

ವಿಶ್ವ ಪರಿಸರ ದಿನವಾದ ಜೂನ್ 5ರಂದು, ಪ್ರಧಾನಿ ನರೇಂದ್ರ ಮೋದಿ ಅವರು ‘ಪರಿಸರಪೂರಕ ಜೀವನಶೈಲಿ’ (ಲೈಫ್) ಎಂಬ ಜಾಗತಿಕ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ನಮ್ಮ ಗ್ರಹಕ್ಕೆ ಹೊಂದಾಣಿಕೆಯಾಗುವಂತೆ, ಅದಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂಬುದು ಈ ಆಂದೋಲನದ ದೃಷ್ಟಿಕೋನವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಒಂದು ಭೂಮಿ, ಹಲವು ಪ್ರಯತ್ನಗಳು’ ಎಂಬ ಘೋಷವಾಕ್ಯದೊಂದಿಗೆ, ಪರಿಸರ ಉತ್ತಮಗೊಳಿಸುವ ಎಲ್ಲ ಕ್ರಮಗಳಿಗೆ ಭಾರತ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ಇಂತಹ ಘೋಷಣೆಗಳು ಪರಿಸರ ದಿನಕ್ಕೆ ಸೀಮಿತವಾಗದೆ ನಿತ್ಯಜೀವನದ ಭಾಗವಾಗಬೇಕು. ಮಾನವ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಭೂಮಿಯಲ್ಲಿರುವ ವಸ್ತುಗಳನ್ನು ಮನಸೋಇಚ್ಛೆ ಬಳಸಿಕೊಳ್ಳುವುದು ಹೆಚ್ಚಾಗತೊಡಗಿದಂತೆ ಪರಿಸರ ಹಾನಿಯೂ ಅಧಿಕವಾಗತೊಡಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಹೌದಾದರೂ, ಆಗಿರುವ ಹಾನಿಯನ್ನು ಸರಿಪಡಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಪ್ಯಾರಿಸ್ ಒಡಂಬಡಿಕೆ ಒಂದು ಸಣ್ಣ ಆಶಾಕಿರಣ. ಆದರೆ ಎಲ್ಲ ಸಹಿದಾರ ದೇಶಗಳು ತಂತಮ್ಮ ಹೊಣೆಗಾರಿಕೆಗಳನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ಜಾಗತಿಕವಾಗಿ ತುಸುವಾದರೂ ಪರಿಣಾಮ ಕಂಡುಬರಬಹುದು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಪರಿಸರವನ್ನು ಪೂಜ್ಯಭಾವನೆಯೊಂದಿಗೆ ಕಾಣಲಾಗುತ್ತಿದೆ. ಆದರೆ, ನಗರೀಕರಣ ಹೆಚ್ಚಾದಂತೆ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳ ಮೂಲಕ ಪರಿಸರಕ್ಕೆ ಪೆಟ್ಟು ಬಿದ್ದಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಪರಿಸರದಲ್ಲಿನ ವಸ್ತುಗಳ ಬಳಕೆ ವ್ಯಾಪಕವಾಗತೊಡಗಿದೆ. ಆಹಾರಕ್ಕಾಗಿ ಹೆಚ್ಚಿನ ಜಮೀನು, ವಸತಿಗಾಗಿ ಇನ್ನಷ್ಟು ಭೂಮಿ ಅತಿಕ್ರಮಣದಿಂದಾಗಿ ಅರಣ್ಯ ಪ್ರದೇಶ ಕುಂಠಿತಗೊಂಡಿದೆ. ದೇಶದಲ್ಲಿ ಈಗ ಶೇ. 21ರಷ್ಟು ಮಾತ್ರ ಅರಣ್ಯ ಭೂಮಿ ಉಳಿದುಕೊಂಡಿದೆ. ರಾಷ್ಟ್ರೀಯ ಅರಣ್ಯ ನೀತಿಯ ಅನುಸಾರ ಅರಣ್ಯ ಪ್ರದೇಶವು ಕನಿಷ್ಠ ಶೇ. 33 ಇರಬೇಕು. ಅಟಲ್ ಭೂಜಲ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಜಲ ಜೀವನ ಮಿಷನ್, ನಗರ ವನ ಯೋಜನೆ, ರಾಷ್ಟ್ರೀಯ ಶುದ್ಧವಾಯು ಕಾರ್ಯಕ್ರಮ ಹೀಗೆ ಹತ್ತುಹಲವು ಉಪಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ; ಆಯಾ ರಾಜ್ಯ ಸರ್ಕಾರಗಳೂ ತಮ್ಮದೇ ಆದ ಯೋಜನೆಗಳನ್ನು ಹೊಂದಿವೆ.
ಆದರೆ, ಮಾನವನ ಅಗತ್ಯಗಳಿಗಾಗಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪರಿಸರ ಸಂರಕ್ಷಣೆ ಸಂಗತಿಯು ಬಹುತೇಕವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವಂತಹವು. ಇವೆರಡರ ನಡುವೆ ಸಮತೋಲನ ಸಾಧಿಸುವುದು ಸವಾಲಿನ ಸಂಗತಿಯಾಗಿದೆ. ಪುನರ್ ಬಳಕೆ ಸಾಧ್ಯವಿರುವ ವಸ್ತುಗಳನ್ನು ಬಿಸಾಡದೆ ಮರುಬಳಕೆ ಮಾಡುವುದು, ಸುಲಭದಲ್ಲಿ ಮಣ್ಣಾಗುವ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸುವುದು, ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ- ಈ ರೀತಿಯ ಕ್ರಮಗಳ ಮೂಲಕ ಸಾರ್ವಜನಿಕರೂ ಪರಿಸರಪೂರಕ ಹೆಜ್ಜೆಯಿಡಬಹುದು. ಸರ್ಕಾರ ಮಾತ್ರವೊಂದರಿಂದಲೇ ಪರಿಸರ ಸಂರಕ್ಷಣೆ ಸಾಧ್ಯವಾಗದು. ಪ್ರತಿಯೊಬ್ಬ ನಾಗರಿಕರು ಈ ನಿಟ್ಟಿನಲ್ಲಿ ನಿರಂತರವಾಗಿ ಆಲೋಚಿಸಬೇಕಾಗಿದೆ. ಪ್ರಧಾನಿ ಮೋದಿ ಪ್ರತಿಪಾದಿಸಿರುವಂತೆ ನಿತ್ಯಬದುಕಿನಲ್ಲಿ ಪರಿಸರಕ್ಕೆ ಪೂರಕವಾದ ಜೀವನಶೈಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ.