

ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಆರ್ಥಿಕ ಸಂಕಷ್ಟದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹೂಡಿಕೆಯ ಭರವಸೆ ವ್ಯಕ್ತವಾಗುವುದರೊಂದಿಗೆ ರಾಜ್ಯ ಸರ್ಕಾರದ ನಿರೀಕ್ಷೆಗೂ ಮೀರಿ ಸಮಾವೇಶ ಯಶಸ್ಸು ಕಂಡಿದೆ. ಈ ಯೋಜನೆಗಳ ಅನುಷ್ಠಾನವೂ ಯಶಸ್ವಿಯಾಗಿ ಪೂರ್ಣಪ್ರಮಾಣದಲ್ಲಿ ಹೂಡಿಕೆ ಹರಿದುಬರಲಿದೆ ಎಂಬ ನಿರೀಕ್ಷೆಯೂ ಚಿಗುರೊಡೆದಿದೆ. ಸಮಾವೇಶದ ಮೂಲಕ ಒಟ್ಟು 5 ಲಕ್ಷ ಕೋಟಿ ರೂಪಾಯಿ ಮೊತ್ತದ ಹೂಡಿಕೆ ರಾಜ್ಯಕ್ಕೆ ಹರಿದುಬರಬಹುದು ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನಿರೀಕ್ಷಿಸಿದ್ದರು. ಆದರೆ, ಸಮಾವೇಶದ ಮೊದಲ ದಿನದ ಹೂಡಿಕೆ ಒಪ್ಪಂದಗಳ ಯಾದಿ ಅಂತಿಮಗೊಂಡಾಗ ಅದರ ಒಟ್ಟು ಮೊತ್ತ 7.6 ಲಕ್ಷ ಕೋಟಿ ರೂಪಾಯಿಗೆ ಮುಟ್ಟಿ ಅಚ್ಚರಿ ಮೂಡಿಸಿತು.
ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ರೂಪದಲ್ಲಿ ಸಮಾವೇಶಕ್ಕೆ ಚಾಲನೆ ನೀಡಿ, ಕರ್ನಾಟಕಕ್ಕೆ ಇರುವ ಅಪೂರ್ವ ಅವಕಾಶ, ಸ್ಪರ್ಧಾತ್ಮಕತೆಯ ಸಾಮರ್ಥ್ಯ ಬಣ್ಣಿಸಿದ್ದಲ್ಲದೆ, ಸುಲಲಿತ ವಹಿವಾಟು, ವಿದೇಶಿ ನೇರ ಹೂಡಿಕೆ ಆಕರ್ಷಣೆ ಸೇರಿದಂತೆ ಅನೇಕ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕವು ವಿಶ್ವದ ಅನೇಕ ರಾಷ್ಟ್ರಗಳಿಗೂ ಸ್ಪರ್ಧೆಯೊಡ್ಡುತ್ತಿದೆ ಎಂದು ಶ್ಲಾಘಿಸಿದ್ದರು. ಈ ಶ್ಲಾಘನೆಗೆ ಪುಷ್ಟಿ ನೀಡುವ ರೀತಿಯಲ್ಲಿಯೇ ಕೈಗಾರಿಕೋದ್ಯಮಿಗಳು ಕೂಡ ಬಂಡವಾಳ ಹೂಡಿಕೆಯ ವಾಗ್ದಾನ ಮಾಡಿದ್ದಾರೆ. ಬುಧವಾರ ಅಂತಿಮಗೊಂಡ ಒಪ್ಪಂದಗಳ ಪ್ರಕಾರ ಹೆಚ್ಚಿನ ಪ್ರಮಾಣದ ಹೂಡಿಕೆ ಗ್ರೀನ್ ಹೈಡ್ರೋಜನ್ ವಲಯದಲ್ಲಿ ಆಗಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕೂಡ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹಣ ತೊಡಗಿಸಲಿವೆ.
ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಬೆಂಗಳೂರು ಮೊದಲಿನಿಂದಲೂ ಕಂಗೊಳಿಸುತ್ತಿದೆ. ದೇಶದ 500 ಫಾರ್ಚೂನ್ ಕಂಪನಿಗಳ ಪೈಕಿ 400 ಕರ್ನಾಟಕದಲ್ಲಿವೆ. ದೇಶದಲ್ಲಿ 100 ನವೋದ್ಯಮಗಳ (ಯೂನಿಕಾರ್ನ್) ಪೈಕಿ 40 ಕರ್ನಾಟಕದಲ್ಲಿವೆ. ಪ್ರತಿಭೆ ಮತ್ತು ತಂತ್ರಜ್ಞಾನದ ಕುರಿತು ರ್ಚಚಿಸುವಾಗಲೆಲ್ಲ ಬ್ರಾ್ಯಂಡ್ ಬೆಂಗಳೂರು ಹೆಸರು ಮುಂಚೂಣಿಯಲ್ಲೇ ಇರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕದ ಬಗೆಗೆ ಹೂಡಿಕೆದಾರರು ಹೆಚ್ಚಿನ ಒಲವು ತೋರಿದ್ದಾರೆ. ಹೂಡಿಕೆದಾರರಿಗೆ ಈಗ ಇರುವ ಉತ್ತೇಜನ, ವಿನಾಯಿತಿಗಳಲ್ಲಿ ಯಾವುದನ್ನೂ ಕಡಿತಗೊಳಿಸುವುದಿಲ್ಲ. ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸರ್ಕಾರದ ಕಡೆಯಿಂದ ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ಸಮ್ಮೇಳನದಲ್ಲಿ ನಡೆಯುವ ಹೂಡಿಕೆ ಒಪ್ಪಂದಗಳ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಮೂರು ತಿಂಗಳೊಳಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಒಪ್ಪಂದಗಳು ಕಾಗದದ ಮೇಲಷ್ಟೆ ಉಳಿಯಬಾರದು. ಹೂಡಿಕೆದಾರರು ಕೂಡ ಗಂಭೀರತೆಯಿಂದ ಯೋಜನೆಗಳ ಅನುಷ್ಠಾನಕ್ಕೆ ಕೆಲಸ ಮಾಡಬೇಕು’ ಎಂದಿದ್ದು ಸಮಂಜಸವಾಗಿದೆ. ಕೋವಿಡ್ನಿಂದ ತಲೆದೋರಿದ ಆರ್ಥಿಕ ಹಿಂಜರಿತದಿಂದಾಗಿ ರಾಜ್ಯದಲ್ಲಿಯೂ ಉದ್ಯೋಗ ನಷ್ಟ ಉಂಟಾಗಿದ್ದು, ಈಗ ಮತ್ತೆ ಆರ್ಥಿಕ ಚೇತರಿಕೆ ಕಂಡುಬರುತ್ತಿದೆ. ಉದ್ಯೋಗಗಳು ವ್ಯಾಪಕವಾಗಿ ಸೃಜನೆಯಾಗಬೇಕಾದರೆ ಕೈಗಾರಿಕೆ ಮತ್ತು ಉದ್ದಿಮೆ ವಲಯ ಬೆಳೆಯುವುದು ಅತ್ಯಗತ್ಯ. ಕೈಗಾರಿಕೋದ್ಯಮಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಾಲಮಿತಿಯಲ್ಲಿ ಒದಗಿಸುವ ಮೂಲಕ ಕರ್ನಾಟಕ ಸರ್ಕಾರ ಇನ್ನಷ್ಟು ಕೈಗಾರಿಕೆಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಭರವಸೆ ಈ ಸಮಾವೇಶದಲ್ಲಿ ವ್ಯಕ್ತವಾಗಿದೆ.