ಕುತಂತ್ರಕ್ಕೆ ಕಡಿವಾಣ: ಲೋನ್ ಆ್ಯಪ್​ಗಳಿಂದ ದತ್ತಾಂಶ ದುರ್ಬಳಕೆ ತಡೆಯಲು ಕ್ರಮ

rbi
Published on

ಹಣಕಾಸು ಸಂಸ್ಥೆಗಳ ಗ್ರಾಹಕರು ಹಾಗೂ ಸಾಲ ಪಡೆಯುವವರಿಗೆ ಸಂಬಂಧಿಸಿದ ದತ್ತಾಂಶಗಳ (ಡಾಟಾ) ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲಗಾರರು ಹಾಗೂ ಗ್ರಾಹಕರ ನಿರ್ದಿಷ್ಟ ಹಾಗೂ ಅಗತ್ಯ ಮಾಹಿತಿ ಹೊರತುಪಡಿಸಿ ಬೇರಾವುದೇ ದತ್ತಾಂಶಗಳನ್ನು ಸಂಗ್ರಹಿಸಿ ಇಡಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್ಲ ಬ್ಯಾಂಕ್​ಗಳು, ಸಾಲ ಸೇವಾ ಪ್ರವರ್ತಕರು ಹಾಗೂ ಡಿಜಿಟಲ್ ಲೆಂಡಿಂಗ್ ಆಪ್​ಗಳಿಗೂ ಈ ಮಾರ್ಗಸೂಚಿಗಳು ಅನ್ವಯವಾಗುತ್ತವೆ ಎಂದೂ ಆರ್​ಬಿಐ ಸ್ಪಷ್ಟಪಡಿಸಿದೆ. ಸಾಲಗಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹೊರತುಪಡಿಸಿ ಅನಗತ್ಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಹಾಗೂ ಅನುಮತಿಸಲಾದ ಪ್ರಾಥಮಿಕ ಮಾಹಿತಿಯನ್ನು

ಭಾರತದಲ್ಲೇ ನಿರ್ವಹಿಸುವ ಕಂಪ್ಯೂಟರ್ ಸರ್ವರ್​ನಲ್ಲಿ ಮಾತ್ರ ಸಂಗ್ರಹಿಸಬೇಕೆಂದು ಅದು ಹೇಳಿರುವುದು ಗ್ರಾಹಕರ ಹಿತರಕ್ಷಣೆ ಹಾಗೂ ದೇಶದ ಭದ್ರತೆ ದೃಷ್ಟಿಯಿಂದ ಸೂಕ್ತ ಕ್ರಮವಾಗಿದೆ. ಅದರಲ್ಲೂ, ಡಿಜಿಟಲ್ ಲೆಂಡಿಂಗ್ ಆಪ್​ಗಳಿಗೂ ಈ ಮಾರ್ಗಸೂಚಿಗಳನ್ನು ಅನ್ವಯಿಸಿರುವುದು ಸಕಾಲಿಕವಾಗಿದೆ. ಡಿಜಿಟಲ್ ಲೆಂಡಿಂಗ್ ಆಪ್​ಗಳು ಮೊಬೈಲ್​ಫೋನ್ ಮೂಲಕ ಕಾರ್ಯನಿರ್ವಹಣೆ ಮಾಡುವುದರಿಂದ ಗ್ರಾಹಕರ ಫೋನ್​ಗಳಲ್ಲಿ ಲಭ್ಯವಿರುವ ಎಲ್ಲ ಮಾಹಿತಿಗಳಿಗೆ ಕನ್ನ ಹಾಕಿ ನಂತರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬೆಳಕಿಗೆ ಬರುತ್ತಿವೆ. ಮನಿ ಲೋನ್ ಆಪ್​ಗಳು ಲಕ್ಷಾಂತರ ರೂಪಾಯಿ ಸಾಲವನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನೀಡುವುದಾಗಿ ಆಮಿಷವೊಡ್ಡಿ ಗ್ರಾಹಕರನ್ನು ಮೊದಲು ಸೆಳೆಯುತ್ತವೆ. ನಂತರ ಹೆಚ್ಚಿನ ಬಡ್ಡಿ ದರ ವಿಧಿಸಿ ಗ್ರಾಹಕರನ್ನು ಸುಲಿಯುತ್ತವೆ. ಒಂದು ವೇಳೆ ಗ್ರಾಹಕರು ಹೆಚ್ಚಿನ ಬಡ್ಡಿ ದರ ನೀಡದಿದ್ದರೆ ಹಾಗೂ ಇಎಂಐಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ಅವರ ಮೊಬೈಲ್​ಫೋನ್​ನಿಂದ ಕದ್ದ ದತ್ತಾಂಶಗಳನ್ನೇ ದುರ್ಬಳಕೆ ಮಾಡಿಕೊಂಡು ಬ್ಲಾ್ಯಕ್​ವೆುೕಲ್ ಮಾಡುವ ಕುತಂತ್ರ ಅನುಸರಿಸುತ್ತವೆ. ಮೊಬೈಲ್​ಫೋನ್ ಆಪ್​ಗಳ ಮೂಲಕ ಸಾಲ ನೀಡಿ ವಂಚಿಸುವಲ್ಲಿ ಅನೇಕ ಚೀನಿ ಕಂಪನಿಗಳು ತೊಡಗಿಕೊಂಡಿರುವುದನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಈ ಚೀನಿ ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಗ್ರಾಹಕರ ಮೊಬೈಲ್​ಫೋನ್​ನಿಂದ ಕದ್ದ ದತ್ತಾಂಶ ಮತ್ತು ಮಾಹಿತಿಗಳನ್ನು ಮಾರಿಕೊಂಡಿದ್ದಾರೆ.

