ಅನುಷ್ಠಾನ ಮುಖ್ಯ; ಸುಧಾರಣಾ ಕ್ರಮಗಳು, ವಿನಾಯ್ತಿಗಳಿಂದ ಜನಸಾಮಾನ್ಯರಿಗೆ ಅನುಕೂಲ

Editorial
Published on

ಎರಡು ವರ್ಷಗಳ ಕಾಲ ಬಿಟ್ಟುಬಿಡದೆ ಕಾಡಿದ, ಜನಸಾಮಾನ್ಯರನ್ನು ಹೈರಾಣುಗೊಳಿಸಿದ ಕರೊನಾ ಮಹಾಮಾರಿಯ ಸಂಕಷ್ಟ ಮುಗಿಯಿತು ಎಂಬುವಷ್ಟರಲ್ಲಿ ಬೆಲೆ ಏರಿಕೆಯ ಭಾರ ಜನರನ್ನು ಕಂಗೆಡಿಸಿದೆ. ಪೆಟ್ರೋಲ್, ಡೀಸೆಲ್, ಖಾದ್ಯತೈಲ, ಎಲ್​ಪಿಜಿ ಸಿಲಿಂಡರ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ರಾಜ್ಯ, ಕೇಂದ್ರ ಸರ್ಕಾರಗಳಿಗೇನೋ ತೆರಿಗೆ ಸಂಗ್ರಹದಲ್ಲಿ ಏರಿಕೆ ಆಗುತ್ತಿದೆ. ಆದರೆ, ಆದಾಯ ಹೆಚ್ಚದೆ ಬೆಲೆ ಏರಿಕೆಯ ಭಾರವನ್ನು ಜನರು ಹೇಗೆ ತಾನೇ ಸಹಿಸಿಕೊಳ್ಳಬೇಕು? ಇಂಥ ಸಂದರ್ಭಗಳಲ್ಲೇ ಬಡವರು ಇನ್ನೂ ಹೆಚ್ಚು ಬಡವರಾಗೋದು. ಆರ್ಥಿಕ ಅಸಮಾನತೆಯ ಪರಿಧಿ ಹೆಚ್ಚಳವಾಗಿ, ವಿವಿಧ ಸಂಕಷ್ಟಗಳು ಕಾಣಿಸಿಕೊಳ್ಳುವುದು. ಅಂತಾರಾಷ್ಟ್ರೀಯ ಬೆಳವಣಿಗೆಗಳು, ಇತರ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಸದ್ಯಕ್ಕಂತೂ ಬೆಲೆ ಏರಿಕೆಯ ವೇಗಕ್ಕೆ ಕಡಿವಾಣ ಹಾಕುವುದು ದುಸ್ತರವೇ. ಹೀಗಿರುವಾಗ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಸರ್ಕಾರದ ಕರ್ತವ್ಯವೂ ಹೌದು.

ರಾಜ್ಯ ಸರ್ಕಾರ ಮಂಗಳವಾರದಂದು ಈ ನಿಟ್ಟಿನಲ್ಲಿ ಕೆಲ ಮಹತ್ವದ ಘೋಷಣೆಗಳನ್ನು ಮಾಡಿರುವುದು ಸಮಾಧಾನಕರ ಸಂಗತಿ. ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹಾಗೂ ಎಸ್​ಸಿ/ಎಸ್​ಟಿ ಸಮುದಾಯದವರಿಗೆ ಮನೆನಿರ್ವಣಕ್ಕಾಗಿ ನೀಡುವ ಸಬ್ಸಿಡಿ ಮೊತ್ತವನ್ನು 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದ ಕುಟೀರ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ ಪ್ರಮಾಣವನ್ನು 40 ರಿಂದ 75 ಯೂನಿಟ್​ಗಳಿಗೆ ಹೆಚ್ಚಿಸಲಾಗಿದೆ. ಉಚಿತ ವಿದ್ಯುತ್ ಪೂರೈಕೆಯ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಭೂಒಡೆತನ ಮತ್ತು ಮನೆನಿರ್ವಣದ ಕನಸು ಹೊತ್ತಿರುವ ಪರಿಶಿಷ್ಟ ಜಾತಿ/ಪಂಗಡದವರಿಗೆ ಇದರಿಂದ ಅನುಕೂಲವಾಗಲಿದೆ. ಸ್ವಾವಲಂಬಿ ಜೀವನ ನಡೆಸಲು ಬಯಸುವ ಎಸ್​ಸಿ, ಎಸ್​ಟಿ ಸಮುದಾಯದ ಯುವಜನತೆಗೆ ನೆರವಾಗಲೆಂದು ಪ್ರತಿ ತಾಲೂಕಿಗೊಂದು ‘ಬಾಬು ಜಗಜೀವನ್​ರಾಂ ಸ್ವಯಂ ಉದ್ಯೋಗ ಯೋಜನೆ’ಯೂ ಪ್ರಾರಂಭಿಸಲಾಗುತ್ತಿದೆ.

ಮತ್ತೊಂದೆಡೆ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 3 ತುಟ್ಟಿಭತ್ಯೆ ಹೆಚ್ಚಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ತನ್ನ ನೌಕರರಿಗೆ ಶೇ.2.75 ತುಟ್ಟಿಭತ್ಯೆ ಹೆಚ್ಚಿಸಿದೆ. ಜನವರಿ 1ರಿಂದಲೇ ಪೂರ್ವಾನ್ವಯವಾಗಿ ಈ ಹೆಚ್ಚಳ ಅನ್ವಯವಾಗಲಿದೆ. ಈ ಎಲ್ಲ ಕ್ರಮಗಳಿಂದ ಶ್ರೀಸಾಮಾನ್ಯರು ನಾಳೆಗಳನ್ನು ಆಶಾವಾದದಿಂದ ನೋಡಲು, ಬೆಲೆಯೇರಿಕೆ ಎದುರಿಸುತ್ತ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಆದರೆ, ಇಂಥ ಯೋಜನೆಗಳು, ಘೋಷಣೆಗಳು ಬರೀ ಕಡತಕ್ಕೆ, ಪ್ರಚಾರಕ್ಕೆ ಸೀಮಿತವಾಗಿ ಉಳಿಯಬಾರದು. ಗೃಹನಿರ್ವಣದಂಥ ಸಬ್ಸಿಡಿಯನ್ನು ಪಡೆಯಲು ಜನರು ತೀವ್ರ ಪರದಾಡಬೇಕಾದ ಪ್ರಸಂಗವಿದೆ. ಅಲ್ಲದೆ, ಅರ್ಹ ಫಲಾನುಭವಿಗಳು ಇದರಿಂದ ವಂಚಿತರಾಗುವುದೂ ಇದೆ. ಹಾಗಾದಲ್ಲಿ, ಇಂಥ ಘೋಷಣೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರ್ಕಾರ ಪ್ರಸಕ್ತ ಯೋಜನೆಗಳ ಸೂಕ್ತ ಅನುಷ್ಠಾನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಅಡ್ಡಿಆತಂಕಗಳನ್ನು ನಿವಾರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net