಿಸಿದರು. ರಾಜ್ಯದ ಶಾಲಾ ಮಕ್ಕಳ ಪೈಕಿ ಶೇಕಡ 70ರಷ್ಟು ಮಾತ್ರ ಪಾಠ ಕೇಳುತ್ತಿದ್ದು, ಶೇ.30 ಮಕ್ಕಳು ಹಣ ಸಂಪಾದನೆಯಲ್ಲಿ ನಿರತರಾಗಿದ್ದಾರೆ. ಶೇ.45 ವಿದ್ಯಾರ್ಥಿಗಳು ಮೊಬೈಲ್ ಗೀಳು ಅಂಟಿಸಿಕೊಂಡಿದ್ದಾರೆ. ಆನ್​ಲೈನ್ ಪಾಠದ ನೆಪದಲ್ಲಿ ಆಟದಲ್ಲಿ ತೊಡಗಿದ್ದಾರೆ ಎಂದು ಡಿಎಸ್​ಇಆರ್​ಟಿ ಸಮೀಕ್ಷೆ ವರದಿ ಹೇಳಿದೆ. ಹಾಗಾಗಿಯೇ, ಪ್ರೌಢಶಾಲೆಗಳ ಜತೆ ಪ್ರಾಥಮಿಕ ಶಾಲಾ ತರಗತಿಗಳನ್ನೂ ಆರಂಭಿಸುವಂತೆ ತಜ್ಞರು, ಪಾಲಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಶಾಲೆಗಳ ಆರಂಭ ಅವಶ್ಯ ಮತ್ತು ಅನಿವಾರ್ಯವಾಗಿದೆ. ದೀರ್ಘಾವಧಿಯ ಕಾಲ ಮಕ್ಕಳು ಕಲಿಕೆಯಿಂದ ವಂಚಿತರಾದರೆ ಶೈಕ್ಷಣಿಕ ಬದುಕು ಹಿನ್ನಡೆ ಕಾಣುವಂತಾಗುತ್ತದೆ. ಕರೊನಾದ ಅಪಾಯ ಮುಗಿದಿಲ್ಲ, ಮೂರನೇ ಅಲೆಯ ಸಾಧ್ಯತೆಯೂ ಇದೆ. ಪರಿಣಾಮ, ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ತಜ್ಞರ ಸಲಹೆ ಮೇರೆಗೆ ಸೂಕ್ತ ಸುರಕ್ಷಾ ಕ್ರಮಗಳನ್ನು ಅಳವಡಿಸಿ ಶಾಲೆಗಳನ್ನು ಆರಂಭಿಸುವುದು ಅನಿವಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net