2021ರಲ್ಲಿ ಅಧ್ಯಯನ ನಡೆಸಿದ ಆರ್​ಬಿಐ ಸಮಿತಿಯೊಂದು, ಸಾಲ ನೀಡುವ 600 ಅಕ್ರಮ ಆಪ್​ಗಳನ್ನು ಪತ್ತೆ ಮಾಡಿತ್ತು. ಡಿಜಿಟಲ್ ಸಾಲ ಒದಗಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದೂ ಗುರುತಿಸಿತ್ತು. ಇಂತಹ ಆಪ್​ಗಳ ಮೇಲೆ ಕಣ್ಗಾವಲು ಇಡಬೇಕೆಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದುಹಾಕಿದ್ದರೂ ಲೋನ್ ಆಪ್​ಗಳ ಹಾವಳಿ ಮುಂದುವರಿದಿದೆ. ಸಾಲ ಕೊಟ್ಟು ಕಿರá-ಕುಳ ನೀಡá-ತ್ತಿದ್ದ ಚೀನಾ ಮೂಲದ ಆಪ್ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿನ ಆರು ಕಡೆ ದಾಳಿ ನಡೆಸಿ, 17 ಕೋಟಿ ರೂ. ಜಪ್ತಿ ಮಾಡಿರುವುದು ಇದಕ್ಕೊಂದು ತಾಜಾ ನಿದರ್ಶನವಾಗಿದೆ. ಹೀಗಾಗಿಯೇ ಕಿರುಕುಳ ನೀಡಲು ಗ್ರಾಹಕರ ದತ್ತಾಂಶ ಬಳಸಿಕೊಳ್ಳುವ ಕುತಂತ್ರ ತಡೆಯಲು ಆರ್​ಬಿಐ ಕ್ರಮ ಕೈಗೊಂಡಿದೆ. ಸಾಲ ನೀಡುವ ಸಂಸ್ಥೆಗಳ ಬಗ್ಗೆ ಜನರು ಅರಿವು ಹೊಂದಿ ಸಾರಾಸಾರ ವಿಚಾರಿಸಿಯೇ ಮುಂದುವರಿಯುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net