

ಶಿಕ್ಷಣದ ಗುಣಮಟ್ಟ ಸುಧಾರಣೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಹಲವು ಆಶ್ವಾಸನೆ ನೀಡುತ್ತ ಬಂದಿದೆ. ಮೂಲಸೌಕರ್ಯದ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದ್ದರೂ, ಬೋಧನೆಯ ಗುಣಮಟ್ಟ ಮಾತ್ರ ನಿರೀಕ್ಷೆಯಷ್ಟು ಸುಧಾರಣೆ ಆಗದಿರುವುದು ಕಹಿವಾಸ್ತವ. ಸರ್ಕಾರಿ ಶಾಲೆಗಳಿಗೆ ಒಳ್ಳೆಯ ಕಟ್ಟಡ, ಕ್ರೀಡಾಂಗಣ, ಕುಡಿಯುವ ನೀರು ಸೇರಿ ಹಲವು ಸೌಲಭ್ಯಗಳು ಒದಗಿಸಲಾಗುತ್ತಿದ್ದರೂ, ಮಕ್ಕಳು ಕಲಿಕೆಯಲ್ಲಿ ಹಿಂದುಳಿದು ಬಿಡುತ್ತಾರೆ ಎಂಬ ಅತಂಕದಿಂದ ಪಾಲಕರು ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಅದರಲ್ಲೂ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿರುವುದಕ್ಕೆ ಪ್ರಮುಖ ಕಾರಣ ಪರಿಣಾಮಕಾರಿ ಬೋಧನೆ ಇಲ್ಲದಿರುವುದು. ಹಾಗಾಗಿ, ಮಕ್ಕಳು ಇಂದಿನ ಸ್ಪರ್ಧಾಜಗತ್ತಿನ ಪ್ರಮುಖ ಕೌಶಲಗಳಿಂದ ವಂಚಿತರಾಗಿ ಬಿಡುತ್ತಾರೆ. ಮಾತ್ರವಲ್ಲ, ವಿಷಯಜ್ಞಾನದಿಂದಲೂ ವಂಚಿತರಾಗಬೇಕಾಗುತ್ತದೆ.
ಬಜೆಟ್ನಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ವಿಷಯ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಇದು ಉತ್ತಮ ಉಪಕ್ರಮವೇ. ಆದರೆ, ಈ ತರಗತಿಗಳಿಗೆ ಶಿಕ್ಷಕರನ್ನು ತರಬೇತುಗೊಳಿಸಲಾಗಿದೆಯೇ? ಅವರು ಮಕ್ಕಳನ್ನು ಹೇಗೆ ತಯಾರು ಮಾಡುತ್ತಾರೆ, ಯಾವ ಬಗೆಯಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತಾರೆ ಎಂಬೆಲ್ಲ ಪ್ರಶ್ನೆಗಳೂ ಇವೆ. ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಮಾತೃಭಾಷೆ/ರಾಜ್ಯಭಾಷೆಯಲ್ಲಿ ಕಲಿಯುವುದು ಅವಶ್ಯವೇ. ಜತೆಗೇ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಥಾನ ಪಡೆದುಕೊಳ್ಳಲು ಇಂಗ್ಲಿಷಿನ ಅರಿವು ಬೇಕೆಬೇಕು ಎಂಬುದು ಬಹುತೇಕ ಪಾಲಕರ ಅಭಿಪ್ರಾಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷನ್ನೂ ಅಷ್ಟೇ ಚೆನ್ನಾಗಿ ಹೇಳಿಕೊಟ್ಟರೆ ಮಕ್ಕಳಿಗೆ ಸಮಸ್ಯೆಯೇ ಇರುವುದಿಲ್ಲ ಎಂಬ ವಾದವು ತಳ್ಳಿಹಾಕುವಂಥದ್ದೇನಲ್ಲ. ಈ ನಡುವೆ, ಪದವಿ ಹಂತದ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಪ್ರಸ್ತುತ ರಾಜ್ಯದ 47 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 3800 ಶಾಲೆಗಳ ದಾಖಲಾತಿ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 562 ಶಾಲೆಗಳಲ್ಲಿ ಒಬ್ಬೊಬ್ಬರೇ ವಿದ್ಯಾರ್ಥಿಗಳಿದ್ದಾರೆ ಎಂಬ ಅಂಕಿಸಂಖ್ಯೆಗಳೇ ಸರ್ಕಾರಿ ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ ವ್ಯಾಪಕವಾಗಿ ಸುಧಾರಿಸಬೇಕಿದೆ ಎಂಬುದನ್ನು ಸಾರಿ ಹೇಳುತ್ತವೆ. ಅದೇನಿದ್ದರೂ, ಸರ್ಕಾರಿ ಶಾಲೆಗಳನ್ನು ಉಳಿಯಬೇಕು, ಬೆಳೆಯಬೇಕು ಎಂಬ ಆಶಯ ಸಾಕಾರಗೊಳ್ಳಲು ಸರ್ಕಾರ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕು.