ತ್ವರಿತ ಸೇವೆ ಅಗತ್ಯ; ಅಧಿಕಾರಶಾಹಿಗೆ ಇಚ್ಛಾಶಕ್ತಿ, ಬದ್ಧತೆ ಬೇಕು

Sakala
Published on

ಜನರು ಸರ್ಕಾರದ ಇಲಾಖೆಗಳಿಗೆ ಮನವಿ ಸಲ್ಲಿಸಿದಾಗ ಅದನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಅಗತ್ಯ. ಮನವಿಯನ್ನು ಹಾಗೇ ಇಟ್ಟುಕೊಂಡು ಕುಳಿತುಕೊಳ್ಳಲಾಗದು. ಹೀಗೆ ವಿಳಂಬವಾದಲ್ಲಿ ಜನರು ನ್ಯಾಯಾಲಯದ ಕದ ತಟ್ಟುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿರುವುದು ಅಧಿಕಾರಶಾಹಿಯ ಕಾರ್ಯನಿರ್ವಹಣೆಗೆ ದಿಕ್ಸೂಚಿಯಾಗಬಲ್ಲಂಥ ಮಾತು. ರಸ್ತೆ ಅಗಲೀಕರಣವನ್ನು ಸರಿಯಾಗಿ ಮಾಡದ್ದರಿಂದ ನಾಲೆಯಲ್ಲಿ ನೀರು ತುಂಬಿ ಅದು ತಮ್ಮ ಕಾಫಿ ತೋಟಕ್ಕೆ ನುಗ್ಗಿ, ಫಸಲು ಹಾಳು ಮಾಡಿದೆ. ಹೀಗಾಗಿ, ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿ, ಆನಂತರ ಕಾನೂನು ಪ್ರಕಾರ ನೋಟಿಸ್ ಕೂಡ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಈ ರೀತಿ ಸೂಚನೆ ನೀಡಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿ ಇಲಾಖೆಗಳಿಗೆ ಮನವಿ ಸಲ್ಲಿಸಿದಾಗ ಆ ಬಗ್ಗೆ ಕಾಲಮಿತಿಯಲ್ಲಿ ಪ್ರತಿಕ್ರಿಯೆ ಬರುವುದಿಲ್ಲ; ಕಚೇರಿಗೆ ಖುದ್ದಾಗಿ ಹೋದರೂ ನಾನಾ ಸಬೂಬು ಹೇಳುತ್ತಾರೆ ಎಂಬುದು ಬಹುದಿನಗಳಿಂದ ಇರುವ ದೂರು. ಈ ಸಮಸ್ಯೆಗೆ ಪರಿಹಾರ ಎಂಬಂತೆ ಕರ್ನಾಟಕದಲ್ಲಿ ಸಕಾಲ ಯೋಜನೆ ದಶಕದ ಹಿಂದೇ ಜಾರಿಯಾಗಿದ್ದು ಗಮನಾರ್ಹ. ಸರ್ಕಾರದ ವಿವಿಧ ಇಲಾಖೆಗಳ ಸುಮಾರು 900 ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸುವುದು ಈ ಯೋಜನೆಯ ವಿಶೇಷ. ಜನರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದಾಗಿದೆ. ಇನ್ನೊಂದೆಡೆ, ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ವಿಲೇವಾರಿಗಿರುವ ಕಾಲಾವಕಾಶವನ್ನು ಕೇಂದ್ರ ಸರ್ಕಾರ ಈಚೆಗೆ ಕಡಿತಗೊಳಿಸಿದ್ದು ಇಲ್ಲಿ ಉಲ್ಲೇಖನೀಯ.

ಈ ಮೊದಲಿದ್ದ 45 ದಿನಗಳ ಕಾಲಾವಕಾಶವನ್ನು 30 ದಿನಗಳಿಗೆ ಇಳಿಸಲಾಗಿದೆ. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ (ಡಿಎಆರ್​ಪಿಜಿ) ಈ ಬಗ್ಗೆ ಮಾಹಿತಿ ನೀಡಿದೆ. ಜನರಿಗೆ ಸಕಾಲದಲ್ಲಿ ಸೇವೆ ಸಿಗುವ ನಿಟ್ಟಿನಲ್ಲಿ ಇದು ಉತ್ತಮ ನಡೆ. ಸರ್ಕಾರದ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಜನರಿಗೆ ಸುಗಮವಾಗಿ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳು ಆಗಿವೆಯೆಂಬುದು ನಿಜ. ಹೀಗಿದ್ದರೂ, ಸೇವೆ ಸರಳೀಕರಣಕ್ಕೆ ಮತ್ತು ಉನ್ನತೀಕರಣಕ್ಕೆ ಅವಕಾಶ ಇದ್ದೇ ಇದೆ. ಇದಕ್ಕೆ ಇಚ್ಛಾಶಕ್ತಿ ಹಾಗೂ ಕಳಕಳಿ ಅಗತ್ಯ. ಸರ್ಕಾರಿ ವ್ಯವಸ್ಥೆ ಕುರಿತು ಜನರಲ್ಲಿ ಒಂದು ಬಗೆಯ ನಕಾರಾತ್ಮಕ ಅಭಿಪ್ರಾಯ ಇದೆ; ಈ ಇಮೇಜನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಚಿಂತನೆ, ಕಾರ್ಯ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net