ಸಂಪಾದಕೀಯ | ಅಮಾಯಕರ ರಕ್ಷಣೆ ಅಗತ್ಯ; ಸುಳ್ಳು ಆರೋಪ ಪರಿಹಾರ ಕೋರಿಕೆ

Editorial
Published on

ಸುಳ್ಳು ಆರೋಪ ಹೊರಿಸಿ 666 ದಿನಗಳ ಕಾಲ ಜೈಲಿಗೆ ಹಾಕಿದ್ದಕ್ಕಾಗಿ 10,006 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮಧ್ಯಪ್ರದೇಶ ರತ್ಲಾಮ್ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ವಿಚಿತ್ರವಾಗಿ ಗೋಚರಿಸಿದರೂ ನಿರಪರಾಧಿಯಾದರೂ ಜೈಲಿಗೆ ತಳ್ಳಲ್ಪಟ್ಟ ವ್ಯಕ್ತಿಯೊಬ್ಬರು ಹಾಗೂ ಆತನ ಕುಟುಂಬದವರು ಅನುಭವಿಸಿದ ಮಾನಸಿಕ ವೇದನೆ, ಅನುಭವಿಸಿದ ಅಪಮಾನದ ಆಕ್ರೋಶದ ಪ್ರತೀಕವಾಗಿ ಕಂಡುಬರುತ್ತದೆ. ವ್ಯವಸ್ಥೆಯಲ್ಲಿನ ಹಲವು ಪ್ರಕ್ರಿಯೆಗಳ ಕಾರಣಗಳಿಂದಾಗಿ ಅನೇಕ ಅಮಾಯಕರು ಕೂಡ ತೊಂದರೆಗೆ ಸಿಲುಕುವ, ನೋವು ಅನುಭವಿಸುವ ಪ್ರಕರಣಗಳು ವ್ಯಾಪಕವಾಗಿವೆ. ರತ್ಲಾಮ್ 35 ವರ್ಷದ ಕಾಂತಿಲಾಲ್ ಭೀಲ್ ಅವರದು ಕೂಡ ಇಂತಹ ಪ್ರಕರಣಗಳಲ್ಲೊಂದು. ಅದರಲ್ಲೂ ಅವರ ವಿರುದ್ಧದ ಆರೋಪವು ಸಾಮೂಹಿಕ ಅತ್ಯಾಚಾರದ್ದು.

ಇಂತಹ ಗಂಭೀರ ಪ್ರಕರಣಗಳಲ್ಲಿ ಜಾಮೀನು ಕೂಡ ಲಭ್ಯವಾಗದ್ದರಿಂದ ನಿರಪರಾಧಿಯಾದರೂ ಪ್ರಕರಣ ಇತ್ಯರ್ಥವಾಗಿ ಖುಲಾಸೆಯಾಗುವವರಿಗೆ ಸೆರೆಯಲ್ಲಿಯೇ ಇರಬೇಕಾಗುತ್ತದೆ. ಕಾಂತಿಲಾಲ್ ಅವರು ಎರಡು ವರ್ಷ ಕಾರಾಗೃಹ ವಾಸದ ವೇದನೆಯನ್ನು ಅನುಭವಿಸಿದ್ದಾರೆ. ಕುಟುಂಬದ ನಿರ್ವಹಣೆಗಾಗಿ ದುಡಿಯುವ ವ್ಯಕ್ತಿ ಅವರೊಬ್ಬರೇ ಆಗಿದ್ದರಿಂದ ಈ ಅವಧಿಯಲ್ಲಿ ಕುಟುಂಬವು ಆರ್ಥಿಕವಾಗಿ ಹಾಗೂ ಮಾನಸಿಕ ತೊಂದರೆ ಕೂಡ ಅನುಭವಿಸಿದೆ. ಇದರಿಂದ ನೊಂದಿರುವ ಕಾಂತಿಲಾಲ್ ಈಗ ಪರಿಹಾರ ಕೋರಿ ಸರ್ಕಾರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಭಾರತದಲ್ಲಿ ಕಾನೂನುಗಳ ದುರ್ಬಳಕೆ ಆಗುತ್ತಿರುವ ಬಗೆಗೆ ವಿವಿಧ ನ್ಯಾಯಾಲಯಗಳು ಪದೇಪದೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ, ಸುಳ್ಳು ದೂರುಗಳನ್ನು ದಾಖಲಿಸುವುದನ್ನು ತಡೆಯಲು ಸೂಕ್ತ ಕಾನೂನು ನಿಬಂಧನೆಗಳ ಅಗತ್ಯವಿದೆ ಎಂದು ಅನೇಕ ಕಾನೂನು ತಜ್ಞರು ಸಲಹೆ ನೀಡುತ್ತಲೇ ಬಂದಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಜಾರಿಗೊಳಿಸಲಾದ ಅತ್ಯಾಚಾರ ತಡೆ ಕಾನೂನುಗಳನ್ನು ಪ್ರತೀಕಾರ- ಸೇಡು ತೀರಿಸಿಕೊಳ್ಳಲು, ಕಿರುಕುಳ ನೀಡಲು ಮತ್ತು ಮದುವೆಯಾಗುವಂತೆ ಒತ್ತಾಯಿಸಲು ಆಯುಧವಾಗಿ ಕೆಲವರಿಂದ ದುರುಪಯೋಗ ಆಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದರೂ, ಈ ಸಂಬಂಧವು ಬಿರುಕುಂಟಾದಾಗ ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ. ಒತ್ತಾಯಪೂರ್ವಕವಾಗಿ ಮದುವೆಯಾಗುವ ದುರುದ್ದೇಶವೂ ಇದರಲ್ಲಿರುತ್ತದೆ ಎಂದೂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ಪಡೆದುಕೊಳ್ಳಲು ಅಮಾಯಕರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಹೊರಿಸಲಾಗಿದೆ ಎಂಬುದನ್ನು ಅವರು ಸಾಬೀತುಪಡಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ಇದು ಸಾಬೀತಾದರೆ ಸುಳ್ಳು ಆರೋಪ ಹೊರಿಸಲು ಕಾರಣರಾದವರಿಗೆ ಜೈಲು ಹಾಗೂ ದಂಡದ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ತೊಂದರೆಗೆ ಒಳಗಾದ ನಿರಪರಾಧಿಗಳು ಪರಿಹಾರ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನಿರ್ದಿಷ್ಟ ಕಾನೂನುಗಳು ಇಲ್ಲ. ಆದರೂ ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯವು ಹಣದ ರೂಪದಲ್ಲಿ ಪರಿಹಾರ ನೀಡುವಂತೆ ಆದೇಶಿಸಿರುವ ನಿದರ್ಶನಗಳಿವೆ. ಒಟ್ಟಾರೆ ನ್ಯಾಯದಾನ ಪ್ರಕ್ರಿಯೆಯಲ್ಲಿ ಸಂವೇದನಾಶೀಲತೆ ಅಗತ್ಯವನ್ನು ಕಾಂತಿಲಾಲ್ ಪ್ರಕರಣವು ಎತ್ತಿತೋರುತ್ತದೆ. ಅಮಾಯಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರ, ಪೊಲೀಸ್, ಸಾರ್ವಜನಿಕರು, ನ್ಯಾಯವ್ಯವಸ್ಥೆಯ ಭಾಗಿದಾರರು- ಹೀಗೆ ಎಲ್ಲರ ಸಹಭಾಗಿತ್ವ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net