ಸಂಪಾದಕೀಯ | ವೆಚ್ಚ ಕಡಿತದ ಮಾತಷ್ಟೇ ಸಾಲದು; ನಿಯಮಬಾಹಿರ ಮುಂಬಡ್ತಿಯಿಂದ ಅನಗತ್ಯ ಹೊರೆ

Editorial
Published on

ಸರ್ಕಾರದ ಕೆಲಸಗಳು ಸುಗಮವಾಗಿ ನೆರವೇರಲು ಅಧಿಕಾರಶಾಹಿಯ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗೂ ಅಗತ್ಯ ಪ್ರಮಾಣದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ಅಗತ್ಯ ಇರುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಜನಸಾಮಾನ್ಯರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ, ಸರಳವಾಗಿ, ಪಾರದರ್ಶಕವಾಗಿ ಸಿಗುವಂತಾಗಲು ಅಧಿಕಾರಶಾಹಿಯ ಪಾತ್ರ ಬಹುಮುಖ್ಯವಾದುದು. ಆದರೆ ಅಧಿಕ ವೇತನ ಇರುವ, ಉನ್ನತ ಹಂತದ ಹುದ್ದೆಗಳನ್ನು ವಿವೇಚನೆ ಇಲ್ಲದೆ ಸೃಷ್ಟಿಸಿ, ನಿಯಮದ ಅಂಕುಶ ಇಲ್ಲದೆಯೇ ಮುಂಬಡ್ತಿಯನ್ನೂ ಕೊಟ್ಟರೆ ಅದರಿಂದ ಸರ್ಕಾರದ ಬೊಕ್ಕಸದ ಮೇಲೆ ಅನಗತ್ಯ ಹೊರೆಬೀಳುತ್ತದೆಯಲ್ಲದೆ, ತೆರಿಗೆದಾರರ ಹಣವೂ ಪೋಲಾದಂತಾಗುತ್ತದೆ. ಸರ್ಕಾರದ ಇಲಾಖೆಗಳು ಹಾಗೂ ಯೋಜನೆಗಳಲ್ಲಿ ಮುಖ್ಯ ಇಂಜಿನಿಯರ್ ಮತ್ತು ಪ್ರಧಾನ ಇಂಜಿನಿಯರ್ ಹುದ್ದೆಗಳನ್ನು ಬೇಕಾಬಿಟ್ಟಿಯಾಗಿ ಸೃಷ್ಟಿಸಿ ಕಾನೂನುಬಾಹಿರವಾಗಿ ‘ಮುಂಬಡ್ತಿ’ ಕೊಟ್ಟಿರುವ ವಿಚಾರದ ಹಿನ್ನೆಲೆಯಲ್ಲಿ ಈ ಮಾತು ಹೇಳಬೇಕಾಗಿ ಬಂದಿದೆ.

ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಯೋಜನೆಗಳಲ್ಲಿ 150ಕ್ಕೂ ಅಧಿಕ ಮುಖ್ಯ ಇಂಜಿನಿಯರ್ ಹಾಗೂ ಪ್ರಧಾನ ಇಂಜಿನಿಯರ್​ಗಳಿದ್ದಾರೆ. ಸರ್ಕಾರದ ಯಾವುದೇ ಇಲಾಖೆಗೆ ನೇಮಕ ಹಾಗೂ ಮುಂಬಡ್ತಿಗೆ ನಿಯಮ ಇರುತ್ತದೆ. ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮ ಇರುತ್ತದೆ. ಆದರೆ ಈ ಪ್ರಸಂಗದಲ್ಲಿ ನಿಯಮಬಾಹಿರವಾಗಿ ಮುಂಬಡ್ತಿ ನೀಡಲಾಗಿದೆಯೆನ್ನುವುದು ಚರ್ಚಾರ್ಹ ವಿಚಾರ. ಈ ನೇಮಕಗಳಲ್ಲಿ ವೃಂದ ಮತ್ತು ನೇಮಕ ನಿಯಮ ರೂಪಿಸಿ, ಸಕ್ಷಮ ಪ್ರಾಧಿಕಾರದಿಂದ ಕ್ಯಾಬಿನೆಟ್ ಅನುಮತಿ ಪಡೆದಿಲ್ಲ ಮತ್ತು ಹೊಸ ಯೋಜನೆಗಳಿಗೆ ಅಗತ್ಯವಿಲ್ಲದಿದ್ದರೂ ಮುಖ್ಯ/ಪ್ರಧಾನ ಇಂಜಿನಿಯರ್ ಹುದ್ದೆಗಳ ಸೃಷ್ಟಿಯಾಗಿದೆ ಎಂಬುದು ಗಂಭೀರ ಸಂಗತಿ. ಈ ಹುದ್ದೆಗಳ ಅಧಿಕಾರವ್ಯಾಪ್ತಿ ಹೆಚ್ಚಿನದಾಗಿದ್ದು, ನೂರಾರು, ಸಾವಿರಾರು ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮತಿ ನೀಡಬಹುದಾಗಿರುತ್ತದೆ. ಹೀಗೆ ಅನುಮೋದನೆ ನೀಡುವಾಗ ಸರ್ಕಾರಿ ವ್ಯವಸ್ಥೆಯಲ್ಲಿ ಏನು ನಡೆಯುತ್ತದೆ ಎಂಬುದು ಬಹಿರಂಗ ಗುಟ್ಟು. ಹೀಗಾಗಿಯೇ ಇಂಥ ಹುದ್ದೆಗಳಿಗೆ ಪೈಪೋಟಿ ಹೆಚ್ಚು. ಇಲ್ಲಿಗೆ ಬರಲು ಸಹ ಭಾರಿ ಮೊತ್ತದ ಹಣ ವ್ಯಯಿಸಲಾಗುತ್ತದೆಯಂತೆ.

ಹೀಗೆ ಅನಗತ್ಯ ಹುದ್ದೆಗಳಿಂದಾಗಿ ವೇತನ, ವಸತಿ, ವಾಹನ ವ್ಯವಸ್ಥೆ, ಕಚೇರಿ ನಿರ್ವಹಣಾ ವೆಚ್ಚ ಸೇರಿ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ಹೊರೆಯಾಗುತ್ತದೆ. ಎರಡು ವರ್ಷಗಳಿಂದ ಕರೊನಾ ಕಾರಣದಿಂದಾಗಿ ಸರ್ಕಾರಗಳ ಆದಾಯ ಸಹ ಕುಸಿದಿದೆ. ತೆರಿಗೆ ಸಂಗ್ರಹ ಈಗ ಚೇತರಿಕೆಯಾಗುತ್ತಿದ್ದರೂ, ಹಣಕಾಸು ಸಂಕಷ್ಟದ ತೂಗುಗತ್ತಿ ಇದ್ದೇ ಇದೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಕೆಲ ಇಲಾಖೆಗಳಿಗೆ ಬಜೆಟ್​ನಲ್ಲಿ ನೀಡಿದ ಅನುದಾನವನ್ನು ಸಹ ತಗ್ಗಿಸಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತಿದೆ. ಇಂಥ ಸಂದರ್ಭದಲ್ಲಿ ವೆಚ್ಚ ಕಡಿತ ಸರ್ಕಾರದ ಆದ್ಯತೆಯಾಗಬೇಕು. ಹಾಲಿ ಸರ್ಕಾರ ಅನಗತ್ಯ ವೆಚ್ಚ ಕಡಿತ ಕುರಿತು ಅನೇಕ ಕ್ರಮಗಳನ್ನು ಪ್ರಕಟಿಸಿದೆ. ಆದರೆ ಅವು ಸರಿಯಾಗಿ ಅನುಷ್ಠಾನಕ್ಕೆ ಬರಬೇಕು. ಸರ್ಕಾರದ ಎಲ್ಲ ಹಂತಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಕೆಲಸಕಾರ್ಯಗಳನ್ನು ನೆರವೇರಿಸುವತ್ತ ಗಮನ ನೀಡಬೇಕು. ತಡೆಯಲಾಗದಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕು ಎಂದು ಯಾರೂ ಹೇಳುವುದಿಲ್ಲ. ಆದರೆ ಅನಗತ್ಯ ಹುದ್ದೆಗಳನ್ನು ಸೃಷ್ಟಿಸುವ ಪರಿಪಾಠ ಸರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net