

ಕರೊನಾ ಎರಡನೇ ಅಲೆಯ ಆರ್ಭಟ ಸಮಾಜದ ಬಹುತೇಕ ರಂಗಗಳನ್ನು ಅಸ್ತವ್ಯಸ್ತಗೊಳಿಸಿದೆ. ಶೈಕ್ಷಣಿಕ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಶಾಲೆ-ಕಾಲೇಜ್ಗಳು ಬಂದ್ ಆಗಿವೆ. ಆನ್ಲೈನ್ ತರಗತಿಗಳು ಪುನರಾರಂಭಗೊಂಡಿವೆ. ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಗೊಂದಲ, ಮುಂದೇನು ಎಂಬ ಆತಂಕವೂ ಮನೆಮಾಡಿದೆ. ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದ್ದರೆ, ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. 17 ರಾಜ್ಯಗಳು ಕೂಡ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಮಹತ್ವದ ನಿರ್ಧಾರ ತಳೆದಿದೆ. ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಲಾಗಿದ್ದರೆ, ಪ್ರಥಮ ಪಿಯು ಪರೀಕ್ಷೆಯನ್ನೇ ರದ್ದುಗೊಳಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ದ್ವಿತಿಯ ಪಿಯುಗೆ ಬಡ್ತಿ ನೀಡಲು ಮತ್ತು ಬ್ರಿಡ್ಸ್ ಕೋರ್ಸ್ಗಳನ್ನು ನಡೆಸಲು ತೀರ್ವನಿಸಲಾಗಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗೆ 6,86,728 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
10, 12ನೇ ತರಗತಿ ಪರೀಕ್ಷೆಗಳು ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟವೇನೋ ನಿಜ. ಆದರೆ, ಈ ಬಾರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಕರೊನಾ ತೀವ್ರತೆ ನಡುವೆ ಪರೀಕ್ಷೆ ನಡೆಸಿ, ಏನಾದರೂ ಅಪಾಯವಾದರೆ ಎಂಬ ಆತಂಕ ಒಂದು ಕಡೆ, ಮಕ್ಕಳ ಶೈಕ್ಷಣಿಕ ಹಿತವನ್ನು ರಕ್ಷಿಸುವ ಒತ್ತಡ ಇನ್ನೊಂದೆಡೆ. ಹಾಗಾಗಿ, ಸರ್ಕಾರ ಮೊದಲು ಜೀವರಕ್ಷಣೆಗೆ ಆದ್ಯತೆ ನೀಡಿದೆ. ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಸದ್ಯಕ್ಕಂತೂ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂಬ ತಜ್ಞರ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಿರುವುದು ಸ್ವಾಗತಾರ್ಹ. ಉಪನ್ಯಾಸಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಇದು ಸಂದಿಗ್ಧ ಸಂದರ್ಭವಾಗಿರುವುದರಿಂದ ಶಿಕ್ಷಣ ಸಂಸ್ಥೆಗಳು, ಉಪನ್ಯಾಸಕರು ಮತ್ತು ಪಾಲಕರು ವಿದ್ಯಾರ್ಥಿಗಳ ತೊಳಲಾಟ ಬಗೆಹರಿಸಲು ಮುಂದಾಗಬೇಕು, ಅವರಿಗೆ ಸೂಕ್ತವಾದ ಸಲಹೆ ನೀಡುವ ಜತೆಗೆ ಸ್ಥೈರ್ಯ ತುಂಬಬೇಕು. ದ್ವಿತಿಯ ಪಿಯು ಫಲಿತಾಂಶ ಆಧಾರದ ಮೇಲೆ ವೃತ್ತಿಪರ ಕೋರ್ಸಗಳಿಗೆ ಪ್ರವೇಶಾತಿ ಆಗುವುದರಿಂದ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ಪರೀಕ್ಷೆಗೆ ಮತ್ತಷ್ಟು ಸಮಯಾವಕಾಶ ಸಿಕ್ಕಿರುವುದರಿಂದ ಏಕಾಗ್ರತೆಯಿಂದ ಓದಿನಲ್ಲಿ ತೊಡಗಿಸಿಕೊಳ್ಳಬೇಕು, ಒಳ್ಳೆಯ ಹವ್ಯಾಸಗಳೊಂದಿಗೆ ದಿನಚರಿಯನ್ನೂ ಉತ್ತಮವಾಗಿಸಿಕೊಳ್ಳಬೇಕು. ಪಠ್ಯ, ಪರೀಕ್ಷೆಗಳ ಕುರಿತಾದ ಅನುಮಾನಗಳನ್ನು ಉಪನ್ಯಾಸಕರನ್ನು ಸಂರ್ಪಸಿ ಬಗೆಹರಿಸಿಕೊಳ್ಳಬೇಕು.
ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗುತ್ತಿರುವುದು ನಿಜ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ಇದೇ ಸ್ಥಿತಿ ಇದೆ. ಪದವಿ, ಸ್ನಾತಕೋತ್ತರ ವಿಭಾಗದ ಹಲವು ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಹಾಗಾಗಿ, ಕರೊನಾ ಒಡ್ಡಿರುವ ಪರೀಕ್ಷೆಯಲ್ಲಿ ಮೊದಲು ಗೆಲ್ಲುವ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದ ಕೊಡದೆ ಹೊಸ ಕಲಿಕೆಗೆ ತೆರೆದುಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧರಾಗಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆಯೂ ಸರ್ಕಾರ ಸಮರ್ಪಕ ನಿರ್ಧಾರ ಕೈಗೊಳ್ಳುವಂತಾಗಲಿ.