ಮೂಲಸೌಕರ್ಯ ಹೆಚ್ಚಿಸಿ; ಸರ್ಕಾರಿ ಶಾಲೆಗಳಿಗೆ ಹೆಚ್ಚಿದ ಬೇಡಿಕೆ

Editorial
Published on

ಕರೊನಾ ಮೊದಲನೆಯ ಮತ್ತು ಎರಡನೆಯ ಅಲೆಗಳು ಒಟ್ಟಾರೆ ಜನಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿವೆ. ಈ ಪೈಕಿ ಹೆಚ್ಚಿನವು ನಕಾರಾತ್ಮಕ, ಪ್ರತಿಕೂಲ ಪರಿಣಾಮಗಳು. ಉದಾ: ಆರ್ಥಿಕ ಕಸಿತ, ಉದ್ಯೋಗ ನಷ್ಟ, ಆದಾಯ ಕಡಿತ ಇತ್ಯಾದಿ. ಇದೇ ಸಮಯದಲ್ಲಿ ವ್ಯವಸ್ಥೆಯ ಉನ್ನತೀಕರಣ ಮತ್ತು ಸುಧಾರಣೆಯ ದೃಷ್ಟಿಯಿಂದಲೂ ಕೆಲವು ಬೆಳವಣಿಗೆಗಳಾಗಿರುವುದು ಗಮನಾರ್ಹ. ಈ ಸಂದರ್ಭ ಇದಕ್ಕೆ ಅವಕಾಶ ಒದಗಿಸಿಕೊಟ್ಟಿದೆ ಎನ್ನಬಹುದು. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸಿಕ್ಕ ಅವಕಾಶ ಇದಕ್ಕೆ ಒಂದು ಉದಾಹರಣೆ. ಇಂಥದೇ ಇನ್ನೊಂದು ಬೆಳವಣಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬಂದಿದೆ. ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಹೆಚ್ಚು ಆಸಕ್ತಿ ಮತ್ತು ಒಲವು ಇಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಇದಕ್ಕೆ ಕಾರಣಗಳು ಬೇರೆ ಬೇರೆ ಇರಬಹುದಾದರೂ ಒಟ್ಟಾರೆಯಾಗಿ ಇಂಥದೊಂದು ಮನೋಭಾವ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಉಬ್ಬರವೇ ಈ ಮಾತಿಗೆ ಸಾಕ್ಷಿ. ಆದರೆ ಕರೊನಾ ಪರಿಣಾಮವೋ ಎಂಬಂತೆ, ಜನರ ಮನಸ್ಥಿತಿಯಲ್ಲಿ ಬದಲಾವಣೆ ಗೋಚರಿಸುತ್ತಿದೆ.

2021-22ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಜೂ.15ರಂದು ಆರಂಭವಾಗಿತ್ತು. ಆ.30 ಕೊನೆಯ ದಿನವಾಗಿತ್ತು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಳೆದ ವರ್ಷಕ್ಕಿಂತ 1.65 ಲಕ್ಷ ಹೆಚ್ಚಳ ಕಂಡಿರುವುದು ವಿಶೇಷ. ರಾಜ್ಯದಲ್ಲಿ 48,006 ಸರ್ಕಾರಿ ಶಾಲೆಗಳಿದ್ದು, ಈ ವರ್ಷ 45,56,131 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 22,065 ಖಾಸಗಿ ಶಾಲೆಗಳಿದ್ದು, 40,38,707 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2020-21ರಲ್ಲಿ ಅನುಕ್ರಮವಾಗಿ ಸರ್ಕಾರಿ ಶಾಲೆಗಳಲ್ಲಿ 43,90,273 ಮತ್ತು ಖಾಸಗಿ ಶಾಲೆಗಳಲ್ಲಿ 44,95,988 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಕರೊನಾ 1ನೇ ಅಲೆ ಮತ್ತು 2ನೇ ಅಲೆಯಿಂದ ಬಹುತೇಕ ಪಾಲಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಖಾಸಗಿ ಶಾಲೆಗಳಲ್ಲಿನ ದುಬಾರಿ ಶುಲ್ಕ ಕೊಟ್ಟು ಓದಿಸುವುದು ಕಷ್ಟವಾಗಿದೆ. ಹೀಗಾಗಿ ಕೆಲವರು ಖಾಸಗಿ ಶಾಲೆಗಳಿಂದ ವರ್ಗಾವಣೆ ಪತ್ರ ಪಡೆದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಇನ್ನು ಕೆಲವರು ಕರೊನಾ ಮೂರನೆಯ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗುತ್ತಿಲ್ಲ.

ಇದಲ್ಲದೆ, ಈ ವರ್ಷ ಸಹ ಭೌತಿಕ ತರಗತಿ ಅನುಮಾನವಾಗಿರುವ ಕಾರಣ ಖಾಸಗಿ ಶಾಲೆಗೆ ಶುಲ್ಕ ಏಕೆ ಪಾವತಿಸಬೇಕು? ಎಂಬುದು ಸಹ ಕೆಲವರ ಅಭಿಪ್ರಾಯ. ಸರ್ಕಾರಿ ಶಾಲೆಯಲ್ಲಾದರೆ ಪ್ರವೇಶ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಒಟ್ಟಿನಲ್ಲಿ, ಪಾಲಕರ ಮನಸ್ಥಿತಿ ಸ್ವಲ್ಪ ಬದಲಾಗಿರುವುದನ್ನು ಇದು ಸೂಚಿಸುತ್ತದೆ. ಈ ಬೆಳವಣಿಗೆಯನ್ನು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಅಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮೊದಲಿಗೆ ಹೋಲಿಸಿದರೆ ಶಾಲೆಗಳಲ್ಲಿ ಸವಲತ್ತು, ಶಿಕ್ಷಕರ ನೇಮಕ ಇತ್ಯಾದಿ ವಿಚಾರಗಳಲ್ಲಿ ಈಗ ಸರ್ಕಾರಿ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆಯಾದರೂ, ಗುಣಮಟ್ಟದ ಶಿಕ್ಷಣದ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಸಾಕಷ್ಟಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಈ ಉದ್ದೇಶಸಾಧನೆಗೆ ಸರ್ಕಾರ ಯತ್ನಿಸಲಿ. ಅಂದಾಗ, ಸರ್ಕಾರಿ ವ್ಯವಸ್ಥೆ ಬಗ್ಗೆ ಜನರ ಮನೋಭಾವ ಕಾಯಂ ಆಗಿ ಬದಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net